ಮುಗಿದ ಮತ್ತೊಂದು ಸಾಹಿತ್ಯ ಸಮ್ಮೇಳನ

Update: 2020-02-08 18:36 GMT

‘‘ದೇಶದ ಪ್ರಾಂತಗಳ ನಡುವೆ ಸುಲಭ ವ್ಯವಹಾರಕ್ಕೆ ಒಂದು ಭಾಷೆ ಅಗತ್ಯ ಎನಿಸುವುದಾದರೆ ಅದು ಹಿಂದಿಯೇ ಏಕಾಗಬೇಕು?’’ ಎನ್ನುವ ಎಚ್ಚೆಸ್ವಿಯವರ ಪ್ರಶ್ನೆ ಸರಿಯಾದುದೇ ಆಗಿದೆ. ಆದರೆ ವ್ಯವಹಾರ ಸೇತುವಾಗಿ ಸಂಸ್ಕೃತ ಅಥವಾ ಪ್ರಾಕೃತ ಇರಲಿ ಎನ್ನುವ ಸಲಹೆ ಈ ಕಾಲಘಟ್ಟದಲ್ಲಿ ಕಾರ್ಯಸಾಧುವಾದುದಲ್ಲ. ಸಹಜವಾಗಿಯೇ ಇದಕ್ಕೆ ಈಗಾಗಲೇ ಸಮ್ಮೇಳನದೊಳಗೆ ಮತ್ತು ಹೊರಗೆ ತೀವ್ರ ವಿರೋಧ ವ್ಯಕ್ತವಾಗಿದೆ.ಈಗಿರುವಂತೆ ವ್ಯವಹಾರ ಸೇತುವಾಗಿ ಇಂಗ್ಲಿಷ್ ಮುಂದುವರಿಕೆಯೇ ಯೋಗ್ಯವಾದುದು. ಅದು ಈಗಾಗಲೇ ಪ್ರದೇಶಭಾಷೆಗಳನುಸಾರ ಇಂಡಿಯನ್ ಇಂಗ್ಲಿಷ್ ಆಗಿದೆ. ಸಮುದಾಯಗಳ ಒಳಗೊಳ್ಳುವಿಕೆ ಪ್ರಕ್ರಿಯಯಲ್ಲಿ ಬಹುಭಾಷಾ ಸಂಸ್ಕೃತಿಯನ್ನು ಬಳಸಿಕೊಳ್ಳಬೇಕು. ಇದು ಭಾರತದ ಹಿತಾಸಕ್ತಿಯನ್ನು ರಕ್ಷಿಸುತ್ತದೆ. ಬಹುತ್ವವನ್ನು ಒಪ್ಪಿಕೊಳ್ಳಬೇಕಾದ್ದು ಇಂದಿನ ಅಗತ್ಯವಾಗಿದೆ.


‘‘ಕನ್ನಡ ನಾಡಿಗೆ ಕನ್ನಡವೇ ಗತಿ. ಅನ್ಯಥಾ ಶರಣಂ ನಾಸ್ತಿ.ಸಂಸ್ಕೃತವಲ್ಲ, ಇಂಗ್ಲಿಷಲ್ಲ, ಹಿಂದಿಯಲ್ಲ’’
-ಆಚಾರ್ಯ ಬಿ.ಎಂ.ಶ್ರೀಯವರು ಅಂದು ಆಡಿರುವ ಈ ಮಾತುಗಳು ಅಂದಿಗೂ-ಇಂದಿಗೂ-ನಾಳೆಗೂ ಸಂಗತವೆನಿಸುವ ನುಡಿಮುತ್ತುಗಳು.ವರ್ಷಕ್ಕೊಮ್ಮೆ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ, ಇತರ ಕನ್ನಡ ಸಮಾವೇಶಗಳಲ್ಲಿ ಶ್ರೀಯವರ ಎಚ್ಚರಿಕೆಯ ಈ ಮಾತುಗಳು ಒಂದಲ್ಲ ಒಂದು ರೂಪದಲ್ಲಿ ಪ್ರಕಟಗೊಳ್ಳುತ್ತ, ಮಾತೃಭಾಷೆಯ ಬಗೆಗಿನ ನಮ್ಮ ಕಾಳಜಿ -ಕಳಕಳಿ ಮತ್ತು ಜಾಗೃತಿಗಳು ವ್ಯಕ್ತಗೊಳ್ಳುತ್ತ ಕನ್ನಡಿಗರ ಜೀವಂತಿಕೆಗೆ ಮತ್ತೆಮತ್ತೆ ಸಾಕ್ಷಿಯಾಗುತ್ತಿವೆ. ಮೊನ್ನೆಮೊನ್ನೆಯಷ್ಟೆ ಕಲಬುರಗಿಯಲ್ಲಿ ನಡೆದ ಅಖಿಲ ಭಾರತ ಎಂಬತ್ತೈದನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕಲಾಪಗಳೂ ಈ ಮಾತಿಗೆ ಹೊರತಲ್ಲ. ಮೂರು ದಿನಗಳ ಸಮ್ಮೇಳನದ ಕಾರ್ಯಕಲಾಪಗಳಿಗೆ ಚಾಲನೆ ನೀಡಿದ ಸಮ್ಮೇಳನಾಧ್ಯಕ್ಷರಾದ ಖ್ಯಾತ ಕವಿ ಎಚ್.ಎಸ್.ವೆಂಕಟೇಶ ಮೂರ್ತಿಯವರ ಅಧ್ಯಕ್ಷ ಭಾಷಣ ಕನ್ನಡದ ಏಳ್ಗೆ ಕುರಿತ ಚಿಂತನಮಂಥನಕ್ಕೆ ಪುಟಕೊಟ್ಟ ನಾಂದಿಗೀತದಂತಿದೆ.

