ಪ್ರತಿಭಟನಾಕಾರರೂ ದೇಶಭಕ್ತರೇ

Update: 2020-02-06 18:21 GMT

ಪ್ರತಿಭಟನಾಕಾರರ ವಿರುದ್ಧ ದೇಶದ್ರೋಹದ ಆಪಾದನೆ ಹೊರಿಸುವುದಾಗಲೀ ಅಥವಾ ಇಂತಹ ಕಾನೂನಿನ ಅಡಿಯಲ್ಲಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆಂದು ಬೆದರಿಸುವುದಾಗಲೀ ಸರಕಾರದ ಸೋಗಲಾಡಿತನವನ್ನು, ನಾಗರಿಕರ ವಿರುದ್ಧ ಅದಕ್ಕೆ ಇರುವ ಅಸಹನೆಯ ಧೋರಣೆಯನ್ನು ತೋರಿಸುತ್ತದೆ. ಅಹಿಂಸಾತ್ಮಕವಾದ, ಶಾಂತಿಯುತವಾದ ಮತ ಪ್ರದರ್ಶನಗಳ ಮೂಲಕ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಕ್ಕಾಗಿ ನಾಗರಿಕರ ವಿರುದ್ಧ ಸರಕಾರ ಹೀಗೆಲ್ಲ ನಡೆದುಕೊಳ್ಳುವುದು ಅದರ ಟೀಕಾಕಾರರ ಬಾಯಿ ಮುಚ್ಚಿಸಲು ಅದು ಹೊಂದಿರುವ ಅದರ ವಿಶ್ವಾಸವನ್ನು, ಉದ್ದೇಶವನ್ನಷ್ಟೇ ಸೂಚಿಸುತ್ತದೆ.


1.3 ಬಿಲಿಯ ನಾಗರಿಕರ ದೇಶ ಗಾಬರಿ ಹುಟ್ಟಿಸುವ ಸಿಟ್ಟು, ಅಪನಂಬಿಕೆ ಮತ್ತು ಸಾಮಾಜಿಕ ಹಾಗೂ ರಾಜಕೀಯ ಅಶಾಂತಿಯಿಂದ ಕುದಿಯುತ್ತಿದೆ. ದೇಶದ ಏಕತೆ ಮತ್ತು ಸಮಗ್ರತೆಯನ್ನು ಚಿಂದಿ ಮಾಡುವ ಮುಖ್ಯ ವಿಷಯಗಳ ಬಗ್ಗೆ ಸ್ಪಷ್ಟವಾದ ತಿಳಿವಳಿಕೆ ಇಲ್ಲವಾಗಿದೆ.

ಇಂದಿನ ‘ನವ ಭಾರತ’ದಲ್ಲಿ ನಡೆಯುತ್ತಿರುವುದನ್ನು ಯಾವುದೇ ಅಳತೆಗೋಲಿನಿಂದ ಧನಾತ್ಮಕ ಪುರೋಗಾಮಿ ಮತ್ತು ಅಭಿವೃದ್ಧಿ ಪರ ಎಂದು ಹೇಳುವಂತಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ವಿರುದ್ಧ ಪ್ರತಿಭಟಿಸಿ ಮಿಲಿಯಗಟ್ಟಲೆ ಭಾರತೀಯ ನಾಗರಿಕರು ಬೀದಿಗಿಳಿದ್ದಾರೆ. ಇದು ಇಡೀ ದೇಶವನ್ನು ಒಂದು ಯುದ್ಧ ವಲಯವನ್ನಾಗಿ ಮಾರ್ಪಡಿಸಿದೆ.

ನಾನು ಇಲ್ಲಿ ಸಿಎಎ, ಎನ್‌ಪಿಆರ್ ಇತ್ಯಾದಿಗಳ ಗುಣ ಅಥವಾ ದೋಷಗಳ ಬಗ್ಗೆ ಚರ್ಚಿಸಬಯಸುವುದಿಲ್ಲ. ಬದಲಾಗಿ ನಮ್ಮ ರಾಜಕೀಯ ಕಾರ್ಯಸೂಚಿ ಅಥವಾ ಹಿತಾಸಕ್ತಿಗಳ ನೆಲೆಯಲ್ಲಿ ನಾವು ಕಡೆಗಣಿಸುವ ಕೆಲವು ‘ಸಾಧ್ಯತೆ’ಗಳ ಅಸ್ತಿತ್ವದ ಬಗ್ಗೆ ಚರ್ಚಿಸಬಯಸುತ್ತೇನೆ.

