ಡಾ. ಅಂಬೇಡ್ಕರ್ ನೆನಪಿಗೊಂದು ವಿಶ್ವಜ್ಞಾನಿ ಸಭಾಂಗಣ

Update: 2020-02-06 18:30 GMT

ಭಾರತರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರದು ಬಹುಮುಖಿ ವ್ಯಕ್ತಿತ್ವ. ಅವರು ಶ್ರೇಷ್ಠ ಆರ್ಥಿಕತಜ್ಞ, ಸಾಮಾಜಿಕ ಪರಿವರ್ತನಕಾರ, ರಾಜಕೀಯ ಚಿಂತಕ, ತಳಸಮುದಾಯಗಳ ವಿಮೋಚಕ, ಮಹಾಮಾನವತಾವಾದಿ. ಭಾರತದ ಸಂವಿಧಾನವು ಉದಾರವಾದಿ ಸಂವಿಧಾನವಾಗುವಲ್ಲಿ ಅಂಬೇಡ್ಕರ್ ಅವರ ಕಾಳಜಿ ಅನನ್ಯ. ಅವರ ಪ್ರಕಾರ ಯಾವುದೇ ರಕ್ತಪಾತವಿಲ್ಲದೆ ಜನರ ಸಾಮಾಜಿಕ-ಆರ್ಥಿಕ ಬದುಕಿನಲ್ಲಿ ಕ್ರಾಂತಿಕಾರಕ ಬದಲಾವಣೆ ತರುವುದೇ ಪ್ರಜಾತಂತ್ರ ವ್ಯವಸ್ಥೆ. ಅಂಬೇಡ್ಕರ್ ಅವರ ಈ ಚಿಂತನೆಯೇ ಅವರಿಗಿದ್ದ ಬದ್ಧತೆಯನ್ನು ಸೂಚಿಸುತ್ತದೆ. ಎಲ್ಲಾ ಬಗೆಯ ತಾರತಮ್ಯಗಳನ್ನು ಇನ್ನಿಲ್ಲವಾಗಿಸುವ ಹಾಗೂ ಜಾತ್ಯತೀತ ಭಾರತದ ನಿರ್ಮಾಣ ಅಂಬೇಡ್ಕರ್ ಅವರ ದರ್ಶನವಾಗಿತ್ತು.

 ಮೈಸೂರು ವಿಶ್ವವಿದ್ಯಾನಿಲಯವು ಡಾ. ಅಂಬೇಡ್ಕರ್ ಅವರ ಜನ್ಮಶತಮಾನೋತ್ಸವದ ನೆನಪಿನ ಅಂಗವಾಗಿ ಕುಲಪತಿಗಳಾಗಿದ್ದ ಪ್ರೊ. ಮಾದಯ್ಯನವರು 1994ರಲ್ಲಿ ರಾಜ್ಯಶಾಸ್ತ್ರ ವಿಭಾಗದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಪೀಠವನ್ನು ಸ್ಥಾಪನೆ ಮಾಡುವ ಮೂಲಕ ವಿವಿ ಅಂಬೇಡ್ಕರ್‌ರವರಿಗೆ ಗೌರವವನ್ನು ನೀಡಿತು. ಮುಂದುವರಿದು 2000ನೇ ಸಾಲಿನಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರವನ್ನು ಪ್ರತ್ಯೇಕವಾಗಿ ಆರಂಭಿಸಿ ಅದಕ್ಕೆ ಎಂ. ಬಿ. ಜಯಶಂಕರ್ ಅವರನ್ನು ಗೌರವ ನಿರ್ದೇಶಕರಾಗಿ ನೇಮಿಸಿತು. ಪ್ರಾರಂಭದಲ್ಲಿ ಮಾನಸಗಂಗೋತ್ರಿಯ ಬೇರೊಂದು ಶೈಕ್ಷಣಿಕ ಕೇಂದ್ರದ ಕೊಠಡಿಯಲ್ಲಿ ಕಾರ್ಯಗತವಾಗಿದ್ದ ಅಂಬೇಡ್ಕರ್ ಕೇಂದ್ರಕ್ಕೆ ಈಗಿರುವ ಸ್ಥಳ ಒದಗಿಸಿದವರು ಆಗ ಕುಲಪತಿಗಳಾಗಿದ್ದ ಪ್ರೊ. ಎಸ್. ಎನ್. ಹೆಗ್ಡೆ ಅವರು. ಕೇಂದ್ರ ಮತ್ತು ಕರ್ನಾಟಕ ಸರಕಾರದ ಮಾಜಿ ಕಂದಾಯ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿ. ಶ್ರೀನಿವಾಸ ಪ್ರಸಾದ್ ಅವರ ಕಾಳಜಿಯ ಕಾರಣದಿಂದ ತನ್ನದೇ ಆದ ಸಾಂಸ್ಥಿಕ ಅಸ್ತಿತ್ವವನ್ನು ಕಂಡುಕೊಳ್ಳಲು ಸಾಧ್ಯವಾಯಿತು. ಆಗ ಲೋಕಸಭಾ ಸದಸ್ಯರಾಗಿದ್ದ ಚೆನ್ನೈನ ಡಾ. ಬೆಟ್ರಿಕ್ಸ್ ಡಿ’ ಸೋಜಾ ಅವರು ತಮ್ಮ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ. 30 ಲಕ್ಷಗಳ ಅನುದಾನವನ್ನು ನೀಡುವ ಮೂಲಕ ಅಂಬೇಡ್ಕರ್ ಕೇಂದ್ರವು ಸ್ವಂತ ಕಟ್ಟಡವನ್ನು ಹೊಂದಿತು. ವಿಶ್ವವಿದ್ಯಾನಿಲಯವು 2003ರ ಸಂದರ್ಭದಲ್ಲಿ ರಿಡಿಪ್ಲಾಯ್‌ಮೆಂಟ್ ಮೂಲಕ ಎರಡು ಖಾಯಂ ಬೋಧಕ ಹುದ್ದೆಗಳನ್ನು ಸೃಷ್ಟಿಸಿ ಪ್ರವಾಚಕರು ಹಾಗೂ ಉಪನ್ಯಾಸಕರನ್ನು ನೇಮಿಸಿಕೊಂಡು ಕೇಂದ್ರಕ್ಕೆ ಭದ್ರ ಬುನಾದಿ ಹಾಕಿತು. ಆನಂತರ ಕುಲಪತಿಗಳಾಗಿದ್ದ ಪ್ರೊ. ಶಶಿಧರ್ ಪ್ರಸಾದ್ ಅವರ ಅವಧಿಯಲ್ಲಿ ಕೇಂದ್ರದ ಮೊದಲಿನ ಅಂತಸ್ತಿನ ಕಟ್ಟಡ ನಿರ್ಮಾಣಗೊಂಡಿತು. ಇದರ ಉದ್ಘಾಟನೆಗೆ ಕೇಂದ್ರಕ್ಕೆ ರೂ. 30 ಲಕ್ಷಗಳ ಅನುದಾನ ನೀಡಿದ ಶ್ರೀಮತಿ ಬೆಟ್ರಿಕ್ಸ್ ಡಿ’ಸೋಜ ಅವರು ಆಗಮಿಸಿದ್ದು ವಿಶೇಷ.

