ಉತ್ತರಪ್ರದೇಶದ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆ: ಮೂವರು ಮಕ್ಕಳು ಸಹಿತ 7 ಮಂದಿ ಸಾವು

Update: 2020-02-06 15:39 GMT

ಕೊಚ್ಚಿ, ಫೆ. 6: ಉತ್ತರಪ್ರದೇಶದ ಸೀತಾಪುರ ಜಿಲ್ಲೆಯಲ್ಲಿರುವ ರಾಸಾಯನಿಕ ಕಾರ್ಖಾನೆಯಲ್ಲಿ ಸೋರಿಕೆಯಾದ ವಿಷಾನಿಲ ಸೇವಿಸಿ ಕನಿಷ್ಠ ಮೂವರು ಮಕ್ಕಳು ಸೇರಿದಂತೆ 7 ಮಂದಿ ಮೃತಪಟ್ಟಿದ್ದಾರೆ.

ಬಿಸ್ವಾನ್ ರಾಸಾಯನಿಕ ಕಾರ್ಖಾನೆಯ ಪೈಪ್‌ಲೈನ್‌ನಿಂದ ವಿಷಾನಿಲ ಸೋರಿಕೆ ಆಗಿದೆ. ಈ ಸಮೀಪದ ಕಾರ್ಪೆಟ್ ತಯಾರಿಕೆ ಕಾರ್ಖಾನೆಯ ಒಳಗೆ ಮಲಗಿದ್ದ ಈ 7 ಮಂದಿ ಈ ವಿಷಾನಿಲ ಸೇವಿಸಿ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ವರದಿ ತಿಳಿಸಿದೆ.

‘‘ಅನಿಲ ಸೋರಿಕೆಯಾದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಆರಂಭದಲ್ಲಿ ಕಟು ವಾಸನೆಯ ಕಾರಣಕ್ಕೆ ಕಾರ್ಪೆಟ್ ತಯಾರಿಕಾ ಫ್ಯಾಕ್ಟರಿಯ ಒಳಗಡೆ ಪ್ರವೇಶಿಸಲು ಸಾಧ್ಯವಾಗಿಲ್ಲ. ನಾವು ಮೂವರು ಮಕ್ಕಳು ಸೇರಿದಂತೆ 7 ಮೃತದೇಹಗಳನ್ನು ಪತ್ತೆ ಮಾಡಿದೆವು’’ ಎಂದು ಸೀತಾಪುರ ಪೊಲೀಸ್ ಅಧೀಕ್ಷಕ ಎಲ್.ಆರ್. ಕುಮಾರ್ ತಿಳಿಸಿದ್ದಾರೆ. ‘‘ರಾಸಾಯನಿಕ ಕಾರ್ಖಾನೆಯಿಂದ ಅನಿಲ ಸೋರಿಕೆಯಾಗಿರುವುದಾಗಿ ಶಂಕಿಸಲಾಗಿದೆ. ನಾವು ಈ ಪ್ರದೇಶವನ್ನು ತೆರವುಗೊಳಿಸಿದ್ದೇವೆ’’ ಎಂದು ಸರ್ಕಲ್ ಆಫೀಸರ್ ಬಿಸ್ವಾನ್ ಸಮರ್ ಬಹದ್ದೂರ್ ತಿಳಿಸಿದ್ದಾರೆ.

ಸಮೀಪದ ರಾಸಾಯನಿಕ ಕಾರ್ಖಾನೆಯಲ್ಲಿ ಅನಿಲ ಸೋರಿಕೆಯಾಯಿತು. ಅನಂತರ ಈ ಪ್ರದೇಶ ಕಟು ವಾಸನೆಯಿಂದ ತುಂಬಿಕೊಂಡಿತು. ಅನಿಲ ಸೋರಿಕೆಯಾದ ಬಳಿಕ ಕೆಲವು ಪ್ರಾಣಿಗಳು ಸಾವನ್ನಪ್ಪಿವೆ. ಆರೋಗ್ಯ ಇಲಾಖೆಯ ತಂಡವೊಂದು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದೆ ಎಂದು ಸಂತ್ರಸ್ತರೊಬ್ಬರ ಸಂಬಂದಿ ಮುನಾವರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News