ಕರ್ನಾಟಕ ಮತ್ತು ಕನ್ನಡದ ಸಮಸ್ಯೆಗಳನ್ನು ಮನಮುಟ್ಟುವಂತೆ ಬಿಂಬಿಸಿ, ವೈಜ್ಞಾನಿಕವಾಗಿ ವಿಶ್ಲೇಷಿಸಿರುವ ಎಚ್ಚೆಸ್ವಿಯವರ ಭಾಷಣ ಅನುಷ್ಠಾನಾರ್ಹ ಪರಿಹಾರೋಪಾಯಗಳನ್ನೂ ಸೂಚಿಸಿರುವುದು ಶ್ಲಾಘನೀಯವಾದುದು.ಮುಖ್ಯವಾಗಿ ಇಂದು ನಮ್ಮನ್ನು ತೀವ್ರವಾಗಿ ಬಾಧಿಸುತ್ತಿರುವ ಕನ್ನಡವನ್ನು ಶಿಕ್ಷಣ ಮಾಧ್ಯಮವಾಗಿ ಕಡ್ಡಾಯವಾಗಿ ಜಾರಿಗೊಳಿಸುವಿಕೆ, ನಮ್ಮ ಸರಕಾರಿ ಶಾಲೆಗಳು ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಸ್ಥಿತಿಗತಿ ಹಾಗೂ ಕರ್ನಾಟಕ ಸರಕಾರದ ಇತ್ತೀಚಿನ ಇಂಗ್ಲಿಷ್ ‘ಮೋಹ’ ಇವುಗಳನ್ನು ಪೃಥಕ್ಕರಿಸಿ ಎಚ್ಚೆಸ್ವಿಯವರು ಆಡಿರುವ ಮಾತುಗಳು ಪೋಷಕರು, ಸರಕಾರ ಆದಿಯಾಗಿ ಸಂಬಂಧಪಟ್ಟವರೆಲ್ಲರೂ ಮನನ ಮಾಡಬೇಕಾದಂಥ ವಿಚಾರಗರ್ಭಿತ ಚಿಂತನಮುಕ್ತಕಗಳು ಎಂದರೆ ಉತ್ಪ್ರೇಕ್ಷೆಯಾಗದು.

ಕರ್ನಾಟಕದಲ್ಲಿ ಕನ್ನಡ ಸೊರಗುತ್ತಿರುವುದಕ್ಕೆ, ವಿಶೇಷವಾಗಿ ಶಿಕ್ಷಣ ರಂಗದಲ್ಲಿ ಅಳಿವುಉಳಿವಿನ ಪ್ರಶ್ನೆಯಾಗಿ ಕಾಡುತ್ತಿರುವುದಕ್ಕೆ ಮುಖ್ಯ ಹೊಣೆಗಾರರು ನಮ್ಮ ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಸರಕಾರ. ಅನ್ಯಭಾಷಿಕರು ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ಮುಂದಿಟ್ಟುಕೊಂಡು ಶಿಕ್ಷಣ ಸಂಸ್ಥೆಗಳು ಇಂಗ್ಲಿಷ್ ಮಾಧ್ಯಮವನ್ನು ಹೇರುತ್ತಿರುವುದು ಹಾಗೂ ಸರಕಾರದ ಚಂಚಲ ನಿಲುವುಗಳೇ ಈ ಸ್ಥಿತಿಗೆ ಕಾರಣ.ಇದರಿಂದಾಗಿ ಕನ್ನಡ ಶಿಕ್ಷಣ ಮಾಧ್ಯಮ ಆತಂಕಕ್ಕೆ ಸಿಲುಕಿದೆ ಎನ್ನುವ ಎಚ್ಚೆಸ್ವಿಯವರ ವಿಶ್ಲೇಷಣೆ ಕಟುವಾಸ್ತವವೇ ಸರಿ. ಶಿಕ್ಷಣ ಮಾಧ್ಯಮ ಇಂಗ್ಲಿಷ್ ಆಗಬೇಕೆಂದು ಹಟ ತೊಟ್ಟು, ಅದನ್ನು ಸಾಧಿಸಲು ನಾನಾ ಬಗೆಯ ವಕ್ರೋಪಾಯಗಳಲ್ಲಿ ತೊಡಗಿರುವ ಶಿಕ್ಷಣ ಸಂಸ್ಥೆಗಳ ಮೂಲ ಉದ್ದೇಶ ಜ್ಞಾನದ ಪ್ರಸಾರ ಅಲ್ಲ, ಲಾಭದ ದಂಧೆ ನಡೆಸುವುದು ಎನ್ನುವ ಅಧ್ಯಕ್ಷರ ಮಾತುಗಳು ನೂರಕ್ಕೆ ನೂರು ಸತ್ಯ. ಈ ಲಾಭದ ದಂಧೆಯ ಯಶಸ್ಸಿಗಾಗಿ ಎಂತಹ ಹುನ್ನಾರಕ್ಕಾದರೂ ಸಿದ್ಧ ಈ ಮಂದಿ. ಇದಕ್ಕೆ ಕಣ್ಣ ಮುಂದೆಯೇ ನಿದರ್ಶನವಿದೆ. 1995ರಲ್ಲಿ ಕರ್ನಾಟಕ ಸರಕಾರ ಕನ್ನಡವನ್ನು ಶಿಕ್ಷಣ ಮಾಧ್ಯಮವನ್ನಾಗಿ ಜಾರಿಗೆ ತಂದಿತಾದರೂ ಸಮ್ಮೇಳನಾಧ್ಯಕ್ಷರು ಯಥಾರ್ಥ ನುಡಿದಿರುವಂತೆ ಶಿಕ್ಷಣ ಸಂಸ್ಥೆಗಳು ಅನ್ಯಭಾಷಿಕರು ಮತ್ತು ಅಲ್ಪಸಂಖ್ಯಾತರ ನೆವ ಮುಂದಿಟ್ಟುಕೊಂಡು ಸರ್ವೋಚ್ಚ ನ್ಯಾಯಾಲಯಕ್ಕೆ ಮೊರೆ ಹೋದ ಕಾರಣ ಅದು ಅಸಿಂಧುವಾಯಿತು.

