ವಿಮಾನದ ಶೌಚಾಲಯದಲ್ಲಿ ಪಿಸ್ತೂಲು ಬಿಟ್ಟು ಹೋದ ಮಾಜಿ ಬ್ರಿಟಿಶ್ ಪ್ರಧಾನಿ ಕ್ಯಾಮರೂನ್ ಅಂಗರಕ್ಷಕ

Update: 2020-02-05 17:10 GMT

ಲಂಡನ್, ಫೆ. 5: ಮಾಜಿ ಬ್ರಿಟಿಶ್ ಪ್ರಧಾನಿ ಡೇವಿಡ್ ಕ್ಯಾಮರೂನ್‌ರ ಅಂಗರಕ್ಷಕನು ವಾಣಿಜ್ಯ ವಿಮಾನವೊಂದರ ಶೌಚಾಲಯದಲ್ಲಿ ತನ್ನ ಬಂದೂಕನ್ನು ಬಿಟ್ಟು ಹೋಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಬುಧವಾರ ಹೇಳಿದ್ದಾರೆ.

ಬ್ರಿಟಿಶ್ ಏರ್‌ವೇಸ್ ವಿಮಾನವು ನ್ಯೂಯಾರ್ಕ್‌ನಿಂದ ಲಂಡನ್‌ಗೆ ಹಾರಲು ಸಿದ್ಧತೆ ನಡೆಸುತ್ತಿದ್ದ ವೇಳೆ, ಓರ್ವ ಪ್ರಯಾಣಿಕನಿಗೆ ಶೌಚಾಲಯದಲ್ಲಿ ‘ಗ್ಲೋಕ್’ ಸೆಮಿ ಆಟೊಮ್ಯಾಟಿಕ್ ಪಿಸ್ತೂಲು ಸಿಕ್ಕಿತು. ಇದರಿಂದಾಗಿ ಪ್ರಯಾಣಿಕರು ಹೆದರಿದರು ಹಾಗೂ ವಿಮಾನ ಹಾರಾಟ ವಿಳಂಬಗೊಂಡಿತು ಎಂದು ವರದಿಗಳು ತಿಳಿಸಿವೆ.

ಅಂಗರಕ್ಷಕನು ಕ್ಯಾಮರೂನ್‌ರ ಪಾಸ್‌ಪೋರ್ಟನ್ನೂ ಶೌಚಾಲಯದಲ್ಲೇ ಬಿಟ್ಟಿದ್ದರು.

ರಾತ್ರಿ ಹಾರಾಟದ ವಿಮಾನವು ಮಂಗಳವಾರ ಲಂಡನ್‌ನ ಹೀತ್ರೂ ವಿಮಾನ ನಿಲ್ದಾಣದಲ್ಲಿ ಇಳಿಯಿತು.

ಕ್ಯಾಮರೂನ್ 2010ರಿಂದ 2016ರವರೆಗೆ ಬ್ರಿಟನ್ ಪ್ರಧಾನಿಯಾಗಿದ್ದರು. ಬ್ರೆಕ್ಸಿಟ್ ಜನಮತಗಣನೆಯ ಬಳಿಕ ಅವರು ರಾಜೀನಾಮೆ ನೀಡಿದರು. ಬ್ರಿಟನ್ ಐರೋಪ್ಯ ಒಕ್ಕೂಟದಲ್ಲೇ ಮುಂದುವರಿಯಬೇಕೆನ್ನುವುದು ಅವರ ನಿಲುವಾಗಿತ್ತು. ಆದರೆ, ಬ್ರಿಟನ್ ಐರೋಪ್ಯ ಒಕ್ಕೂಟದಿಂದ ಹೊರಬರುವ ಪರವಾಗಿ ಜನರು ಮತ ಹಾಕಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News