ಈ ಕೇಂದ್ರದಲ್ಲಿ ಕ್ರಿಯಾಶೀಲ ತಂಡ ಇರುವ ಸಲುವಾಗಿಯೇ ಅಂಬೇಡ್ಕರ್ ಅವರ ಚಿಂತನೆ ಹಾಗೂ ಬರಹಗಳನ್ನು ಜನಸಮುದಾಯದೊಟ್ಟಿಗೆ ಕಾರ್ಯಾಗಾರ, ಕಮ್ಮಟ, ವಿಶೇಷ ಉಪನ್ಯಾಸ, ಚರ್ಚೆ, ಸಂವಾದ, ವಿಚಾರ ಸಂಕಿರಣಗಳ ಮುಖೇನ ತಲುಪುತ್ತಿದೆ. ಈ ಕೇಂದ್ರವು ಬಹಳ ಮುಖ್ಯವಾಗಿ ಬುದ್ಧ, ಬಸವ, ಶಾಹುಮಹಾರಾಜ್, ನಾಲ್ವಡಿ, ಫುಲೆ, ಪೆರಿಯಾರ್, ಗಾಂಧೀಜಿ, ಅಂಬೇಡ್ಕರ್, ಕುವೆಂಪು ಅವರ ಜಾತಿವಿನಾಶ ಚಳವಳಿಯನ್ನು ಮುಂದುವರಿಸಿಕೊಂಡು ಬರುತ್ತಿದೆ. ಅದಕ್ಕಾಗಿ ಶೈಕ್ಷಣಿಕ ವಲಯದಲ್ಲೂ ಸಹ ಉತ್ತಮವಾದ ಹೆಜ್ಜೆಗಳನ್ನಿಡುತ್ತಾ ಪರಿವರ್ತನೆಯ ಹಾದಿಯನ್ನು ಸೃಷ್ಟಿಸುತ್ತಿದೆ. ಅಂಬೇಡ್ಕರ್ ಅಧ್ಯಯನದ ಪಿಎಚ್‌ಡಿ, ಎಂ. ಎ. ಪದವಿ, ಆಯ್ಕೆ ಆಧಾರಿತ ವಿಷಯಗಳು, ಸ್ನಾತಕೋತ್ತರ ಡಿಪ್ಲೊಮಾ, ಸರ್ಟಿಫಿಕೇಟ್ ಕೋರ್ಸ್ ಗಳನ್ನು ಸಹ ಒಳಗೊಂಡಿದೆ.