ತಮ್ಮ ಮಕ್ಕಳು ಯಾವ ಮಾಧ್ಯಮದಲ್ಲಿ ಕಲಿಯಬೇಕೆಂದು ತೀರ್ಮಾನಿಸುವುದು ಪೋಷಕರ ಹಕ್ಕು ಎಂದು ನ್ಯಾಯಾಲಯ ತೀರ್ಪು ನೀಡಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳ ಕನ್ನಡ ಶೋಷಣೆಗೆ ಈ ತೀರ್ಪು ವರವಾಗಿ ಪರಿಣಮಿಸಿತು. ಮಾತೃ ಭಾಷೆಯನ್ನೇ ಶಿಕ್ಷಣ ಮಾಧ್ಯಮವಾಗಿ ಕಡ್ಡಾಯಗೊಳಿಸಲು ಸಂವಿಧಾನಕ್ಕೆ ತಿದ್ದುಪಡಿಮಾಡುವುದೊಂದೇ ಪರಿಹಾರ. ಎಚ್ಚೆಸ್ವಿಯವರು ಹೇಳಿರುವಂತೆ ಮತ್ತೆ ನ್ಯಾಯಾಂಗದ ಮೊರೆಹೋಗುವುದು ಮತ್ತು ಸಂವಿಧಾನ ತಿದ್ದುಪಡಿಗಾಗಿ ರಾಜಕೀಯ ಒತ್ತಡ ಹೇರುವುದು ನಮ್ಮ ಮುಂದಿರುವ ಮಾರ್ಗಗಳು. ಕನ್ನಡ ಸಾಹಿತ್ಯ ಪರಿಷತ್‌ನ ಕಾರ್ಯಕಾರಿ ಸಮಿತಿ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು. ರಾಜಕಾರಣಿಗಳೂ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು. ಪೋಷಕರ ಬೇಡಿಕೆಯ ಕಾರಣ ನಾವು ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ನಡೆಸುವಂತಾಗಿದೆ ಎಂಬ ವಾದವನ್ನು ಅಲ್ಲಗಳೆದಿರುವ ಎಚ್ಚೆಸ್ವಿಯವರು ‘‘ಪೋಷಕರ ಬೇಡಿಕೆಯನ್ನು ಈಡೇರಿಸುವುದು ನಮ್ಮ ಧರ್ಮ’’ ಎಂಬ ವಾದಕ್ಕೆ ‘‘ಅದು ವ್ಯಾಪಾರಿ ಧರ್ಮ’’ ಎಂದು ಕಟುವಾಗಿ ಪ್ರತಿಕ್ರಿಯಸಿರುವುದು ವಸ್ತುಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಶಿಕ್ಷಣ ಒಂದು ವ್ಯಾಪಾರೋದ್ಯಮವಲ್ಲ, ಅದು ಎಳೆಯರ ವ್ಯಕ್ತಿತ್ವ ರೂಪಣದ ಸೃಷ್ಟಿಶಾಲೆ ಎಂದು ಶಿಕ್ಷಣದ ಅನನ್ಯ ಅಸ್ಮಿತೆಯನ್ನು ಗುರುತಿಸಿರುವ ಎಚ್ಚೆಸ್ವಿಯವರು ಇಂಗ್ಲಿಷ್ ಶಾಲೆಗಳು ಶಿಕ್ಷಣದ ಮಟ್ಟದ ಕುಸಿತಕ್ಕೆ ಕಾರಣವಾಗಿವೆ ಎನ್ನುವ ಆತಂಕವನ್ನು ವ್ಯಕ್ತಪಡಿಸಿರುವುದು ಇಂದಿನ ಶೈಕ್ಷಣಿಕ ಪರಿಸ್ಥಿತಿಯ ಕರಾರುವಾಕ್ಕಾದ ವ್ಯಾಖ್ಯಾನವೇ ಆಗಿದೆ.

