ಆಸ್ಟ್ರೇಲಿಯದಲ್ಲಿ ಜಡಿಮಳೆ: ಕಡಿಮೆಯಾಗುತ್ತಿರುವ ಕಾಡ್ಗಿಚ್ಚು

Update: 2020-02-07 17:42 GMT

ಸಿಡ್ನಿ (ಆಸ್ಟ್ರೇಲಿಯ), ಫೆ. 7: ಆಸ್ಟ್ರೇಲಿಯದಲ್ಲಿ ಶುಕ್ರವಾರ ಭಾರೀ ಮಳೆ ಸುರಿಯುತ್ತಿದ್ದು, ಅಭೂತಪೂರ್ವ ಕಾಡ್ಗಿಚ್ಚು ಬಿಕ್ಕಟ್ಟಿಗೆ ಅಂತಿಮ ತೆರೆ ಎಳೆಯುವ ಸಾಧ್ಯತೆಯಿದೆ. ಮುಸಲಧಾರೆ ಮಳೆಯು ತಿಂಗಳುಗಳಿಂದ ಅನಿಯಂತ್ರಿತವಾಗಿ ಉರಿಯುತ್ತಿದ್ದ ಕಾಡ್ಗಿಚ್ಚನ್ನು ಹಲವು ಪ್ರದೇಶಗಳಲ್ಲಿ ನಂದಿಸಿದೆ.

ದೀರ್ಘಾವಧಿಯ ಕ್ಷಾಮ ಮತ್ತು ದಾಖಲೆಯ ಅಧಿಕ ಉಷ್ಣತೆಯಿಂದಾಗಿ ಹುಟ್ಟಿಕೊಂಡಿದ್ದ ಕಾಡ್ಗಿಚ್ಚು 2.5 ಕೋಟಿ ಎಕರೆಗೂ ಅಧಿಕ ಜಮೀನನ್ನು ಸುಟ್ಟು ಹಾಕಿದೆ ಹಾಗೂ 33 ಜನರನ್ನು ಕೊಂದಿದೆ.

ಸುಮಾರು 100 ಕೋಟಿ ಪ್ರಾಣಿಗಳು ಬೆಂಕಿಯಲ್ಲಿ ಸುಟ್ಟು ಹೋಗಿವೆ ಹಾಗೂ 2,500ಕ್ಕೂ ಅಧಿಕ ಮನೆಗಳು ನಾಶವಾಗಿವೆ.

ನ್ಯೂಸೌತ್‌ವೇಲ್ಸ್ ರಾಜ್ಯದಲ್ಲಿ ಈ ವಾರದ ಆದಿಯಲ್ಲಿ ಆರಂಭವಾದ ಮಳೆ ಮುಂದಿನ ವಾರಕ್ಕೂ ವಿಸ್ತರಿಸುತ್ತದೆ ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ. ಇನ್ನೂ ಉರಿಯುತ್ತಿರುವ ಬೆಂಕಿಯನ್ನು ಅದು ನಂದಿಸಬಹುದು ಎಂದು ನಿರೀಕ್ಷಿಸಲಾಗಿದೆ.

ಶುಕ್ರವಾರ ಮಧ್ಯಾಹ್ನದ ವೇಳೆಗೆ, ನ್ಯೂಸೌತ್‌ವೇಲ್ಸ್ ರಾಜ್ಯದಲ್ಲಿ ಅಪಾಯಕಾರಿ ಮಟ್ಟದಲ್ಲಿ ಯಾವುದೇ ಕಾಡ್ಗಿಚ್ಚು ಉರಿಯುತ್ತಿಲ್ಲ ಎಂದು ಅಗ್ನಿಶಾಮಕ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News