1. ನಾಗರಿಕನೊಬ್ಬ ಸರಕಾರದ ನೀತಿ ಹಾಗೂ ಕಾರ್ಯಕ್ರಮಗಳನ್ನು ಟೀಕಿಸಿಯೂ ದೇಶಭಕ್ತನಾಗಿರಲು ಸಾಧ್ಯ ಮತ್ತು ಒಂದು ಪ್ರತಿಸ್ಪರ್ಧಿ ರಾಜಕೀಯ ಪಕ್ಷಕ್ಕೆ ನಿಷ್ಠನಾಗಿಲ್ಲದಿರುವುದೂ ಸಾಧ್ಯ. ಸರಕಾರದ ಕಾರ್ಯವಿಧಾನವನ್ನು ಅಥವಾ ಅದರ ಸಂಸ್ಥೆಗಳನ್ನು ಕಟುವಾಗಿ ಟೀಕಿಸಿದ ಮಾತ್ರಕ್ಕೆ ಆತನನ್ನು ರಾಷ್ಟ್ರವಿರೋಧಿ ಅಥವಾ ಭಯೋತ್ಪಾದಕ ಅಥವಾ ‘ನಗರ ನಕ್ಸಲ್’ ಎಂದು ಆತನಿಗೆ ಹಣೆಪಟ್ಟಿ ಅಂಟಿಸುವುದು ಸರಿಯಲ್ಲ. ನಾಗರಿಕರಿಗೆ ನಿರ್ಭಯವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಪ್ರಜಾಸತ್ತಾತ್ಮಕ ಹಕ್ಕು ಇದ್ದೇ ಇದೆ.

ಪ್ರತಿಭಟನಾಕಾರರ ವಿರುದ್ಧ ದೇಶದ್ರೋಹದ ಆಪಾದನೆ ಹೊರಿಸುವುದಾಗಲೀ ಅಥವಾ ಇಂತಹ ಕಾನೂನಿನ ಅಡಿಯಲ್ಲಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆಂದು ಬೆದರಿಸುವುದಾಗಲೀ ಸರಕಾರದ ಸೋಗಲಾಡಿತನವನ್ನು, ನಾಗರಿಕರ ವಿರುದ್ಧ ಅದಕ್ಕೆ ಇರುವ ಅಸಹನೆಯ ಧೋರಣೆಯನ್ನು ತೋರಿಸುತ್ತದೆ. ಅಹಿಂಸಾತ್ಮಕವಾದ, ಶಾಂತಿಯುತವಾದ ಮತ ಪ್ರದರ್ಶನಗಳ ಮೂಲಕ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಕ್ಕಾಗಿ ನಾಗರಿಕರ ವಿರುದ್ಧ ಸರಕಾರ ಹೀಗೆಲ್ಲ ನಡೆದುಕೊಳ್ಳುವುದು ಅದರ ಟೀಕಾಕಾರರ ಬಾಯಿ ಮುಚ್ಚಿಸಲು ಅದು ಹೊಂದಿರುವ ಅದರ ವಿಶ್ವಾಸವನ್ನು, ಉದ್ದೇಶವನ್ನಷ್ಟೇ ಸೂಚಿಸುತ್ತದೆ.

2. ಪಾಕಿಸ್ತಾನದ ಬಗ್ಗೆ ಮೃದು ಧೋರಣೆ ಹೊಂದಿರದೆ ಅಥವಾ ಪಾಕಿಸ್ತಾನದ ಪರವಾಗಿ ಇರದೆ ಮುಸ್ಲಿಮ್ ನಾಗರಿಕನೊಬ್ಬನಿಗೆ ಸರಕಾರವನ್ನು ಟೀಕಿಸುವುದು ಸಾಧ್ಯ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಮರು ವಹಿಸಿದ್ದ ಪಾತ್ರ ಇತರ ಯಾವುದೇ ಧರ್ಮದ ನಾಯಕರು ವಹಿಸಿದ್ದ ಪಾತ್ರದಷ್ಟೇ ಮುಖ್ಯ ಹಾಗೂ ಶ್ಲಾಘನೀಯ.