ಕನ್ನಡ ಅನ್ನ ಕೊಡುವ ಭಾಷೆಯಲ್ಲ ಎನ್ನುವುದು ಇಂಗ್ಲಿಷ್ ಮಾಧ್ಯಮದ ಪ್ರತಿಪಾದಕರು ಹೂಡುವ ಪ್ರಬಲ ಪ್ರತಿಪಾದನೆ. ಪೋಷಕರ ಚಿಂತನೆಯೂ ಇದೇ ಆಗಿದೆ. ಇದೊಂದು ವಿತಂಡ ವಾದ. ಇಂತಹ ವಿತಂಡ ವಾದಕರಿಗೆ ಸಮ್ಮೇಳನಾಧ್ಯಕ್ಷರು ಕೇಳುತ್ತಾರೆ: ‘‘ನೀವು ಇಂಗ್ಲಿಷನ್ನು ಅನ್ನಕೊಡುವ ಭಾಷೆ ಎನ್ನುತ್ತಿರೋ? ಹಾಗಾದರೆ ನಮ್ಮ ರೈತರು ಇಂಗ್ಲಿಷ್‌ನ ಹಂಗಿಲ್ಲದೆ ಅನ್ನ ಬೆಳೆಯುವ ನಿತ್ಯ ಅನುಷ್ಠಾನದಲ್ಲಿ ತೊಡಗಿದ್ದಾರಲ್ಲ, ಇದಕ್ಕೆ ಏನನ್ನುತ್ತೀರಿ?’’ ಈ ಪ್ರಶ್ನೆಗೆ ಉತ್ತರ ಕೊಡುವ ಪ್ರಯತ್ನವನ್ನು ರಾಜ್ಯ ಸರಕಾರ ಮಾಡಬೇಕಿದೆ. ಎಚ್ಚೆಸ್ವಿಯವರೇ ಹೇಳಿರುವಂತೆ, ಕರ್ನಾಟಕದಲ್ಲಿ ಕನ್ನಡವನ್ನು ಅನ್ನಕೊಡುವ ಭಾಷೆಯನ್ನಾಗಿಸುವುದು ಎಂದರೆ, ಕರ್ನಾಟಕದಲ್ಲಿ ಕನ್ನಡಿಗರಿಗೆ ಸಿಂಹಪಾಲು ಉದ್ಯೋಗ ಮೀಸಲಾತಿ ಜಾರಿಗೆ ತಂದಾಗ ಮಾತ್ರ ಸಾಧ್ಯ. ಡಾ.ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರಲು ಇನ್ನೂ ಮೀನಮೇಷ ಎಣಿಸುತ್ತಿರುವ ರಾಜ್ಯ ಸರಕಾರ ಈ ಬಗ್ಗೆ ಇನ್ನಾದರೂ ಬದ್ಧತೆಯ ಮನಃಪೂರ್ವಕ ಕ್ರಮಗಳನ್ನು ಕೈಗೊಳ್ಳಬೇಕು. ಅಂತೆಯೇ ಏಕರೂಪ ಶಿಕ್ಷಣ ಜಾರಿಗೆ ತರಲು ಆದ್ಯ ಗಮನ ಕೊಡಬೇಕಿದೆ.

ಒಂದು ದೇಶ-ಒಂದು ಭಾಷೆ ಎಂಬ ನೆಪದಲ್ಲಿ ಕೇಂದ್ರ ಸರಕಾರ ಮತ್ತೆ ಹಿಂದಿಯನ್ನು ಹೇರುವ ಪ್ರಯತ್ನಗಳನ್ನು ಪುನುರುಜ್ಜೀವ ಗೊಳಿಸಿರುವ ಈ ದಿನಗಳಲ್ಲಿ ಹಿಂದಿಯ ಬಗ್ಗೆ ನಮ್ಮ ಸರಕಾರದ ನಿಲುವು ಏನಾಗಬೇಕು? ಖಂಡಿತವಾಗಿಯೂ ಹಿಂದಿಗೆ ಸಮಾನ ಸ್ಥಾನಮಾನ ಕೊಡುವುದಲ್ಲ ಎನ್ನುವುದನ್ನು ಎಚ್ಚೆಸ್ವಿ ತಮ್ಮ ಭಾಷಣದಲ್ಲಿ ಖಚಿತವಾಗಿ ವ್ಯಕ್ತಪಡಿಸಿದ್ದಾರೆ. ಹಿಂದಿ ಹೇರಿಕೆಯನ್ನು ಸ್ಪಷ್ಟವಾಗಿ ವಿರೋಧಿಸಿರುವ ಅವರು ‘‘ಹಿಂದಿಗೆ ಸಮಾನತೆಯಲ್ಲೂ ಪ್ರಥಮ ಸ್ಥಾನ ಎಂಬ ಮಾತನ್ನು ನಾನು ಒಪ್ಪಲಾರೆ’’ ಎಂದಿರುವುದು ಯಥಾರ್ಥವಾದುದು. ತ್ರಿಭಾಷಾ ಸೂತ್ರವನ್ನು ಕರ್ನಾಟಕದಲ್ಲಿ ಮಾತ್ರ ಮಾನ್ಯಮಾಡುವುದಲ್ಲ. ಭಾರತದ ಎಲ್ಲ ಪ್ರಾಂತಗಳಿಗೂ ಸಮಾನವಾಗಿ ಅನ್ವಯವಾಗಬೇಕಾದ ಸೂತ್ರವದು. ದಕ್ಷಿಣ ಭಾರತದ ಮಕ್ಕಳಿಗೆ ಮಾತ್ರ ಮೂರು ಭಾಷೆ; ಹಿಂದಿ ಮಾತೃಭಾಷೆಯಾಗಿರುವ ಉತ್ತರದ ಬಹುಪಾಲು ಪ್ರಾಂತಗಳ ಮಕ್ಕಳಿಗೆ ಎರಡು ಭಾಷೆ ಎಂಬಂತಾಗಬಾರದು ಎನ್ನುವುದು ನ್ಯಾಯೋಚಿತವಾದುದೇ. ಆದರೆ ತ್ರಿಭಾಷಾ ಸೂತ್ರ ಈಗ ಜಾರಿಯಲ್ಲಿರುವುದು ಹಾಗೆಯೇ. ಉತ್ತರ ಭಾರತದ ರಾಜ್ಯಗಳಲ್ಲಿ ತ್ರಿಭಾಷಾ ಸೂತ್ರವನ್ನು ಕಟ್ಟುನಿಟ್ಟಾಗಿ ಜಾರಿಗೆ ತರದೇ ಇರುವುದರಿಂದ ಕನ್ನಡವೂ ಸೇರಿದಂತೆ ದಕ್ಷಿಣದ ಭಾಷೆಗಳಿಗೆ ಆಗುತ್ತಿರುವ ಅಪಚಾರದ ಬಗ್ಗೆ ನಮ್ಮ ಚುನಾಯಿತ ಪ್ರತಿನಿಧಿಗಳು ಸೊಲ್ಲೆತ್ತದಿರುವುದು ಕನ್ನಡದ ಹಿತ ಕುರಿತು ಅವರ ದಿವ್ಯನಿರ್ಲಕ್ಷ್ಯಕ್ಕೆ ಜ್ವಲಂತ ಉದಾಹರಣೆ.

