ಎಲ್ಗಾರ್ ಪರಿಷದ್ ಪ್ರಕರಣವನ್ನು ಎನ್‌ಐಎಗೆ ಒಪ್ಪಿಸಿದ್ದೇಕೆ?

Update: 2020-02-06 18:30 GMT

ಹಿಂದಿನ ಸರಕಾರದ ಧೋರಣೆಯು ಕೃತಕವಾಗಿ ಹುಟ್ಟಿಸಲಾದ ‘ನಗರ ನಕ್ಸಲ’ರೆಂಬ ಸಂಕಥನಕ್ಕೆ ಪೂರಕವಾಗಿದ್ದು ಒಂದು ನಿಷ್ಪಕ್ಷಪಾತ ತನಿಖೆಯ ಮೂಲಕ ಆ ಸಂಕಥನವು ಪೊಳ್ಳೆಂದು ಸಾಬೀತಾಗಿದ್ದರೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ರಾಜಕೀಯ ಆಟವನ್ನು ಏರುಪೇರು ಮಾಡುತ್ತಿತ್ತು. ಹೀಗಾಗಿ ತನಿಖೆಯು ತಮ್ಮ ನಿಯಂತ್ರಣದಲ್ಲಿರುವಂತೆ ನೋಡಿಕೊಳ್ಳುವುದಕ್ಕಾಗಿಯೇ ಎನ್‌ಐಎಗೆ ಹಸ್ತಾಂತರ ಮಾಡಲಾಗಿದೆ ಹಾಗೂ ತನಿಖೆಯೇ ಶಿಕ್ಷೆಯಾಗುವ ರೀತಿಯಲ್ಲಿ ತನಿಖೆಯನ್ನು ನಡೆಸಲಾಗುತ್ತಿದೆ.

 ಜನವರಿ 24ರಂದು ಕೇಂದ್ರದ ಗೃಹ ಇಲಾಖೆಯು ಎಲ್ಗಾರ್ ಪರಿಷದ್ ಪ್ರಕರಣದ ತನಿಖೆಯನ್ನು ಮಹಾರಾಷ್ಟ್ರ ಪೊಲೀಸರಿಂದ ಕಸಿದುಕೊಂಡು ನ್ಯಾಷನಲ್ ಇನ್‌ವೆಸ್ಟಿಗೇಟಿಂಗ್ ಏಜೆನ್ಸಿ (ಎನ್‌ಐಎ)ಗೆ ವಹಿಸಿತು. ಇದು ಎನ್‌ಐಎಯು ರಾಜ್ಯಗಳ ಅಧಿಕಾರದ ಮೇಲೆ ಸವಾರಿ ಮಾಡುತ್ತಾ ಒಕ್ಕೂಟ ತತ್ವಕ್ಕೆ ಅಪಾಯಕಾರಿಯಾಗಿದೆಯೆಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ಈ ಕ್ರಮವನ್ನು ಕೇಂದ್ರವು ರಾಜ್ಯಗಳ ಜೊತೆ ಸಂಘರ್ಷ ಮಾಡುವ ಹಾಗೂ ಬಿಜೆಪಿಯೇತರ ಪಕ್ಷಗಳು ಆಳ್ವಿಕೆಯಲ್ಲಿರುವ ರಾಜ್ಯಗಳಲ್ಲಿ ಅಸ್ಥಿರತೆಯನ್ನುಂಟುವ ಮಾಡುವ ಪ್ರಯತ್ನವನ್ನಾಗಿ ನೋಡಲಾಗುತ್ತಿದೆ. ಈ ನಿರ್ಧಾರವನ್ನು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಗಳು ಪ್ರಕರಣವನ್ನು ತನಿಖೆ ಮಾಡುತ್ತಿದ್ದ ಪೊಲೀಸ್ ಅಧಿಕಾರಿಗಳ ಜೊತೆ ಪರಿಶೀಲನಾ ಸಭೆಯನ್ನು ನಡೆಸಿದ ಕೂಡಲೇ ತೆಗೆದುಕೊಳ್ಳಲಾಯಿತೆಂಬುದು ಇಲ್ಲಿ ಗಮನಿಸಬೇಕು. ರಾಜ್ಯದ ಗೃಹಮಂತ್ರಿಗಳು ಸ್ಪಷ್ಟಪಡಿಸಿದಂತೆ ಈ ತೀರ್ಮಾನವನ್ನು ತೆಗೆದುಕೊಳ್ಳುವ ಮುಂಚೆ ಕೇಂದ್ರವು ರಾಜ್ಯ ಸರಕಾರದ ಜೊತೆ ಸಮಾಲೋಚನೆಯನ್ನೂ ಮಾಡಿರಲಿಲ್ಲ ಅಥವಾ ತೀರ್ಮಾನದ ಮಾಹಿತಿಯನ್ನೂ ನೀಡಿರಲಿಲ್ಲ. ಒಂದು ರಾಜ್ಯ ಸರಕಾರದ ಮಂತ್ರಿಗಳು ತಮ್ಮದೇ ರಾಜ್ಯದ ಪ್ರಕರಣದ ಬಗ್ಗೆ ತಮ್ಮದೇ ಪೊಲೀಸರ ಜೊತೆ ಎಂದಿನಂತೆ ಪರಿಶೀಲನೆ ನಡೆಸಿದರೆ ಕೇಂದ್ರ ಸರಕಾರವೇಕೆ ಗಾಬರಿಯಾಗಬೇಕು? ಪ್ರಾಯಶಃ ಹಾಲಿ ಅಧಿಕಾರದಲ್ಲಿರುವ ಮೈತ್ರಿ ಸರಕಾರವು, ಎಲ್ಗಾರ್ ಪರಿಷದ್ ಮತ್ತು ಭೀಮಾ ಕೋರೆಗಾಂವ್ ಪ್ರಕರಣವನ್ನು ಈ ಹಿಂದಿನ ಸರಕಾರ ಮತ್ತದರ ಪೊಲೀಸರು ನಿಭಾಯಿಸಿದ ರೀತಿಯ ಬಗ್ಗೆ ಕೆಲವು ಗಂಭೀರ ಪ್ರಶ್ನೆಗಳನ್ನು ಎತ್ತುತ್ತಿರುವುದರಿಂದ ಕೇಂದ್ರವು ಕಸಿವಿಸಿಗೊಂಡಿರಬೇಕು.