ಒಂದು ಸಮುದಾಯವನ್ನು ಇತರ ಸಮುದಾಯಗಳಿಂದ ಪ್ರತ್ಯೇಕಗೊಳಿಸುವ ಮೂಲಕ, ಅದನ್ನು ಖಂಡಿಸುವ ಮೂಲಕ ನಾವು ನಮ್ಮ ದೇಶದ ಏಕತೆ ಮತ್ತು ಸಮಗ್ರತೆಯನ್ನು ಬಲಪಡಿಸಲಾರೆವು. ದ್ವೇಷದ ಸಂಕುಚಿತ ಮನೋಭಾವದ ಹಾಗೂ ತೀವ್ರಗಾಮಿತ್ವ ರಾಜಕಾರಣ 21ನೇ ಶತಮಾನದ ‘ನವಭಾರತ’ಕ್ಕೆ ಶುಭಸೂಚಕವಲ್ಲ, ಶುಭದಾಯಕವಲ್ಲ.

3. ತಮ್ಮ ಸಮಾಜದ ಮೇಲೆ ಪರಿಣಾಮ ಬೀರುತ್ತಿರುವ ವಿಷಯಗಳ ಬಗ್ಗೆ, ಸಮಸ್ಯೆಗಳ ಬಗ್ಗೆ, ಬಿಕ್ಕಟ್ಟಿನ ಬಗ್ಗೆ ಚಿಂತಿಸುವುದು ಮತ್ತು ಅದೇ ವೇಳೆ ಯಾವುದೇ ರಾಜಕೀಯ ಪಕ್ಷಕ್ಕೆ ನಿಷ್ಠರಾಗಿ ಇಲ್ಲದಿರುವುದು ನಮ್ಮ ರಾಷ್ಟ್ರದ ವಿದ್ಯಾರ್ಥಿಗಳಿಗೆ ಸಾಧ್ಯ. ದೇಶಾದ್ಯಂತ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ನಮ್ಮ ರಾಷ್ಟ್ರದ ಭವಿಷ್ಯ. ನಾವು ಅವರ ಅಭಿಪ್ರಾಯಗಳನ್ನು ಗೌರವಿಸಬೇಕಾಗಿದೆ ಮತ್ತು ನಮ್ಮ ಭವಿಷ್ಯವನ್ನು ಉಜ್ವಲಗೊಳಿಸುವಲ್ಲಿ ನಾವು ಅವರ ಚಿಂತನೆಗಳಿಗೆ ಹಾಗೂ ದೃಷ್ಟಿಕೋನಗಳಿಗೆ ಸಾಕಷ್ಟು ಅವಕಾಶ ನೀಡಬೇಕಾಗಿದೆ.

4. ಸರಕಾರಕ್ಕೆ ದೇಶವನ್ನು ಕಾಡುತ್ತಿರುವ ನಿಜವಾದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ತನ್ನ ಶಕ್ತಿ ಸಾಮರ್ಥ್ಯಗಳನ್ನು ಬಳಸುವುದು, ಪುನರ್ ನಿರ್ದೇಶಿಸುವುದು ಸಾಧ್ಯ. ಅದು ಯಾವ ಯಾವ ಕೆಲಸಗಳಿಗೆ ಮೊದಲ ಆದ್ಯತೆ ನೀಡಬೇಕೆಂದು ನಿರ್ಧರಿಸುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ. ಹೆಚ್ಚುತ್ತಿರುವ ನಿರುದ್ಯೋಗ, ತೀವ್ರವಾದ ವ್ಯಾಪಕವಾದ ಬಡತನ, ಸರಿಯಾದ ಯೋಜನೆಗಳಿಲ್ಲದ ಬೇಕಾಬಿಟ್ಟಿ ನಗರೀಕರಣ, ಜನರಿಗೆ ವಾಸಿಸಲು ಮನೆಗಳಿಲ್ಲದ ಸಮಸ್ಯೆಯ ತೀವ್ರತೆ ಮತ್ತು ಉಳ್ಳವರು ಹಾಗೂ ಇಲ್ಲದವರ ನಡುವೆ ಹೆಚ್ಚುತ್ತಿರುವ ತೀವ್ರ ಸ್ವರೂಪದ ಆರ್ಥಿಕ ಅಸಮಾನತೆಯ ಕಡೆಗೆ ಸರಕಾರ ತನ್ನ ಸಂಪನ್ಮೂಲಗಳನ್ನು ಕೇಂದ್ರೀಕರಿಸಬೇಕಾಗಿದೆ. ಸರಕಾರ ಈಗಿನಿಂದಲೇ ತನ್ನ ಗಮನ ಹರಿಸಬೇಕಾಗಿರುವುದು ನಿಜವಾದ ಈ ಸಮಸ್ಯೆಗಳ ಕಡೆಗೇ ಹೊರತು ಸಿಎಎ- ಎನ್‌ಪಿಆರ್-ಎನ್‌ಆರ್‌ಸಿ ಕಡೆಗಲ್ಲ.

