ಕೊರೋನ ವೈರಸ್ ವಿರುದ್ಧ ಹೋರಾಟ: ಭಾರತದಿಂದ ಚೀನಾಗೆ ನೆರವಿನ ಕೊಡುಗೆ

Update: 2020-02-09 18:08 GMT

ಹೊಸದಿಲ್ಲಿ,ಜ.9: ಚೀನಾದಲ್ಲಿ 800ಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡು, 40 ಸಾವಿರಕ್ಕೂ ಅಧಿಕ ಮಂದಿ ಸೋಂಕು ಪೀಡಿತರನ್ನಾಗಿಸಿರುವ ಮಾರಣಾಂತಿಕ ಕೊರೋನ ವೈರಸ್ ರೋಗ ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ಭಾರತದ ನೆರವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಕ್ಸಿಜಿನ್‌ಪಿಂಗ್ ಅವರಿಗೆ ಪತ್ರ ಬರೆದಿದ್ದಾರೆ.

ಕೊರೋನ ವೈರಸ್‌ನಿಂದಾಗಿ ಚೀನಾಲ್ಲಿ ನೂರಾರು ಜನ ಸಾವಿಗೀಡಾಗಿರುವುದಕ್ಕ್ಕೆ ಪ್ರಧಾನಿ ಪತ್ರದಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ ಹಾಗೂ ಈ ಭಯಾನಕ ಸೋಂಕು ರೋಗದ ವಿರುದ್ಧ ಹೋರಾಡುವಲ್ಲಿ ಭಾರತದ ನೆರವಿನ ಕೊಡುಗೆಯನ್ನು ಅವರು ಘೋಷಿಸಿದ್ದಾರೆ.

   ಕೊರೋನ ವೈರಸ್‌ಗೆ ಅತ್ಯಧಿಕವಾಗಿ ಬಾಧಿತವಾಗಿರುವ ಚೀನಾದ ನಗರ ವೊಹಾನ್‌ನಿಂದ ಬಹುತೇಕ ವಿದ್ಯಾರ್ಥಿಗಳು ಸೇರಿದಂತೆ 600ಕ್ಕೂ ಅಧಿಕ ಮಂದಿ ಭಾರತೀಯರನ್ನು ತೆರವುಗೊಳಿಸಿ, ಸ್ವದೇಶಕ್ಕೆ ಕಳುಹಿಸುವ ಏರ್ಪಾಡು ಮಾಡಿದ್ದಕ್ಕಾಗಿ ಪ್ರಧಾನಿ ಮೋದಿ, ಚೀನಾ ಅಧ್ಯಕ್ಷರಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಸಜ್ಜುಗೊಳಿಸಲ್ಪಟ್ಟ ಏರ್‌ ಇಂಡಿಯಾ ಜಂಬೋಜೆಟ್ ವಿಮಾನವು ಕಳೆದ ವಾರ ಎರಡು ಬಾರಿ ಹಾರಾಟಗಳನ್ನು ನಡೆಸಿ, ವೂಹಾನ್‌ನಿಂದ ಭಾರತೀಯರನ್ನು ಕರೆತಂದಿತ್ತು.

ಭಾರತದಲ್ಲಿನ ಚೀನಾದ ರಾಯಭಾರಿ ಸುನ್ ವೈಡೊಂಗ್ ಅವರು ಕಳೆದ ವಾರ ನೀಡಿದ ಹೇಳಿಕೆಯೊಂದರಲ್ಲಿ ಚೀನಾದಲ್ಲಿರುವ ಭಾರತೀಯರ ಆರೋಗ್ಯ ಹಾಗೂ ಸುರಕ್ಷತೆಯನ್ನು ಸಂರಕ್ಷಿಸುವುದಕ್ಕಾಗಿ ಭಾರತದೊಂದಿಗೆ ಶ್ರಮಿಸಲು ತನ್ನ ದೇಶ ಸಿದ್ಧವಿದೆಯೆಂದು ಹೇಳಿದ್ದರು.

 ಭಾರತ ಸೇರಿದಂತೆ ಹಲವು ದೇಶಗಳು ಕೊರೋನ ವೈರಸ್ ಬಾಧಿತ ಚೀನಾದಿಂದ ತಮ್ಮ ಪ್ರಜೆಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿವೆ ಹಾಗೂ ಆ ದೇಶದಿಂದ ಆಹಾರವಸ್ತು ಹಾಗೂ ಸರಕು ಸಾಗಣೆಯನ್ನು ನಿಯಂತ್ರಿಸುತ್ತವೆ.

ವೂಹಾನ್‌ನಿಂದ ಕರೆತರಲಾದ ಭಾರತೀಯರನ್ನು ದಿಲ್ಲಿ, ಕೊಚ್ಚಿ ಸೇರಿದಂತೆ ದೇಶದ ವಿವಿಧೆಡೆ ಸ್ಥಾಪಿಸಲಾಗಿರುವ ವಿಶೇಷ ಕೇಂದ್ರಗಳಲ್ಲಿ ಪ್ರತ್ಯೇಕವಾಗಿರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News