‘‘ದೇಶದ ಪ್ರಾಂತಗಳ ನಡುವೆ ಸುಲಭ ವ್ಯವಹಾರಕ್ಕೆ ಒಂದು ಭಾಷೆ ಅಗತ್ಯ ಎನಿಸುವುದಾದರೆ ಅದು ಹಿಂದಿಯೇ ಏಕಾಗಬೇಕು?’’ ಎನ್ನುವ ಎಚ್ಚೆಸ್ವಿಯವರ ಪ್ರಶ್ನೆ ಸರಿಯಾದುದೇ ಆಗಿದೆ. ಆದರೆ ವ್ಯವಹಾರ ಸೇತುವಾಗಿ ಸಂಸ್ಕೃತ ಅಥವಾ ಪ್ರಾಕೃತ ಇರಲಿ ಎನ್ನುವ ಸಲಹೆ ಈ ಕಾಲಘಟ್ಟದಲ್ಲಿ ಕಾರ್ಯಸಾಧುವಾದುದಲ್ಲ. ಸಹಜವಾಗಿಯೇ ಇದಕ್ಕೆ ಈಗಾಗಲೇ ಸಮ್ಮೇಳನದೊಳಗೆ ಮತ್ತು ಹೊರಗೆ ತೀವ್ರ ವಿರೋಧ ವ್ಯಕ್ತವಾಗಿದೆ.ಈಗಿರುವಂತೆ ವ್ಯವಹಾರ ಸೇತುವಾಗಿ ಇಂಗ್ಲಿಷ್ ಮುಂದುವರಿಕೆಯೇ ಯೋಗ್ಯವಾದುದು. ಅದು ಈಗಾಗಲೇ ಪ್ರದೇಶಭಾಷೆಗಳನುಸಾರ ಇಂಡಿಯನ್ ಇಂಗ್ಲಿಷ್ ಆಗಿದೆ. ಸಮುದಾಯಗಳ ಒಳಗೊಳ್ಳುವಿಕೆ ಪ್ರಕ್ರಿಯೆಯಲ್ಲಿ ಬಹುಭಾಷಾ ಸಂಸ್ಕೃತಿಯನ್ನು ಬಳಸಿಕೊಳ್ಳಬೇಕು. ಇದು ಭಾರತದ ಹಿತಾಸಕ್ತಿಯನ್ನು ರಕ್ಷಿಸುತ್ತದೆ. ಬಹುತ್ವವನ್ನು ಒಪ್ಪಿಕೊಳ್ಳಬೇಕಾದ್ದು ಇಂದಿನ ಅಗತ್ಯವಾಗಿದೆ. ನಾವು ಬಹುಸಂಸ್ಕೃತಿಯನ್ನು ಕಾಪಾಡಿಕೊಳ್ಳದಿದ್ದಲ್ಲಿ ಭವಿಷ್ಯದ ಪೀಳಿಗೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎನ್ನುವ ಸಮ್ಮೇಳನಾಧ್ಯಕ್ಷರ ಎಚ್ಚರಿಕೆಯ ಮಾತು ಸಕಾಲಿಕವಾದುದು. ಏಕ ಸಂಸ್ಕೃತಿ ಪ್ರತಿಪಾದಿಸುವ ಪ್ರಭೃತಿಗಳು ಮನನ ಮಾಡಬೇಕಾದ ಮಾತಿದು.