ಡಾ. ಬಿ. ಆರ್. ಅಂಬೇಡ್ಕರ್ ಪೀಠದ ಸಂದರ್ಶಕ ಪ್ರಾಧ್ಯಾಪಕರುಗಳಾಗಿ ಈ ಹಿಂದೆ ಅಂತರ್‌ರಾಷ್ಟ್ರೀಯ ಪ್ರಖ್ಯಾತ ರಾಜಕೀಯ ಚಿಂತಕರೂ, ಬರಹಗಾರರೂ ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕರೂ ಆಗಿರುವ ಪ್ರೊ. ಗೋಪಾಲಗುರು ಇವರು 1995ರಿಂದ 1996ರವರೆಗೆ, ಅಂತರ್‌ರಾಷ್ಟ್ರೀಯ ಪ್ರಖ್ಯಾತಿಯ ಚಿತ್ರ ಕಲಾವಿದರು, ದಲಿತ ಹಾಗೂ ರೈತ ಚಳವಳಿಯ ಪ್ರಮುಖ ಹಿರಿಯ ಹೋರಾಟಗಾರರಾದ ಕೆ. ಟಿ. ಶಿವಪ್ರಸಾದ್ ಇವರು ಜೂನ್ 2008ರಿಂದ ನವೆಂಬರ್ 2008ರವರೆಗೆ ಮತ್ತು ಆಗಸ್ಟ್ 2009ರಿಂದ ಫೆಬ್ರವರಿ 2010ರವರೆಗೆ, ನಾಡಿನ ಪ್ರಸಿದ್ಧ ಸಾಹಿತಿಗಳು, ವಿಶ್ರಾಂತ ಪ್ರಾಧ್ಯಾಪಕರೂ ಆದ ಪ್ರೊ. ಮ. ನ. ಜವರಯ್ಯ ಇವರು ಸೆಪ್ಟಂಬರ್ 2011ರಿಂದ ಆಗಸ್ಟ್ 2012ರವರೆಗೆ, ಬೌದ್ಧ ಉಪಾಸಕರೂ, ಬೆಂಗಳೂರಿನಲ್ಲಿ ಅಸ್ತಿತ್ವದಲ್ಲಿರುವ ಸ್ಫೂರ್ತಿಧಾಮದ ರೂವಾರಿಗಳೂ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿಗಳೂ ಆದ ಎಸ್. ಮರಿಸ್ವಾಮಿ ಅವರು ಸೆಪ್ಟಂಬರ್ 2012ರಿಂದ ಆಗಸ್ಟ್ 2013 ರವರೆಗೆ, ನಾಡಿನ ಹೆಸರಾಂತ ಪ್ರಗತಿಪರ ಚಿಂತಕರು, ಸಾಹಿತಿಗಳೂ ಆದ ಪ್ರೊ. ಕಾಳೇಗೌಡ ನಾಗವಾರ ಇವರು ನವೆಂಬರ್ 2013ರಿಂದ ಡಿಸೆಂಬರ್ 31, 2015ರವರೆಗೆ ಕಾರ್ಯವನ್ನು ನಿರ್ವಹಿಸಿರುತ್ತಾರೆ. ಅಲ್ಲದೆ ನಾಡಿನ ಹೆಸರಾಂತ ಕವಿಗಳು ಹಾಗೂ ಸಾಹಿತಿಗಳೂ ಆದ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಇವರು ಎಪ್ರಿಲ್ 21, 2016 ರಿಂದ ಎಪ್ರಿಲ್ 20, 2017ರವರೆಗೆ, ನಾಡಿನ ಹಿರಿಯ ದಲಿತಪರ ಹೋರಾಟಗಾರರಾದ ಎನ್. ವೆಂಕಟೇಶ್ ಅವರು 2017ರ ಸೆಪ್ಟಂಬರ್ 20ರಿಂದ 19 ಸೆಪ್ಟಂಬರ್ 2018ರವರೆಗೆ ಸೇವೆ ಸಲ್ಲಿಸಿದ್ದಾರೆ. ನಾಡಿನ ಹಿರಿಯ ದಲಿತಪರ ಹೋರಾಟಗಾರರೂ, ರಾಜ್ಯ ಸಂಪನ್ಮೂಲ ಕೇಂದ್ರದ ವಿಶ್ರಾಂತ ನಿರ್ದೇಶಕರಾದ ಬಸವರಾಜ ದೇವನೂರ ಅವರು 2019ರ ಜೂನ್ 01ರಿಂದ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

