ವಾಗ್ದಂಡನೆ ವಿಚಾರಣೆ: ಟ್ರಂಪ್‌ಗೆ ಅಮೆರಿಕ ಸೆನೆಟ್ ಕ್ಲೀನ್‌ಚಿಟ್

Update: 2020-02-06 06:07 GMT

ವಾಷಿಂಗ್ಟನ್: ವಾಗ್ದಂಡನೆ ಪ್ರಸ್ತಾವದಲ್ಲಿ ಮಾಡಿರುವ ಅಧಿಕಾರ ದುರ್ಬಳಕೆ ಆರೋಪಗಳಿಂದ ಮುಕ್ತಗೊಳಿಸುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಡಿಸಿದ ನಿರ್ಣಯಕ್ಕೆ ಅಮೆರಿಕ ಸೆನೆಟ್ ಒಪ್ಪಿಗೆ ಸೂಚಿಸಿದೆ. ಇದರೊಂದಿಗೆ ಅಮೆರಿಕದ ಇತಿಹಾಸದಲ್ಲಿ ಮೂರನೇ ಬಾರಿಗೆ ಅಧ್ಯಕ್ಷರ ವಿರುದ್ಧ ವಾಗ್ದಂಡನೆ ವಿಚಾರಣೆ ಆರಂಭಿಸುವ ಪ್ರಕ್ರಿಯೆ ಸ್ಥಗಿತಗೊಂಡಂತಾಗಿದೆ. 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಹಾದಿಯೂ ಸುಗಮವಾಗಿದೆ.

ಬಹುತೇಕ ಸೆನೆಟ್ ಸದಸ್ಯರು, ಟ್ರಂಪ್ ಉಕ್ರೇನ್‌ನ ಮೇಲೆ ಒತ್ತಡದ ಪ್ರಚಾರ ನಡೆಸಿದ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಆದರೆ ಅಂತಿಮವಾಗಿ ಅಧ್ಯಕ್ಷರನ್ನು ದೋಷಮುಕ್ತಗೊಳಿಸುವ ನಿರ್ಣಯಕ್ಕೆ 52-48 ಮತಗಳ ಗೆಲುವು ಲಭಿಸಿತು. ಅಂತೆಯೇ ಕಾಂಗ್ರೆಸ್‌ಗೆ ತಡೆ ಒಡ್ಡಿದ್ದಾರೆ ಎಂಬ ಕುರಿತ ನಿರ್ಣಯದ ವಿರುದ್ಧ 53 ಹಾಗೂ ಪರ 47 ಮತಗಳು ಚಲಾವಣೆಯಾದವು. ಟ್ರಂಪ್ ಅವರ ಪದಚ್ಯುತಿಗೆ ಮೂರನೇ ಎರಡರಷ್ಟ ಮತ ಅಗತ್ಯವಿತ್ತು. ಇದರೊಂದಿಗೆ ಹಲವು ತಿಂಗಳುಗಳಿಂದ ನಡೆಯುತ್ತಿದ್ದ ವಾಗ್ದಂಡನೆ ಪ್ರಕ್ರಿಯೆ ರದ್ದಾದಂತಾಗಿದೆ.

ಟ್ರಂಪ್ ಅವರು ತಮಗೆ ಅನುಕೂಲ ಮಾಡಿಕೊಡುವಂತೆ ಉಕ್ರೇನ್‌ಗೆ ಮನವಿ ಮಾಡಿದ್ದಾರೆ ಎಂಬ ಆರೋಪದ ಬಗೆಗೆ ತನಿಖೆ ನಡೆಸಿ 28 ಸಾವಿರ ಪುಟಗಳ ವರದಿ ಸಲ್ಲಿಸಿದ ಸದನದ ತನಿಖಾ ಸಮಿತಿ ಅಮೆರಿಕ ಅಧ್ಯಕ್ಷರು ತಮ್ಮ ವೈಯಕ್ತಿಕ ಮತ್ತು ರಾಜಕೀಯ ಲಾಭಕ್ಕಾಗಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದರೆ ಎಂದು ಅಭಿಪ್ರಾಯಪಟ್ಟಿತ್ತು. ಇದು ತಮ್ಮ ಮರು ಆಯ್ಕೆಯನ್ನು ತಡೆಯುವ ಹುನ್ನಾರ ಎಂದು ಟ್ರಂಪ್ ಈ ಬಗ್ಗೆ ಪ್ರತಿಕ್ರಿಯಿಸಿದ್ದರು.

ಬುಧವಾರ ಮಧ್ಯಾಹ್ನ ಆರಂಭವಾದ ಮತದಾನ ಬಿರುಸಿನಿಂದ ಕೂಡಿತ್ತು. ಮುಖ್ಯ ನ್ಯಾಯಮೂರ್ತಿ ಜಾನ್ ರಾಬಟ್ಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮತದಾನದಲ್ಲಿ ಎಲ್ಲ ಸೆನೆಟ್ ಸದಸ್ಯರು ನಿಷ್ಪಕ್ಷಪಾತ ನ್ಯಾಯದ ಪ್ರತಿಜ್ಞೆ ಸ್ವೀಕರಿಸಿದರು. ಬಳಿಕ ತಮ್ಮ ಮತ ಚಲಾಯಿಸಿದರು. ಎರಡೂ ಆರೋಪಗಳಿಂದ ಟ್ರಂಪ್ ಮುಕ್ತರಾದರು.

1999ರಲ್ಲಿ ಬಿಲ್ ಕ್ಲಿಂಟನ್ ಹಾಗೂ 1868ರಲ್ಲಿ ಆಂಡ್ರೂ ಜಾನ್ಸನ್ ವಾಗ್ದಂಡನೆ ವಿಚಾರಣೆ ವೇಳೆ ವಿರೋಧ ಪಕ್ಷಗಳ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ರಿಚರ್ಡ್ ನಿಕ್ಸನ್ ಮಾತ್ರ ತಮ್ಮದೇ ಪಕ್ಷದ ಸದಸ್ಯರಿಂದ ಬಂಡಾಯದ ಸೂಚನೆ ಕಂಡುಬಂದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News