ಕೊನೆಯದಾಗಿ ಸಮಸ್ಯೆಗಳನ್ನು ಚರ್ಚೆ ಸಂವಾದಗಳ ಮೂಲಕ ಬಗೆಹರಿಸುವುದು ಸಾಧ್ಯ. ಸಾರ್ವಜನಿಕ ಜೀವನದಲ್ಲಿ ಅತ್ಯುತ್ತಮ ಮಟ್ಟದ ನೈತಿಕತೆಯನ್ನು ಎತ್ತಿ ಹಿಡಿದು ಸಂಸತ್ತಿನ ಪಾವಿತ್ರ್ಯವನ್ನು ಕಾಪಾಡುವುದು ಸಾಧ್ಯ. ನಿಮ್ಮ ಎದುರಾಳಿಗಳನ್ನು ಗೌರವಿಸುವುದು ಸಾಧ್ಯ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಅವರು ನೀಡಿರುವ ಕಾಣಿಕೆಗಳಿಗೆ ಬೆಲೆ ಕೊಡುವುದು ಅವುಗಳು ಬಹಳ ಮೌಲ್ಯಯುತವಾದವುಗಳೆಂದು ಒಪ್ಪಿಕೊಳ್ಳುವುದು ಸಾಧ್ಯ.

ರಾಷ್ಟ್ರದ ಮತ್ತು ಅದರ ಒಳಿತು, ಜನತೆಯ ಕಲ್ಯಾಣ ಮತ್ತು ಅಭಿವೃದ್ಧಿಗೆ ಮೊದಲ ಪ್ರಾಧಾನ್ಯತೆ ಎಂದು ಅರ್ಥ ಮಾಡಿಕೊಳ್ಳುವ ಮತ್ತು ಇದನ್ನು ಗುರುತಿಸುವ ರಾಜಕೀಯ ವಿವೇಚನೆ, ದೂರದೃಷ್ಟಿ ಮತ್ತು ಮುತ್ಸದ್ದಿತನವಷ್ಟೇ ಇದನ್ನು ಸಾಧಿಸಲು ಬೇಕಾಗಿರುವ ಸಾಧನ, ಬೇರೆ ಏನೂ ಅಲ್ಲ.
(ಲೇಖಕರು ಪಂಜಾಬ್‌ನ ಸೀನಿಯರ್ ಡೆಪ್ಯೂಟಿ ಪೊಲೀಸ್ ಸುಪರಿಂಟೆಂಡೆಂಟ್ ಮತ್ತು ‘ನ್ಯೂ ಇಂಡಿಯಾ-ದಿ ರಿಯಾಲಿಟಿ ರೀಲೋಡೆಡ್’ ಕೃತಿಯ ಲೇಖಕರು)

(ಕೃಪೆ: ದಿ ಡೆಕ್ಕನ್ ಹೆರಾಲ್ಡ್) 

Writer - ಗುರ್‌ಜೋತ್ ಎಸ್. ಕಲೇರ್

contributor

Editor - ಗುರ್‌ಜೋತ್ ಎಸ್. ಕಲೇರ್

contributor

Similar News