 ದಲಿತರು ಮಾತ್ರವಲ್ಲದೆ ಎಲ್ಲ ಹಿನ್ನೆಲೆಯ ದಮನಿತ ತಳಸಮುದಾಯಗಳ ಸ್ಥಿತಿಗತಿಗಳನ್ನು ಕುರಿತು ಅಧ್ಯಯನ, ದಾಖಲೀಕರಣ ಮತ್ತು ಸಂಶೋಧನೆ ಕೈಗೊಳ್ಳುವುದು, (ಉದಾ: ಪೌರಕಾರ್ಮಿಕರು, ಬೇಡಕಂಪಣ, ದಕ್ಕಲಿಗ, ಕೊರಗ, ಅಲೆಮಾರಿ, ಮಹಿಳಾ ಸಮುದಾಯಗಳು ಇತ್ಯಾದಿ) ಅಂಬೇಡ್ಕರ್ ಅವರ ವಿಚಾರಧಾರೆ ಹಾಗೂ ಅವುಗಳಿಗೆ ಪೂರಕವಾದ ವಿಷಯಗಳನ್ನು ಕುರಿತು ಅಂತರ್‌ರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಹಾಗೂ ಸ್ಥಳೀಯ ಮಟ್ಟದ ಸಮ್ಮೇಳನ, ಸಮಾವೇಶ, ವಿಚಾರಸಂಕಿರಣ, ಕಾರ್ಯಾಗಾರ, ವಿಶೇಷ ಉಪನ್ಯಾಸ, ಮುಕ್ತ ಸಂವಾದ ಹಾಗೂ ವಿಸ್ತರಣ ಕಾರ್ಯಕ್ರಮಗಳನ್ನು ಇಲ್ಲಿ ಏರ್ಪಡಿಸುವುದು, ಈ ಮೂಲಕ ವಿದ್ಯಾರ್ಥಿಗಳಿಗೆ ಹಾಗೂ ಜನಸಮುದಾಯಗಳಿಗೆ ವಿಚಾರ ತಲುಪಿಸುವ ಅಂಬೇಡ್ಕರ್ ಅವರ ಪರಿಕಲ್ಪನೆಯ ಹಿನ್ನೆಲೆಯಲ್ಲಿ ತಳಸಮುದಾಯ, ಹಿಂದುಳಿದ ವರ್ಗಗಳು, ಮಹಿಳಾ ಹಾಗೂ ಅಲ್ಪಸಂಖ್ಯಾತರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಹಿತ್ಯಕ, ಸಾಂಸ್ಕೃತಿಕ, ಕಾನೂನಾತ್ಮಕ ಹಾಗೂ ರಾಜಕಾರಣದ ಸ್ಥಿತಿಗತಿಗಳನ್ನು ಸಮಕಾಲೀನ ವಿದ್ಯಮಾನಗಳ ಹಿನ್ನೆಲೆಯಲ್ಲಿ ಅಂತರ್‌ರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಹಾಗೂ ಸ್ಥಳೀಯ ಮಟ್ಟದ ಚರ್ಚೆಗಳನ್ನು ನಡೆಸುವುದು ಹಾಗೂ ಇವುಗಳಿಗೆ ಪೂರಕವಾಗಿ ಅಧ್ಯಯನ ಹಾಗೂ ಸಂಶೋಧನೆಗಳನ್ನು ನಡೆಸುವುದು, ಊರಿಂದೂರಿಗೆ ಅಂಬೇಡ್ಕರ್ ಚಿಂತನೆ ತಲುಪಿಸುವುದು ಈ ಕೇಂದ್ರದ ಮೂಲ ಧ್ಯೇಯವಾಗಿದೆ.

ಡಾ. ಬಿ. ಆರ್. ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರವು ಆರಂಭಗೊಂಡ ದಿನದಿಂದಲೂ ವಿಶ್ವವಿದ್ಯಾನಿಲಯದ ಸಂಪೂರ್ಣ ಸಹಕಾರದೊಂದಿಗೆ ಹಲವಾರು ಬಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಕೇಂದ್ರವು ಹಮ್ಮಿಕೊಂಡು ಬಂದಿರುವ ಈವರೆಗಿನ ಎಲ್ಲಾ ಕಾರ್ಯಕ್ರಮಗಳಿಗೂ ವಿವಿಧ ಕ್ಷೇತ್ರಗಳ ತಜ್ಞರು, ಜನಪ್ರತಿನಿಧಿಗಳು, ಪ್ರಗತಿಪರ ಚಿಂತಕರು, ಸಾಹಿತಿಗಳು, ಹೋರಾಟಗಾರರು, ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಜನಸಮುದಾಯ ಹೀಗೆ ಮುಂತಾದ ಕಡೆಗಳಿಂದ ಗುಣಾತ್ಮಕ ಬೆಂಬಲ, ಸಹಕಾರ, ಪ್ರೋತ್ಸಾಹ ದೊರೆಯುತ್ತಲೇ ಬಂದಿದೆ. ನಿರಂತರವಾದ ಚಟುವಟಿಕೆಗಳಿಂದ ಕ್ರಿಯಾಶೀಲವಾಗಿರುವ ಈ ಕೇಂದ್ರಕ್ಕೆ ಈಗ ವಿಶ್ವಜ್ಞಾನಿ ಸಭಾಂಗಣದ ಉದ್ಘಾಟನೆಯ ಮೂಲಕ ಸಂಭ್ರಮದ ದಿನ ಬಂದಿದೆ. ಈ ಸಭಾಂಗಣದ ನಿರ್ಮಾಣಕ್ಕೆ 23.04.2011ರಂದು ಅಡಿಗಲ್ಲು ಹಾಕಿದವರು ಅಂದಿನ ಕೇಂದ್ರ ಸರಕಾರದಲ್ಲಿ ಕಾರ್ಮಿಕ ಹಾಗೂ ಉದ್ಯೋಗ ಖಾತೆ ಸಚಿವರಾಗಿದ್ದ ಎಂ. ಮಲ್ಲಿಕಾರ್ಜುನ ಖರ್ಗೆಯವರು.

ಇದರ ನಿರ್ಮಾಣಕ್ಕಾಗಿ ಅಂದು ಮೈಸೂರು ವಿಶ್ವವಿದ್ಯಾನಿಲಯವು 50 ಲಕ್ಷ ರೂ.ಗಳನ್ನು ನೀಡಿತ್ತು. ವಿ. ಶ್ರೀನಿವಾಸಪ್ರಸಾದ್ ಅವರ ಕೋರಿಕೆಯಿಂದ ಮಾಜಿ ಸಚಿವರೂ ಆದ ವಿಶ್ವನಾಥ್ ಅವರು ತಮ್ಮ ಸಂಸತ್ ಸದಸ್ಯರ ನಿಧಿಯಿಂದ 25 ಲಕ್ಷ ರೂ.ಗಳನ್ನು ನೀಡಿದ್ದಾರೆ. ಮಾಜಿ ವಿಧಾನ ಪರಿಷತ್ ಸದಸ್ಯರಾದ ಸಿ. ಎಚ್. ವಿಜಯ ಶಂಕರ್ ಅವರು ತಮ್ಮ ನಿಧಿಯಿಂದ ರೂ. 16.50ಲಕ್ಷಗಳನ್ನು ಒದಗಿಸಿಕೊಟ್ಟರು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಒಟ್ಟು 60ಲಕ್ಷ ರೂ.ಗಳು ಖರ್ಚಾಗಿದೆ. ಮೈಸೂರು ವಿಶ್ವವಿದ್ಯಾನಿಲಯದ ಐ.ಸಿ.ಡಿ. ವತಿಯಿಂದ ಸೌಂಡ್ಸ್ ಹಾಗೂ ಇನ್ನಿತರ ಉಪಕರಣಗಳಿಗಾಗಿ ಅನುದಾನವನ್ನು ಪಡೆದಿರುತ್ತದೆ. ಈ ಸಭಾಂಗಣಕ್ಕೆ ವಿಶ್ವಜ್ಞಾನಿ ಸಭಾಂಗಣ ಎಂದು ಹೆಸರಿಟ್ಟಿರುವುದು ಅರ್ಥಪೂರ್ಣವಾಗಿದೆ. ಈ ಸಭಾಂಗಣವು ದಿನಾಂಕ 07.02.2020ರಂದು ಲೋಕಾರ್ಪಣೆಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಅಂಬೇಡ್ಕರ್ ಅಧ್ಯಯನ ಕೇಂದ್ರವು ರೂಪಿಸಿಕೊಂಡು ಬರುತ್ತಿರುವ ಜೀವಪರವಾದ ಕಾರ್ಯಕ್ರಮಗಳಿಗೆ ಮತ್ತಷ್ಟು ಜವಾಬ್ದಾರಿಯ ಹೊಣೆಗಾರಿಕೆ ಬಂದಿದೆ. ಆ ಮೂಲಕ ಅಂಬೇಡ್ಕರ್ ಅವರ ಹೆಸರಿಗೆ ಘನತೆ ತರುವ ಹೆಜ್ಜೆಗಳಿಗೆ ವೇಗ ಬಂದಂತಾಗಿದೆ.

Writer - ಪ್ರದೀಪ್ ಎನ್. ವಿ., ಮೈಸೂರು.

contributor

Editor - ಪ್ರದೀಪ್ ಎನ್. ವಿ., ಮೈಸೂರು.

contributor

Similar News

ಜಗದಗಲ
ಜಗ ದಗಲ