ಕನ್ನಡ ಸಾಹಿತ್ಯ ಪರಿಷತ್‌ನ ಸ್ವಾಯತ್ತತೆ ಮತ್ತು ಇತ್ತೀಚೆಗೆ ಶೃಂಗೇರಿಯಲ್ಲಿ ನಡೆದ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡ ಮತ್ತು ಸಂಸ್ಕೃತಿ ಶಾಖೆಯ ಸಚಿವ ಸಿ.ಟಿ.ರವಿಯವರ ಆದೇಶಾನುಸಾರ ಅನುದಾನ ತಡೆಹಿಡಿದ ಕ.ಸಾ.ಪ. ಅಧ್ಯಕ್ಷ ಮನು ಬಳಿಗಾರರ ನಿಲುವು ಸಮ್ಮೇಳನದಲ್ಲಿ ತೀವ್ರ ಟೀಕೆಗೆ ಗುರಿಯಾಗಿರುವುದು ಅನಿರೀಕ್ಷಿತವೇನಲ್ಲ. ಕೆಲವರು ಕಸಾಪ ಅಧ್ಯಕ್ಷ ಮನುಬಳಿಗಾರರ ರಾಜೀನಾಮೆಗೆ ಒತ್ತಾಯಪಡಿಸಿದ್ದರೆ ಇನ್ನು ಕೆಲವರು ಸಮ್ಮೇಳನಾಧ್ಯಕ್ಷರ ಭಾಷಣ ಈ ಬಗ್ಗೆ ಮೌನತಾಳಿರುವುದನ್ನು ಆಕ್ಷೇಪಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಒಂದು ಸ್ವಾಯತ್ತ ಸಂಸ್ಥೆ. ಸರಕಾರದಿಂದ ಅನುದಾನ ಪಡೆದರೂ ಅದು ಸರಕಾರಕ್ಕೆ ಮಂಡಿಯೂರಿ ವಿಧೇಯತೆಯನ್ನು ಪ್ರದರ್ಶಿಸಬೇಕಿಲ್ಲ. ನಾಡಿನ ಭಾಷೆ-ಸಂಸ್ಕೃತಿಗಳ ಹಿತರಕ್ಷಣೆಗಾಗಿ ಕಸಾಪದಂತಹ ಸಂಸ್ಥೆಗಳಿಗೆ ಅನುದಾನ ನೀಡುವುದು ಯಾವುದೇ ಪಕ್ಷದ ಸರಕಾರವಿರಲಿ ಅದರ ಸಾಂಸ್ಕೃತಿಕ ಹೊಣೆಗಾರಿಕೆ. ಹಾಗೆಯೇ ತೆರಿಗೆ ಮೂಲವಾದ ಸರಕಾರದ ಆದಾಯದಲ್ಲಿ ನಾಡುನುಡಿ ರಕ್ಷಿಸುವ, ಬೆಳೆಸುವ ಕಾರ್ಯಗಳಿಗಾಗಿ ತನ್ನ ಪಾಲನ್ನು ಬೇಡುವುದು ಕಸಾಪದಂತಹ ಸಂಸ್ಥೆಗಳ ಹಕ್ಕಾಗಿದೆ. ತನ್ನ ಸ್ವಾಯತ್ತತೆ ಮತ್ತು ಹಕ್ಕುಗಳನ್ನು ಅರಿತುಕೊಂಡು ಕಸಾಪ ಅಧ್ಯಕ್ಷರು ಶೃಂಗೇರಿ ಸಮ್ಮೇಳನದ ವಿಷಯದಲ್ಲಿ ಇನ್ನಷ್ಟು ವಿವೇಚನೆಯಿಂದ ವರ್ತಿಸಬಹುದಿತ್ತು. ಆದರೆ ಬೆಳಗಾದರೆ ನಡೆಯಬೇಕಿದ್ದ ಕಲಬುರರ್ಗಿ ಸಮ್ಮೇಳನಕ್ಕಾಗಿ ವಿಶೇಷ ಅನುದಾನಕ್ಕೆ ಸರಕಾರದೆದುರು ಕೈಒಡ್ಡಿ ನಿಂತಿದ್ದ ಪರಿಸ್ಥಿತಿಯಲ್ಲಿ ಅಧ್ಯಕ್ಷರಿಗೆ ಹಣ ನೀಡಕೂಡದೆಂಬ ಸಚಿವರ ಆಜ್ಞೆ ಪಾಲಿಸುವುದು ಅನಿವಾರ್ಯವೆನಿಸಿರಬಹುದು. ಆದರೆ ಇದು ಅನಿವಾರ್ಯವೇನಾಗಿರಲಿಲ್ಲ.

ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅನುದಾನರದ್ದು ವಿಚಾರವು ಸರಕಾರದ ನಿಲುವಾಗಿತ್ತು. ಇದರಲ್ಲಿ ನನ್ನ ಪಾತ್ರವೇನಿಲ್ಲ ಎಂದು ಮನುಬಳಿಗಾರರು ಸಮಜಾಯಿಷಿ ನೀಡಿರುವುದಾಗಿ ವರದಿಯಾಗಿದೆ. ಇದು ಹೊಣೆಗಾರಿಕೆಯಿಂದ ಜಾರಿಕೊಳ್ಳುವ ಪ್ರಯತ್ನವಷ್ಟೆ. ಅಧ್ಯಕ್ಷರು ತಮ್ಮ ಸ್ವಾಯತ್ತ ಅಧಿಕಾರವನ್ನು ಚಲಾಯಿಸಿ ಹಣ ಬಿಡುಗಡೆ ಮಾಡಿ ಶೃಂಗೇರಿ ಕನ್ನಡ ಸಾಹಿತ್ಯ ಪರಿಷತ್‌ನ ಬೆಂಬಲಕ್ಕೆ ನಿಂತಿದ್ದರೆ ಅದು ನ್ಯಾಯೋಚಿತ ನಡೆಯಾಗುತ್ತಿತ್ತು. ಇಂತಹ ನ್ಯಾಯೋಚಿತ ನಡೆಯಿಂದ ಏನೊಂದು ಅನಾಹುತವೂ ಆಗುತ್ತಿಲಿಲ್ಲ. ಪ್ರತಿಯಾಗಿ ಕಸಾಪದ ಮಾನಗೌರವಗಳು ಉಳಿಯುತ್ತಿದ್ದವು. ಇಂತಹ ಪರಿಸ್ಥಿತಿಯಲ್ಲಿ ಕಸಾಪ ತನ್ನ ಮಾನಗೌರವಗಳನ್ನೂ ಸ್ವಾಯತ್ತತೆಯನ್ನೂ ಉಳಿಸಿಕೊಂಡು ಕನ್ನಡದ ಗೌರವವನ್ನು ಎತ್ತಿಹಿಡಿಯಲು ಏನು ಮಾಡಬೇಕು? ಅದನ್ನು ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಇತಿಮಿತಿಯಲ್ಲೇ ತೋರಿಸಿಕೊಟ್ಟಿದೆ. ಕಸಾಪ ಸಾಹಿತ್ಯ ಸಮ್ಮೇಳನಗಳಿಗಾಗಿ ವಿಶೇಷ ಅನುದಾನಕ್ಕಾಗಿ ಸರಕಾರದ ಮುಂದೆ ಕೈಒಡ್ಡದೆ ತನ್ನ ಸೀಮಿತ ಸಂಪನ್ಮೂಲದಲ್ಲೇ ವಾರ್ಷಿಕ ಸಮ್ಮೇಳನಗಳನ್ನು ನಡೆಸಲಾಗದೇ? ಸಾಹಿತ್ಯ ಸಮ್ಮೇಳನ ಭೂರಿ ಭೋಜನದ ಅದ್ದೂರಿ ‘ಭೋಗ’ ಸಮ್ಮೇಳನವೇ ಆಗಬೇಕೇ? ಮಿತವ್ಯಯದಲ್ಲಿ ಸಮ್ಮೇಳನ ನಡೆಸುವುದು ಸಾಧ್ಯವಿಲ್ಲವೇ? ಜಿಲ್ಲೆ ಮತ್ತು ತಾಲೂಕು ಮಟ್ಟಕ್ಕೆ ಕಸಾಪ ವಿಸ್ತರಿಸಿದ್ದು ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಈಗ ಸಮ್ಮೇಳನ ನಡೆಸಲಾಗುತ್ತಿದೆ. ಇವು ಕನ್ನಡದ ಸಮಸ್ಯೆಗಳು ಮತ್ತು ಹಿತಾಸಕ್ತಿಗಳ ಚರ್ಚೆಗೆ ಮಿನಿವೇದಿಕೆಗಳಾಗಿವೆ. ಹೀಗಿರುವಾಗ ಕಸಾಪ ವರ್ಷಕ್ಕೊಮ್ಮೆ ಅದ್ದೂರಿಯಾಗಿ ದೊಡ್ಡ ಪ್ರಮಾಣದಲ್ಲಿ ಸಾಹಿತ್ಯ ಸಮ್ಮೇಳನ ನಡೆಸುವ ಬದಲು ಮೂರು ವರ್ಷಕ್ಕೊಮ್ಮೆ ಏಕೆ ನಡೆಸಬಾರದು ಎಂಬ ಸಲಹೆ ಹಿಂದೊಮ್ಮೆ ಕೇಳಿಬಂದಿತ್ತು. ಕನ್ನಡ ಸಾಹಿತ್ಯ ಪರಿಷತ್ತು ಸರಕಾರದ ವಿಶೇಷ ಅನುದಾನದ ಹಂಗು ಮತ್ತು ಮಂತ್ರಿಮಹೋದಯರು ಮೊದಲಾದ ರಾಜಕೀಯ ವ್ಯಕ್ತಿಗಳ ಹಂಗಿನಿಂದ ಬಿಡಿಸಿಕೊಂಡು ತನ್ನ ಗೌರವ, ಸ್ವಾಯತ್ತತೆಗಳೆಂಬ ಶೀಲ ಪಾವಿತ್ರ್ಯಗಳನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಯೋಚಿಸಬೇಕಾದ ಸಂದರ್ಭ ಈಗ ಮತ್ತೊಮ್ಮೆ ಒದಗಿ ಬಂದಿದೆ,