ಕಳೆದ ತಿಂಗಳು ಎನ್‌ಸಿಪಿ ಪಕ್ಷದ ಅಧ್ಯಕ್ಷರಾದ ಶರದ್ ಪವಾರ್ ಅವರು ಪುಣೆ ನಗರ ಪೊಲೀಸರು ಎಲ್ಗಾರ್ ಪರಿಷದ್ ಪ್ರಕರಣದಲ್ಲಿ ಬಂಧಿಸಿದ ಒಂಬತ್ತು ಕಾರ್ಯಕರ್ತರು/ ವಕೀಲರು ಇನ್ನೂ ಸೆರೆಮನೆಯಲ್ಲಿ ಬಂಧಿಯಾಗಿರುವ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದರಲ್ಲದೆ ಈ ಪ್ರಕರಣದಲ್ಲಿ ಹಿಂದಿನ ಸರಕಾರ ನಡೆಸಿದ ತನಿಖೆ ಅನುಮಾನಸ್ಪದವಾಗಿಯೂ ಹಾಗೂ ದುರುದ್ದೇಶಪೂರ್ವಕವಾಗಿಯೂ ನಡೆದಿದೆಯೆಂದೂ ಅಭಿಪ್ರಾಯ ವ್ಯಕ್ತಪಡಿಸಿ ಅದರ ಬಗ್ಗೆ ಒಂದು ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದರು. ಈ ಸಂಬಂಧ ಶರದ್ ಪವಾರ್ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ಪತ್ರವೊಂದನ್ನು ಬರೆದಿದ್ದಾರೆಂದೂ ಸಹ ಮಾಧ್ಯಮಗಳು ವರದಿ ಮಾಡಿದ್ದವು. ಇಬ್ಬರು ಮಂತ್ರಿಗಳು ಪ್ರಕರಣದ ತನಿಖೆಯ ಬಗ್ಗೆ ನಡೆಸಿದ ಪರಿಶೀಲನೆಯನ್ನು ಈ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕು. ಪ್ರಾಯಶಃ ಎಸ್‌ಐಟಿ ತನಿಖೆಯ ಸಾಧ್ಯತೆಯು ಬಿಜೆಪಿಯಲ್ಲಿ ಚಳಿಜ್ವರವನ್ನು ಹುಟ್ಟಿಸಿರಬೇಕು. ಆ ಸಾಧ್ಯತೆಯನ್ನು ತಡೆಗಟ್ಟುವುದಕ್ಕಾಗಿಯೇ ಪ್ರಕರಣದ ತನಿಖೆಯನ್ನು ರಾಜ್ಯ ಸರಕಾರದಿಂದ ಕಿತ್ತುಕೊಂಡು ಎನ್‌ಐಎಗೆ ಹಸ್ತಾಂತರಿಸಿರಬೇಕು. ಈ ಬಗ್ಗೆ ಹಿಂದಿನ ಮುಖ್ಯಮಂತ್ರಿಗಳು ಪ್ರಾರಂಭದಲ್ಲಿ ತೋರಿದ ಆತಂಕ ಹಾಗೂ ಎನ್‌ಐಎಗೆ ಹಸ್ತಾಂತರವಾದ ಮೇಲೆ ತೋರಿದ ಹರ್ಷ ಹಾಗೂ ನಿರಾಂತಕಗಳಿಗೆ ಕಾರಣವೇನು? ಆಗ ಗೃಹಮಂತ್ರಿಗಳಾಗಿದ್ದೂ ಸಹ ಇದೇ ಮಾಜಿ ಮುಖ್ಯಮಂತ್ರಿಗಳೇ. ಹಾಗಿರುವಾಗ ತಮ್ಮ ತನಿಖೆಯ ಮೌಲಿಕತೆಯ ಬಗ್ಗೆ ವಿಶ್ವಾಸವಿದ್ದಲ್ಲಿ ರಾಜ್ಯ ಪೊಲೀಸರಿಂದ ಪ್ರಕರಣವು ಎನ್‌ಐಎಗೆ ಹಸ್ತಾಂತರವಾಗುತ್ತಿರುವುದು ಒಂದು ಅವಮಾನವೆಂದು ಏಕೆ ಅವರು ಭಾವಿಸುತ್ತಿಲ್ಲ?

