ಗ್ರಾಹಕನ ಜನಾಂಗೀಯವಾದಿ ಟಿಪ್ಟಣಿ: ಮುಸ್ಲಿಮ್ ಉದ್ಯೋಗಿಯನ್ನು ಸಮರ್ಥಿಸಿದ ‘ಐಕಿಯ’

Update: 2020-02-07 17:21 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಫೆ. 7: ಮುಸ್ಲಿಮ್ ಉದ್ಯೋಗಿಯೊಬ್ಬರ ಬಗ್ಗೆ ಗ್ರಾಹಕನೊಬ್ಬ ಮಾಡಿದ ಜನಾಂಗೀಯವಾದಿ ಟಿಪ್ಪಣಿಯ ವಿಷಯದಲ್ಲಿ, ತನ್ನ ಉದ್ಯೋಗಿಯನ್ನು ಸ್ವಿಟ್ಝರ್‌ಲ್ಯಾಂಡ್‌ನ ‘ಐಕಿಯ’ ಮಳಿಗೆಯ ಬೆಂಬಲಿಸಿದೆ ಹಾಗೂ ಇದಕ್ಕಾಗಿ ಅದು ಪ್ರಶಂಸೆಗೆ ಒಳಗಾಗಿದೆ.

ಸ್ವಿಟ್ಸರ್‌ಲ್ಯಾಂಡ್‌ನ ಔಬಾನ್ ನಗರದಲ್ಲಿರುವ ಸ್ವೀಡನ್‌ನ ಪ್ರಖ್ಯಾತ ಪೀಠೋಪಕರಣಗಳ ಮಳಿಗೆಗೆ ಭೇಟಿ ನೀಡಿದ ಬಳಿಕ, ಗ್ರಾಹಕನು ಆನ್‌ಲೈನ್‌ನಲ್ಲಿ ಟಿಪ್ಪಣಿಯನ್ನು ಮಾಡಿದ್ದನು. ‘‘ಶಿರವಸ್ತ್ರ ಧರಿಸಿದ ಕ್ಯಾಶಿಯರನ್ನು ನೋಡಿ ತುಂಬಾ ಕೆಟ್ಟದೆನಿಸಿತು’’ ಎಂದು ಗ್ರಾಹಕನು ಆನ್‌ಲೈನ್‌ನಲ್ಲಿ ಬರೆದಿದ್ದನು. ‘‘ನಾನು ಇನ್ನೊಮ್ಮೆ ಆ ಅಂಗಡಿಗೆ ಕಾಲಿಡುವುದಿಲ್ಲ’’ ಎಂದಿದ್ದನು.

 ಇದಕ್ಕೆ ಪ್ರತಿಕ್ರಿಯಿಸಿರುವ ಐಕಿಯ, ‘‘ನಮ್ಮ ಕಂಪೆನಿಯ ಮೌಲ್ಯಗಳು ಸ್ಪಷ್ಟವಾಗಿವೆ: ಜನರ ಮೂಲ, ಲೈಂಗಿಕ ಪ್ರವೃತ್ತಿ ಅಥವಾ ಧರ್ಮವನ್ನು ಪರಿಗಣಿಸದೆ ನಾವು ಎಲ್ಲರನ್ನೂ ಗೌರವಿಸುತ್ತೇವೆ. ಬಟ್ಟೆಗಳ ಆಧಾರದಲ್ಲಿ ಓರ್ವ ವ್ಯಕ್ತಿಯ ಬಗ್ಗೆ ನೀವು ಅಭಿಪ್ರಾಯಕ್ಕೆ ಬರುವ ಮೊದಲು, ನೀವು ಅವರ ಬಗ್ಗೆ ತಿಳಿಯಬೇಕು’’ ಎಂದು ಹೇಳಿದೆ.

‘‘ನಿಮ್ಮ ಟಿಪ್ಪಣಿಯು ಸ್ಪಷ್ಟವಾಗಿ ತಾರತಮ್ಯಪೂರಿತವಾಗಿದ್ದು, ನಾವು ಅದನ್ನು ಸ್ವೀಕರಿಸುವುದಿಲ್ಲ. ನಿಮಗೆ ವೈಯಕ್ತಿಕ ಅಭಿಪ್ರಾಯಗಳನ್ನು ಹೊಂದುವ ಹಕ್ಕು ಖಂಡಿತವಾಗಿಯೂ ಇದೆ. ಆದರೆ, ಅದನ್ನು ಬಹಿರಂಗವಾಗಿ ಈ ರೀತಿಯಲ್ಲಿ ವ್ಯಕ್ತಪಡಿಸುವ ಮೂಲಕ ನೀವು ಕಾನೂನು ಉಲ್ಲಂಘಿಸಿದ್ದೀರಿ. ಇಂಥ ವಿಚಾರಗಳನ್ನು ಹೊಂದಿರುವ ನೀವು ಇನ್ನೊಮ್ಮೆ ‘ಅಂಗಡಿಗೆ ಕಾಲಿಡದಿರುವುದಕ್ಕೆ ನಾವು ಖಂಡಿತಾ ದುಃಖಿಸುವುದಿಲ್ಲ’’ ಎಂದು ಅಂಗಡಿ ಹೇಳಿದೆ.

ಐಕಿಯದ ನಿಲುವಿಗೆ ಆನ್‌ಲೈನ್‌ನಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಿನವರು ಅದಕ್ಕೆ ‘5 ಸ್ಟಾರ್’ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News