ಸರಕಾರದ ಬೊಕ್ಕಸಕ್ಕೆ ಸಂಘಪರಿವಾರದ ಕಣ್ಣು

Update: 2020-02-09 18:23 GMT

ಮಾನ್ಯರೇ,

ತುರ್ತುಪರಿಸ್ಥಿತಿ ವಿರುದ್ಧ ಹೋರಾಟ ಮಾಡಿದವರಿಗೆ ಪಿಂಚಣಿ ಕೊಡಲು ರಾಜ್ಯ ಸರಕಾರ ಚಿಂತನೆ ಮಾಡುತ್ತಿದೆಯಂತೆ. ಈ ತರದ ಯೋಜನೆ ಆರೆಸ್ಸೆಸ್ ಬಿಜೆಪಿ ಆಡಳಿತದ ಕೆಲವು ರಾಜ್ಯಗಳದಲ್ಲಿ ಜಾರಿಗೆ ಬಂದಿದೆ. ನಮ್ಮಲ್ಲಿ ಆರೆಸ್ಸೆಸ್‌ನ ಒಂದು ಗುಂಪು ಈ ಪಿಂಚಣಿಗೆ ವಿರೋಧ ಮಾಡಿದೆಯಂತೆ. ನಾವು ಮಾಡಿದ ಹೋರಾಟ ದೇಶಕ್ಕಾಗಿ, ಪಿಂಚಣಿಗಾಗಿ ಅಲ್ಲ ಅನ್ನುವುದು ಅವರ ನಿಲುವು.

ಉತ್ತರ ಪ್ರದೇಶದಲ್ಲಿ ತುರ್ತುಪರಿಸ್ಥಿತಿ ವಿರುದ್ಧ ಹೋರಾಟ ಮಾಡಿದರು ಎನ್ನಲಾಗುವ ವ್ಯಕ್ತಿಗಳಿಗೆ 25,000 ರೂ. ಪಿಂಚಣಿ ನೀಡಲಾಗುತ್ತದೆಯಂತೆ. ಜನರ ಹಣವನ್ನು ಸರಕಾರದ ಮೂಲಕ ಆರೆಸ್ಸೆಸ್/ಬಿಜೆಪಿ ಹೇಗೆ ತನ್ನ ಕಾರ್ಯಕರ್ತರು, ನಾಯಕರನ್ನು ಬೆಳೆಸಲು ಬಳಸುತ್ತಿದೆ ಎನ್ನುವುದಕ್ಕೆ ಇದು ಒಳ್ಳೆಯ ಉದಾಹರಣೆ. ಇನ್ನೊಂದು ಉದಾಹರಣೆ, ಸಾವಯವ ಕೃಷಿಗೆ ಬೆಂಬಲವೆಂದು ಕೇಂದ್ರ ಸರಕಾರ ಹಿಂದಿನ ಅವಧಿಯಲ್ಲಿ ಯೋಜನೆಯೊಂದನ್ನು ಜಾರಿಗೆ ತಂದಿದೆ. ಇದು ಪಾರಂಪರಿಕ ಕೃಷಿ ಮಾದರಿಯನ್ನು ಅನುಸರಿಸುವ ರೈತರಿಗೆ ಹಣಕಾಸಿನ ಸಹಾಯಧನ ಕೊಡುವ ಯೋಜನೆ. ಇದಕ್ಕೆ ಪರಂಪರಾಗತ ಕೃಷಿ ಸಂಚಯಿನಿ ಯೋಜನೆ ಅಂತೇನೋ ಹೆಸರು ಇಟ್ಟುಕೊಂಡಿದ್ದಾರೆ. ಆದರೆ ಆ ಯೋಜನೆಯಲ್ಲಿ ಪಟ್ಟಿಮಾಡಿರುವ ಸಾವಯವ ಕೃಷಿ ಮಾದರಿಯನ್ನು ನೀವು ನೋಡಿದರೆ ಅರ್ಥವಾಗುತ್ತದೆ ಅದರಲ್ಲಿರುವ ಯಾವುದೇ ಕೃಷಿ ಮಾದರಿ ಈ ದೇಶದ ಸಾಮಾನ್ಯ ಕೃಷಿಕರು ಪಾಲನೆ ಮಾಡುತ್ತಿಲ್ಲವೆಂದು. ಅದರಲ್ಲಿರುವ ಅವೈಜ್ಞಾನಿಕ ಕೃಷಿ ಪದ್ಧತಿಯನ್ನು ಆರೆಸ್ಸೆಸ್ ಬಿಜೆಪಿ ಬೆಂಬಲಿತ ಅಥವಾ ಆ ಸಿದ್ಧಾಂತದ ಮೇಲೆ ಒಲವಿರುವ ಒಂದಿಷ್ಟು ಆಶ್ರಮ, ದೇವ/ದೆವ್ವ-ಮಾನವ ಗುಂಪುಗಳು ಮಾಡುತ್ತಾ ಇವೆ.

