ಬೆಳೆಯುತ್ತಿರುವ ಮಗುವಿನಲ್ಲಿ ಈ ಬದಲಾವಣೆಗಳು ಕಂಡಲ್ಲಿ ಅದು ‘ಆಟಿಸಂ’

Update: 2020-02-10 15:49 GMT

ಆಟಿಸಂ ಅಥವಾ ಸ್ವಲೀನತೆ ಮಕ್ಕಳ ವರ್ತನೆಯಲ್ಲಿನ ಬದಲಾವಣೆಗೆ ಸಂಬಂಧಿಸಿದ ರೋಗವಾಗಿದೆ. ಮಗುವಿನ ಜನನದ ಆರು ತಿಂಗಳಿನಿಂದ ಒಂದು ವರ್ಷದೊಳಗೆ ಮಗುವು ಸಹಜವಾಗಿ ವರ್ತಿಸುತ್ತಿದೆಯೇ ಇಲ್ಲವೇ ಎನ್ನುವದನ್ನು ಗಮನಿಸುವ ಮೂಲಕ ಈ ರೋಗವನ್ನು ಪತ್ತೆ ಹಚ್ಚಬಹುದು.

ಮಗುವಿನಲ್ಲಿ ಕಂಡು ಬರುವ ಕೆಲವು ಆರಂಭಿಕ ಲಕ್ಷಣಗಳ ಬಗ್ಗೆ ಹೆತ್ತವರು ನಿಗಾ ವಹಿಸಬೇಕು. ಅಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣ ಒಳ್ಳೆಯ ಮನಃಶಾಸ್ತ್ರಜ್ಞರನ್ನು ಭೇಟಿಯಾಗಬೇಕು. ಸಾಮಾಜಿಕ, ವರ್ತನೆ ಮತ್ತು ಭಾಷಾ ಸಮಸ್ಯೆಗಳನ್ನು ಕಡಿಮೆ ಮಾಡಲು ಆಟಿಸಂ ರೋಗಿಗಳಿಗಾಗಿ ಹಲವಾರು ಕಾರ್ಯಕ್ರಮಗಳಿವೆ. ಕೆಲವು ಕಾರ್ಯಕ್ರಮಗಳು ವರ್ತನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡಿ ಅವರಿಗೆ ಹೊಸ ಗುಣಗಳನ್ನು ಕಲಿಸುತ್ತವೆ. ಇದರ ಜೊತೆಗೆ ಜನರೊಂದಿಗೆ ಹೇಗೆ ಮಾತನಾಡಬೇಕು, ಹೇಗೆ ಪ್ರತಿಕ್ರಿಯಿಸಬೇಕು ಎನ್ನುವುದನ್ನು ಅವರಿಗೆ ಮನದಟ್ಟು ಮಾಡಲಾಗುತ್ತದೆ,ಇದರಿಂದ ಆಟಿಸಂ ರೋಗಿಗಳು ಸಾಮಾಜಿಕ ಪರಿಸ್ಥಿತಿಗಳೊಂದಿಗೆ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ.

ಏನಿದು ಆಟಿಸಂ?

 ಆಟಿಸಂ ಮಿದುಳಿಗೆ ಸಂಬಂಧಿಸಿದ ಕಾಯಿಲೆಯಾಗಿದ್ದು,ಇದರ ಲಕ್ಷಣಗಳು ಜನ್ಮದಿಂದಲೇ ಅಥವಾ ಬಾಲ್ಯದಲ್ಲಿಯೇ ಕಾಣಿಸಿಕೊಳ್ಳಲು ಆರಂಭಿಸುತ್ತವೆ. ಇತರ ಮಕ್ಕಳಿಗೆ ಹೋಲಿಸಿದರೆ ಆಟಿಸಂ ಸಮಸ್ಯೆಯಿರುವ ಮಕ್ಕಳ ಬೆಳವಣಿಗೆ ಅಸಹಜವಾಗಿರುತ್ತದೆ. ಅವರ ನಡವಳಿಕೆಯೂ ಇತರ ಮಕ್ಕಳಿಗಿಂತ ಭಿನ್ನವಾಗಿರುತ್ತದೆ. ಹೆಚ್ಚಿನ ಪ್ರಕರಣಗಳಲ್ಲಿ ಅತ್ಯಂತ ಎಳೆಯ ವಯಸ್ಸಿನಲ್ಲಿ ಮಕ್ಕಳಲ್ಲಿ ಈ ಕಾಯಿಲೆಯ ಲಕ್ಷಣಗಳನ್ನು ಗುರುತಿಸುವುದು ಹೆತ್ತವರಿಗೆ ಕಷ್ಟವಾಗುತ್ತದೆ. ಮಗುವು ಬೆಳೆಯುತ್ತ ಹೋದಂತೆ ಇಂತಹ ಲಕ್ಷಣಗಳನ್ನು ಹೆತ್ತವರು ಗಮನಿಸಲು ಸಾಧ್ಯವಾಗುತ್ತದೆ ಮತ್ತು ನಡವಳಿಕೆಯಲ್ಲಿ ಕೆಲವು ಭಿನ್ನತೆಗಳು ಕಂಡು ಬರುತ್ತವೆ.

ಮಕ್ಕಳಲ್ಲಿ ಆಟಿಸಂ ಲಕ್ಷಣಗಳು

ಸರಿಯಾಗಿ ಮಾತನಾಡಲು ಮತ್ತು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗದಿರುವುದು, ಮಾತನಾಡುವಾಗ ವಿಲಕ್ಷಣ ಶಬ್ದಗಳನ್ನು ಹೊರಡಿಸುವುದು, ಇತರರಿಂದ ದೂರವಾಗಿ ಒಂದು ಪಕ್ಕದಲ್ಲಿ ಕುಳಿತಿರುವುದು, ಗೊಣಗಾಟ ,ರೋಬಾಟ್‌ನಂತೆ ಮಾತನಾಡುವುದು, ಅಗತ್ಯವಿಲ್ಲದೆ ಇತರರು ಆಡಿದ ಶಬ್ದಗಳನ್ನು ಪುನರುಚ್ಚರಿಸುವುದು, ಸ್ಪಷ್ಟವಾದ ಸ್ವರದಲ್ಲಿ ಮಾತನಾಡದಿರುವುದು, ಮಾತನಾಡುತ್ತಿರುವಾಗ ಎದುರಿನಲ್ಲಿದ್ದವರ ಕಣ್ಣು ತಪ್ಪಿಸುವುದು, ಸಣ್ಣಪುಟ್ಟ ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗುವುದು, ಶಬ್ದಗಳ ಬಗ್ಗೆ ಅಲ್ಪ ತಿಳುವಳಿಕೆ, ರಚನಾತ್ಮಕ ಭಾಷೆಯ ಕೊರತೆ ಇವು ಮಕ್ಕಳಲ್ಲಿ ಆಟಿಸಂ ಸೂಚಿಸುವ ಸಾಮಾನ್ಯ ಲಕ್ಷಣಗಳಾಗಿವೆ. ಮಾತು ಬರಲು ವಿಳಂಬ,ತನ್ನನ್ನು ಮುದ್ದು ಮಾಡುವವರನ್ನು ದೂರವಿಡುವುದು, ಕೈಗೆ ಸಿಕ್ಕ ವಸ್ತುಗಳನ್ನು ತಿರುಗಿಸುತ್ತಿರುವುದು, ಅತಿಕ್ರಿಯಾಶೀಲತೆ, ಸರಿಯಾಗಿ ನಿದ್ರೆ ಮಾಡದಿರುವುದು, ಒಂಟಿಯಾಗಿರಲು ಇಷ್ಟಪಡುವುದು ಇವು ಕೂಡ ಆಟಿಸಂ ಅನ್ನು ಸೂಚಿಸುವ ಪ್ರಮುಖ ಲಕ್ಷಣಗಳಾಗಿವೆ.

 ಮಕ್ಕಳನ್ನೇಕೆ ಆಟಿಸಂ ಕಾಡುತ್ತದೆ?

ಆಟಿಸಂ ಕಾಯಿಲೆಗೆ ನಿಖರ ಕಾರಣವಿನ್ನೂ ಗೊತ್ತಾಗಿಲ್ಲ. ಪರಿಸರಾತ್ಮಕ ಅಥವಾ ಜನ್ಮದತ್ತ ದೋಷಗಳು,ಹೀಗೆ ಯಾವುದೂ ಈ ರೋಗಕ್ಕೆ ಕಾರಣವಾಗಬಹುದು. ಈ ನಿಟ್ಟಿನಲ್ಲಿ ಮಗುವಿನ ಜನನಕ್ಕೆ ಮುನ್ನ ವಾತಾವರಣದಲ್ಲಿಯ ರಾಸಾಯನಿಕಗಳ ಪರಿಣಾಮಗಳು ಮತ್ತು ಯಾವುದಾದರೂ ಸೋಂಕಿನ ಪರಿಣಾಮಗಳ ಬಗ್ಗೆ ವಿಜ್ಞಾನಿಗಳು ಅಧ್ಯಯನ ನಡೆಸುತ್ತಿದ್ದಾರೆ. ಸಂಶೋಧಕರ ಅಭಿಪ್ರಾಯದಂತೆ ಮಕ್ಕಳ ಕೇಂದ್ರ ನರಮಂಡಳಕ್ಕೆ ಹಾನಿಯನ್ನುಂಟು ಮಾಡುವ ಯಾವುದೂ ಆಟಿಸಂ ರೋಗಕ್ಕೆ ಕಾರಣವಾಗುತ್ತದೆ. ಮಗುವು ಗರ್ಭದಲ್ಲಿದ್ದಾಗ ತಾಯಿಯಲ್ಲಿ ಥೈರಾಯ್ಡ್ ಹಾರ್ಮೋನ್ ಗಳ ಕೊರತೆಯು ಸಮಸ್ಯೆಗೆ ಕಾರಣವಾಗುತ್ತದೆ ಎಂಬ ಅಭಿಪ್ರಾಯಗಳೂ ಇವೆ. ಅಲ್ಲದೆ ಅವಧಿಗೆ ಮುನ್ನವೇ ಹೆರಿಗೆಯಾದಾಗ ಮಗುವಿಗೆ ಸಂಪೂರ್ಣ ಪ್ರಮಾಣದಲ್ಲಿ ಆಮ್ಲಜನಕವನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಮತ್ತು ಇದೂ ಆಟಿಸಂ ಅನ್ನು ಉಂಟು ಮಾಡಬಹುದು ಎನ್ನಲಾಗಿದೆ.

ಆಟಿಸಂ ರೋಗಿ ಮಗುವನ್ನು ನಿಭಾಯಿಸುವುದು ಹೇಗೆ?

ಆಟಿಸಂ ಇರುವ ಮಕ್ಕಳನ್ನು ನಿಭಾಯಿಸುವುದು ಹೆಚ್ಚಿನ ