ರಣಜಿ: ಕರ್ನಾಟಕ 426 ರನ್‌ಗೆ ಆಲೌಟ್

Update: 2020-02-05 18:48 GMT

ಶಿವಮೊಗ್ಗ, ಫೆ.5: ರಣಜಿ ಟ್ರೋಫಿಯ ಎರಡನೇ ದಿನವಾದ ಬುಧವಾರ ಆತಿಥೇಯ ಕರ್ನಾಟಕ ತಂಡ ಮಧ್ಯಪ್ರದೇಶದ ವಿರುದ್ಧ ಪ್ರಾಬಲ್ಯ ಸಾಧಿಸಿತು. ಕೆ. ಗೌತಮ್ ಆಕ್ರಮಣಕಾರಿ ಬ್ಯಾಟಿಂಗ್(82 ರನ್, 68 ಎಸೆತ, 7 ಬೌಂಡರಿ, 4 ಸಿಕ್ಸರ್)ಹಾಗೂ ಶ್ರೇಯಸ್ ಗೋಪಾಲ್ (50,87 ಎಸೆತ) ಅವರ ತಾಳ್ಮೆಯ ಅರ್ಧಶತಕದ ಕೊಡುಗೆ ನೆರವಿನಿಂದ ಕರ್ನಾಟಕ ಮೊದಲ ಇನಿಂಗ್ಸ್ ನಲ್ಲಿ 426 ರನ್ ಗಳಿಸಲು ಸಮರ್ಥವಾಗಿದೆ.

  ಟೀ ವಿರಾಮಕ್ಕೆ ಸ್ವಲ್ಪ ಮೊದಲು ಮೊದಲ ಇನಿಂಗ್ಸ್ ಆರಂಭಿಸಿದ ಮಧ್ಯಪ್ರದೇಶ ಆರಂಭದಲ್ಲಿ ಆಘಾತ ಅನುಭವಿಸಿದೆ. ಎಡಗೈ ವೇಗದ ಬೌಲರ್ ಪ್ರತೀಕ್ ಜೈನ್ ಇನಿಂಗ್ಸ್‌ನ 2ನೇ ಓವರ್‌ನ 2ನೇ ಎಸೆತದಲ್ಲಿ ರಜತ್ ಪಾಟಿದಾರ್(0) ಸ್ಟಂಪ್‌ನ್ನು ಉಡಾಯಿಸಿದರು. ರಮೀಝ್ ಖಾನ್ (22)ಹಾಗೂ ಯಶ್ ದುಬೆ(ಔಟಾಗದೆ 17) ತಂಡವನ್ನು ಆಧರಿಸಲು ಯತ್ನಿಸಿದರು. ಖಾನ್ ವಿಕೆಟ್ ಪಡೆದ ಅಭಿಮನ್ಯು ಮಿಥುನ್ ಈ ಜೋಡಿಯನ್ನು ಬೇರ್ಪಡಿಸಿದರು.

ನವಿಲೆಯ ಕೆಎಸ್‌ಸಿಎ ಸ್ಟೇಡಿಯಂನಲ್ಲಿ 2ನೇ ದಿನದಾಟದಂತ್ಯಕ್ಕೆ ಮಧ್ಯಪ್ರದೇಶ ತಂಡ 2 ವಿಕೆಟ್‌ಗಳ ನಷ್ಟಕ್ಕೆ 60 ರನ್ ಗಳಿಸಿದ್ದು, ಇನ್ನೂ 366 ರನ್ ಹಿನ್ನಡೆಯಲ್ಲಿದೆ.

ಬೆಳಗ್ಗೆ ಕರ್ನಾಟಕದ ಕೆ.ವಿ. ಸಿದ್ದಾರ್ಥ್(62) ಹಾಗೂ ಆರ್.ಸಮರ್ಥ್(108) ತಮ್ಮ ವಿಕೆಟನ್ನು ಬೇಗನೆ ಕೈಚೆಲ್ಲಿದರು. ಶ್ರೀನಿವಾಸ್ ಶರತ್(15)ಕೂಡ ಕುಲದೀಪ್ ಸೇನ್‌ಗೆ ವಿಕೆಟ್ ಒಪ್ಪಿಸಿದರು.

ಆಗ ಕ್ರೀಸ್‌ಗೆ ಇಳಿದ ಗೌತಮ್ ನೆರೆದಿದ್ದ ಶಾಲಾ ಮಕ್ಕಳನ್ನು ಆಕರ್ಷಕ ಹೊಡೆತಗಳ ಮೂಲಕ ರಂಜಿಸಿದರು. ಕರ್ನಾಟಕ ಲಂಚ್ ವಿರಾಮದ ವೇಳೆಗೆ 6 ವಿಕೆಟ್‌ಗಳ ನಷ್ಟಕ್ಕೆ 341 ರನ್ ಗಳಿಸಿತು. ಕುಲದೀಪ್ ಎಸೆತವನ್ನು ಬೌಂಡರಿ ಗೆರೆ ದಾಟಿಸಿದ ಗೌತಮ್ 49 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಮತ್ತೊಂದೆಡೆ ಗೋಪಾಲ್ ಅವರು ಗೌತಮ್‌ಗೆ ಉತ್ತಮ ಸಾಥ್ ನೀಡಿದರು. 7ನೇ ವಿಕೆಟ್ ಜೊತೆಯಾಟದಲ್ಲಿ 126 ರನ್(108 ಎಸೆತ)ಸೇರಿಸಿ ತಂಡದ ಮೊತ್ತವನ್ನು 400ರ ಗಡಿ ದಾಟಿಸಿದರು. ಆಲ್‌ರೌಂಡರ್ ಗೋಪಾಲ್ ಈ ಋತುವಿನಲ್ಲಿ ಎರಡನೇ ಅರ್ಧಶತಕ (50, 87 ಎಸೆತ, 7 ಬೌಂಡರಿ)ಪೂರೈಸಿದ ಬೆನ್ನಿಗೆ ಔಟಾದರು. ಮಧ್ಯಪ್ರದೇಶ 73 ಇತರೇ ರನ್ ನೀಡಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News