ಕೆಲವು ನಿರ್ಣಯಗಳನ್ನು ಅಂಗೀಕರಿಸುವುದರೊಂದಿಗೆ ಮೂರು ದಿನಗಳ ಕಲಬುರಗಿ ಸಮ್ಮೇಳನ ಮುಕ್ತಾಯಗೊಂಡಿದೆ. ರಾಜ್ಯದಲ್ಲಿನ ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕಡ್ಡಾಯವಾಗಬೇಕು ಹಾಗೂ ಗಡಿಪ್ರದೇಶದಲ್ಲಿನ ಕನ್ನಡ ಶಾಲೆಗಳು ಮುಚ್ಚದಂತೆ ಕ್ರಮ ಕೈಗೊಳ್ಳಬೇಕೆನ್ನುವುದು ಎರಡು ಮುಖ್ಯ ನಿರ್ಣಯಗಳು.(ಕರ್ನಾಟಕದಲ್ಲಿ ಕನ್ನಡ ಶಿಕ್ಷಣ ಮಾಧ್ಯಮವಾಗಬೇಕು, ಇದು ಬಹಳ ವರ್ಷಗಳ ಬೇಡಿಕೆ. ಗಡಿಪ್ರದೇಶದಲ್ಲೇನು, ರಾಜ್ಯದೊಳಗೆ ಎಲ್ಲೂ ಕನ್ನಡ ಶಾಲೆಗಳನ್ನು ಮುಚ್ಚಬಾರದು. ಆದರೆ ವಿದ್ಯಾರ್ಥಿಗಳ ಕೊರತೆಯಿಂದಾಗಿ ಎಷ್ಟೋ ಸರಕಾರಿ ಕನ್ನಡ ಶಾಲೆಗಳು ಇಂದು ಮುಚ್ಚುವ ಸ್ಥಿತಿಯಲ್ಲಿವೆ ಎಂದು ವರದಿಯಾಗಿದೆ.) ಈ ನಿರ್ಣಯಗಳನ್ನು ಅನುಷ್ಠಾನಗೊಳಿಸಬೇಕಾದ್ದು ಸರಕಾರದ ಹೊಣೆ. ಆದರೆ ಹಾಗೆ ಆಗುತ್ತಿದೆಯೇ? ಇಷ್ಟೂ ವರ್ಷಗಳಿಂದ ಸಾಹಿತ್ಯ ಸಮ್ಮೇಳನದಲ್ಲಿ ಠರಾವುಗಳನ್ನು ಅಂಗೀಕರಿಸುವುದು ಒಂದು ಔಪಚಾರಿಕ ಕ್ರಮವಾಗಿ ಬಿಟ್ಟಿದೆ.

ಆದರೆ ಇಲ್ಲಿಯವರೆಗಿನ ಸರಕಾರಗಳು ಸಾಹಿತ್ಯ ಸಮ್ಮೇಳನಗಳ ನಿರ್ಣಯಗಳನ್ನು ಗಂಭೀರವಾಗಿ ತೆಗೆದುಕೊಂಡು ಅನುಷ್ಠಾನಕ್ಕೆ ತಂದ ನಿದರ್ಶನಗಳಿಲ್ಲ. ಸರಕಾರವೇನು, ಸಾಹಿತ್ಯ ಪರಿಷತ್ತೂ ಸಹ ಸಮ್ಮೇಳನದ ನಂತರ ನಿರ್ಣಯಗಳನ್ನು ಜಾರಿಗೆತರುವಂತೆ ಮುಂದುವರಿದ ಕ್ರಮಗಳನ್ನು ಕೈಗೊಂಡ ನಿದರ್ಶನಗಳೂ ಇಲ್ಲ. ನಿರ್ಣಯಗಳ ಗತಿ ಏನಾಯಿತು ಎಂದು ನೋಡುವುದಕ್ಕೆ ಪರಿಷತ್‌ನಲ್ಲಿ ಒಂದು ವ್ಯವಸ್ಥೆಯೂ ಇಲ್ಲ. ನೆನಪಿನ ಓಲೆಗಳನ್ನು ಕಸಾಪ ಬರದಿರಬಹುದಷ್ಟೆ. 2011 ಮತ್ತು 2015ರಲ್ಲಿ ನಡೆದ ಸಮ್ಮೇಳನಗಳಲ್ಲೂ ಶಿಕ್ಷಣ ಮಾಧ್ಯಮವಾಗಿ ಕಡ್ಡಾಯಗೊಳಿಸುವಂತೆ ಸರಕಾರವನ್ನು ಆಗ್ರಹಪಡಿಸುವ ಠರಾವುಗಳನ್ನು ಅಂಗೀಕರಿಸಲಾಗಿದೆ. ಮುಂದಿನ ಸಮ್ಮೇಳನದ ಹೊತ್ತಿಗೆ ಕನ್ನಡವನ್ನು ಕಡ್ಡಾಯವಾಗಿ ಜಾರಿಗೆ ತರದಿದ್ದರೆ ಪರಿಷತ್‌ನಿಂದ ತೀವ್ರಸ್ವರೂಪದ ಜನಾಂದೋಲನವನ್ನು ಹಮ್ಮಿಕೊಳ್ಳಲಾಗುವುದೆಂದು ಅಂದಿನ ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿಯವರು 2015ರಲ್ಲಿ ಶ್ರವಣಬೆಳಗೊಳದಲ್ಲಿ ನಡೆದ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದರು.ಆದರೆ ರಾಜ್ಯದಲ್ಲಿ ಕನ್ನಡ ಕಡ್ಡಾಯವಾಗಿ ಶಿಕ್ಷಣ ಮಾಧ್ಯಮವಾಗಲಿಲ್ಲ. ಕಸಾಪ ಜನಾಂದೋಲನ ಸಂಘಟಿಸಿದ ಸಾಕ್ಷಿಪುರಾವೆಗಳೂ ಇಲ್ಲ. ಇದು ಠರಾವುಗಳ ಪರಿ 

Writer - ಜಿ.ಎನ್. ರಂಗನಾಥ ರಾವ್

contributor

Editor - ಜಿ.ಎನ್. ರಂಗನಾಥ ರಾವ್

contributor

Similar News