 ಪ್ರಕರಣದಲ್ಲಿ ಈವರೆಗೆ ಪುಣೆ ನಗರ ಪೊಲೀಸರು ಎರಡು ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿದ್ದಾರೆ. ಆದರೆ ಇವ್ಯಾವುದೂ ಸಹ ಬಂಧಿತ ವ್ಯಕ್ತಿಗಳ ಬಗ್ಗೆ ಹೊರಿಸಲಾಗಿರುವ ಗಂಭೀರ ಆರೋಪಗಳಾದ ಪ್ರಧಾನ ಮಂತ್ರಿಗಳ ಹತ್ಯಾ ಸಂಚಿನ ಬಗ್ಗೆಯಾಗಲೀ, ಭೀಮಾ ಕೋರೆಗಾಂವ್‌ನಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿರುವ ಕುರಿತಾಗಲೀ ಯಾವುದೇ ಸಾಕ್ಷಿ-ಪುರಾವೆಗಳನ್ನು ಒದಗಿಸಿಲ್ಲ. ವಾಸ್ತವವಾಗಿ ಈ ಬಗ್ಗೆ 2017ರ ಮಾರ್ಚ್‌ನಲ್ಲಿ ಮಾಜಿ ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ನೀಡಿದ ಹೇಳಿಕೆಯಲ್ಲಿ ಎಲ್ಗಾರ್ ಪರಿಷದ್‌ನ ಸಭೆಯಿಂದಲೇ ಭೀಮಾ ಕೋರೆಗಾಂವ್‌ನಲ್ಲಿ 2017ರ ಜನವರಿ 1ರಂದು ಹಿಂಸಾಚಾರ ಸಂಭವಿಸಿತೆಂಬ ಅಸಂಬದ್ಧ ವಾದದ ಪ್ರಸ್ತಾಪವೇ ಇರಲಿಲ್ಲ. ಏಕೆಂದರೆ ಆಗ ಭೀಮಾ ಕೋರೆಗಾಂವ್ ಹಿಂಸಾಚಾರದಲ್ಲಿ ಹಿಂದುತ್ವ ಸಂಘಟನೆಗಳ ಪಾತ್ರವನ್ನು ಒಪ್ಪಿಕೊಳ್ಳಲೇಬೇಕಾದ ಪರಿಸ್ಥಿತಿಯಿತ್ತು. ಪ್ರಾರಂಭದಿಂದಲೇ ಹಿಂಸಾಚಾರವನ್ನು ಹಿಂದುತ್ವವಾದಿ ಸಂಘಟನೆಗಳು ಹಾಗೂ ಅವರ ಬಾಡಿಗೆ ಗೂಂಡಾಗಳು ನಡೆಸಿದ ಬಗ್ಗೆ ಎಲ್ಲಾ ಸೂಚನೆಗಳಿದ್ದವು. ಪುಣೆ ಗ್ರಾಮೀಣ ಪೊಲೀಸರು ಸಹ ಆ ನಿಟ್ಟಿನಲ್ಲೇ ತಮ್ಮ ತನಿಖೆಯನ್ನು ಮುಂದುವರಿಸಿದ್ದರು. ಹೀಗಾಗಿ ಎಲ್ಗಾರ್ ಪರಿಷದ್‌ಗೆ ಸಂಬಂಧಪಟ್ಟವರನ್ನೂ ಮತ್ತು ಪಡದಿದ್ದವರನ್ನು ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಗುರಿಮಾಡುವುದರ ಹಿಂದೆ ಹಿಂಸಾಚಾರಕ್ಕೆ ಕಾರಣರಾದ ಹಿಂದುತ್ವವಾದಿ ಸಂಘಟನೆಗಳ ಸದಸ್ಯರನ್ನು ರಕ್ಷಿಸುವ ಮತ್ತು ತನಿಖೆಯನ್ನು ದಾರಿ ತಪ್ಪಿಸುವ ಹುನ್ನಾರವೇ ಇದೆಯೆಂದು ವ್ಯಾಪಕವಾಗಿ ಭಾವಿಸಲಾಗುತ್ತಿದೆ. ಎಸ್‌ಐಟಿ ನಡೆಸಬಹುದಾಗಿದ್ದ ಒಂದು ನಿಷ್ಪಕ್ಷಪಾತ ತನಿಖೆಯು ಈ ಸಂಚುಗಳನ್ನೂ ಮತ್ತು ಸಮುದಾಯದ ನಡುವೆ ಸಾಮಾಜಿಕ ಕ್ಷೋಭೆಯನ್ನು ಬಿತ್ತುವಲ್ಲಿ ಬಿಜೆಪಿಯ ಪಾತ್ರವನ್ನು ಬಯಲುಗೊಳಿಸುತ್ತಿತ್ತು. ಅಷ್ಟು ಮಾತ್ರವಲ್ಲದೆ, ಈ ಬಂಧನಗಳು ಹಾಗೂ ಈ ಇಡೀ ಪ್ರಕರಣವು ಆಳುವ ಪಕ್ಷದ ಹಾಗೂ ಕೇಂದ್ರ ಸರಕಾರದ ಬಗ್ಗೆ ವಿಮರ್ಶೆ ಮಾಡುವವರ ವಿರುದ್ಧ ಒಂದು ಗಂಭೀರ ಆರೋಪವನ್ನು ಹೇರುವ ಸಂಕಥನವನ್ನು ಸೃಷ್ಟಿಸುವ ರಾಜಕೀಯ ದುರುದ್ದೇಶದಿಂದ ಪ್ರೇರಿತವಾದದ್ದು ಎಂದು ನಂಬಲು ಬಲವಾದ ಕಾರಣಗಳಿವೆ.

 ಪ್ರಧಾನಿಗಳ ಕೊಲೆ ಸಂಚಿನ ಬಗ್ಗೆ 2018ರಲ್ಲಿ ಪುಣೆ ನಗರ ಪೊಲೀಸರು ಮಾಧ್ಯಮಗಳಿಗೆ ಸೋರಿಕೆ ಮಾಡಿದ ಅನುಮಾನಾಸ್ಪದ ಹಾಗೂ ಸಾಕ್ಷಿಯಾಗುವ ಮೌಲ್ಯವನ್ನೇ ಹೊಂದಿರದ ಪತ್ರಗಳು ಹಾಗೂ ಇಮೇಲ್‌ಗಳನ್ನು ಬಿಟ್ಟರೆ ಚಾರ್ಜ್‌ಶೀಟ್‌ನಲ್ಲಿ ಇತರ ಯಾವುದೇ ಪುರಾವೆಗಳಿಲ್ಲ. ಬಾಂಬೆ ಹೈಕೋರ್ಟು ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ಭಿನ್ನಮತವನ್ನು ದಾಖಲಿಸಿದ ನ್ಯಾಯಮೂರ್ತಿಗಳು ನೀಡಿದ ಆದೇಶದಲ್ಲಿ ಹೀಗೆ ಪ್ರಕರಣವೊಂದು ನ್ಯಾಯಾಲಯದಲ್ಲಿ ವಿಚಾರಣೆಯಾಗುತ್ತಿರುವಾಗ ಮಾಧ್ಯಮ ವಿಚಾರಣೆ ನಡೆಯುವ ಬಗ್ಗೆ ತೀವ್ರವಾದ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು. ವಾಸ್ತವವಾಗಿ ಬಂಧಿತರನ್ನು ಬಿಡುಗಡೆ ಮಾಡುವುದಕ್ಕೆ ಪೂರಕವಾಗಿ ತಮ್ಮ ಭಿನ್ನಮತವನ್ನು ದಾಖಲಿಸಿದ್ದ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಸುಪ್ರೀಂ ಕೋರ್ಟು ಉಸ್ತುವಾರಿಯಲ್ಲಿ ಒಂದು ಎಸ್‌ಐಟಿ ತನಿಖೆ ನಡೆಯುವ ಅಗತ್ಯವನ್ನೂ ಸಹ ಉಲ್ಲೇಖಿಸಿದ್ದರು. ಈ ಹಿನ್ನೆಲೆಯಿರುವಾಗ ಎಸ್‌ಐಟಿ ತನಿಖೆಯನ್ನು ರಾಜಕೀಯ ಪ್ರೇರಿತ ಎಂದು ತಳ್ಳಿಹಾಕಲು ಸಾಧ್ಯವಿಲ್ಲ. ಬದಲಿಗೆ ಈ ಪ್ರಕರಣದಲ್ಲಿ ಪುಣೆ ನಗರ ಪೊಲೀಸರ ನಡೆದುಕೊಂಡಿರುವ ರೀತಿ ನಿರ್ದಿಷ್ಟ ವ್ಯಕ್ತಿಗಳನ್ನು ಗುರಿಮಾಡಿ ಬಲಿಹಾಕುವ ದುರುದ್ದೇಶವನ್ನು ಹೊಂದಿರುವುದು ಮೇಲ್ನೋಟಕ್ಕೆ ಎದ್ದುಕಾಣುವುದರಿಂದ ಅಂತಹ ಒಂದು ನಿಷ್ಪಕ್ಷಪಾತ ತನಿಖೆಯು ಉತ್ತರದಾಯಿತ್ವ ಹಾಗೂ ನ್ಯಾಯಪರತೆಯ ಭಾಗವಾಗಿದೆ. ಹಿಂದಿನ ಸರಕಾರದ ಧೋರಣೆಯು ಕೃತಕವಾಗಿ ಹುಟ್ಟಿಸಲಾದ ‘ನಗರ ನಕ್ಸಲ’ರೆಂಬ ಸಂಕಥನಕ್ಕೆ ಪೂರಕವಾಗಿದ್ದು ಒಂದು ನಿಷ್ಪಕ್ಷಪಾತ ತನಿಖೆಯ ಮೂಲಕ ಆ ಸಂಕಥನವು ಪೊಳ್ಳೆಂದು ಸಾಬೀತಾಗಿದ್ದರೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ರಾಜಕೀಯ ಆಟವನ್ನು ಏರುಪೇರು ಮಾಡುತ್ತಿತ್ತು. ಹೀಗಾಗಿ ತನಿಖೆಯು ತಮ್ಮ ನಿಯಂತ್ರಣದಲ್ಲಿರುವಂತೆ ನೋಡಿಕೊಳ್ಳುವುದಕ್ಕಾಗಿಯೇ ಎನ್‌ಐಎಗೆ ಹಸ್ತಾಂತರ ಮಾಡಲಾಗಿದೆ ಹಾಗೂ ತನಿಖೆಯೇ ಶಿಕ್ಷೆಯಾಗುವ ರೀತಿಯಲ್ಲಿ ತನಿಖೆಯನ್ನು ನಡೆಸಲಾಗುತ್ತಿದೆ.