ಕೊಲ್ಲೂರು ಮೂಕಾಂಬಿಕಾ ಮುಜರಾಯಿ ದೇವಸ್ಥಾನದಿಂದ ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರ ಶಾಲೆ ಹಾಗೂ ಪುಣಚ ಶ್ರೀ ದೇವಿ ವಿದ್ಯಾಕೇಂದ್ರ ಶಾಲೆಗೆ ಸಹಾಯಧನ ಕೊಡುವ ಒಂದು ಸುತ್ತೋಲೆ ಬಿಜೆಪಿ-ಜೆಡಿಎಸ್ ಸರಕಾರ 2007-08ರಲ್ಲಿ ಬಂದಾಗ ಹೊರಡಿಸಲಾಗಿತ್ತು. ಆ ಸುತ್ತೋಲೆ ಕಾನೂನು ಬಾಹಿರವೆಂದು 2017ರಲ್ಲಿ ಹಿಂದಕ್ಕೆ ಪಡೆಯಲಾಯಿತು. ಈ ಹತ್ತು ವರ್ಷ ಅವಧಿಯಲ್ಲಿ ಎರಡು ಶಾಲೆಗೆ 2.32 ಕೋಟಿ ಹಣ ಹೋಗಿದೆ. ಹೀಗೆ ಸರಕಾರದ ಅನುದಾನ ಪಡೆಯುವ ಶಾಲೆಗಳು, ಬೇರೆ ಬೇರೆ ಹೆಸರಿನ ಸಂಸ್ಥೆಗಳು (ಕಲೆ, ಧಾರ್ಮಿಕ, ಗಿರಿಜನ ಇತ್ಯಾದಿ) ಸಾವಿರಾರು ಇವೆ. ಈ ಸಂಸ್ಥೆಗಳೆಲ್ಲಾ ಒಟ್ಟಾಗಿ ಕೆಲಸ ಮಾಡುವುದು ಹಿಂದೂ ರಾಷ್ಟ್ರದ ಸ್ಥಾಪನೆಗೆ. ಬಿಡಿಬಿಡಿಯಾಗಿ ತಮ್ಮ ಸಂಸ್ಥೆಯ ಗುರಿಗೆ ಶ್ರಮಿಸುತ್ತವೆ ಹಾಗೂ ಬಿಡಿಬಿಡಿ ಉದ್ದೇಶಗಳಿಗೆ ಜನರನ್ನು ಒಟ್ಟುಮಾಡಿ ತಮ್ಮ ದೂರಗಾಮಿ ಉದ್ದೇಶವನ್ನು ಸಾಧಿಸಲು ಪ್ರಯತ್ನಿಸುತ್ತಿವೆ. ಇದನ್ನು ಅರ್ಥಮಾಡಿಕೊಳ್ಳದೆ ಅಂತಹ ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಅಥವಾ ಶಾಲೆಗೆ ಮಕ್ಕಳನ್ನು ಕಳಿಸುವ ಕೆಲಸ ಜನ ಮಾಡುತ್ತಾರೆ. ಈ ಕುರಿತು ಜನಜಾಗೃತಿ ಮುಖ್ಯ.

Writer - ಕೃಷಿಕ ಎ.ವಿ. ಶೃಂಗೇರಿ

contributor

Editor - ಕೃಷಿಕ ಎ.ವಿ. ಶೃಂಗೇರಿ

contributor

Similar News