ಪ್ರಕರಣವು ಎನ್‌ಐಎಗೆ ಹಸ್ತಾಂತರವಾದರೂ ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದ ತನಿಖೆಯನ್ನು ಹಾಲಿ ಅಧಿಕಾರದಲ್ಲಿರುವ ತ್ರಿಪಕ್ಷೀಯ ಸರಕಾರವು ಮುಂದುವರಿಸಿ ಅದರ ಹಿಂದಿರುವ ಸಂಚುಕೋರರನ್ನೂ ಹಾಗೂ ಅವರ ನಾಯಕರನ್ನೂ ಶಿಕ್ಷೆಗೆ ಒಳಪಡಿಸಬಹುದು. ಅವರು ಎಲ್ಗಾರ್ ಪರಿಷದ್ ಪ್ರಕರಣವನ್ನು ತನಿಖೆ ಮಾಡಿದ ಪೊಲೀಸರನ್ನೂ ಸಹ ತನಿಖೆಗೆ ಒಳಪಡಿಸಬೇಕು. ಏಕೆಂದರೆ ಅವರು ಸತ್ಯ ಮತ್ತು ನ್ಯಾಯಕ್ಕಿಂತ ಆಳುವ ಪಕ್ಷದ ರಾಜಕೀಯ ಆಸಕ್ತಿಗಳನ್ನೇ ಪ್ರಧಾನವಾಗಿರಿಸಿಕೊಂಡು ತನಿಖೆಯನ್ನು ಮಾಡಿರುವಂತೆ ಕಾಣುತ್ತದೆ. ಈ ಕ್ರಮವನ್ನು ಅನುಸರಿಸಿದರೆ ಹಿಂದಿನ ಮುಖ್ಯಮಂತ್ರಿಗಳ ನಡಾವಳಿಗಳೂ ಸಹ ಪರಿಶೀಲನೆಗೆ ಒಳಪಡುತ್ತದೆ. ಆಗ ಈ ಪ್ರಕರಣವನ್ನು ಹಸ್ತಾಂತರಿಸುವುದರ ಹಿಂದಿನ ರಾಜಕೀಯ ಲೆಕ್ಕಾಚಾರಗಳು ಬಯಲಾಗುತ್ತವೆ. ನ್ಯಾಯಾಲಯದಲ್ಲಿ ನಡೆಯಬೇಕಿರುವ ಕದನದ ದೃಷ್ಟಿಯಿಂದ ಇದಕ್ಕೆ ಹೆಚ್ಚು ಮಹತ್ವವಿಲ್ಲದಿದ್ದರೂ ಬಿಜೆಪಿಗೆ ವಿರುದ್ಧವಾಗಿರುವ ಶಕ್ತಿಗಳಿಗೆ ಅದು ನೈತಿಕ ಶಕ್ತಿಯನ್ನು ತುಂಬುತ್ತದೆ.

Writer - ಕೃಪೆ: Economic and Political Weekly

contributor

Editor - ಕೃಪೆ: Economic and Political Weekly

contributor

Similar News

ಜಗದಗಲ
ಜಗ ದಗಲ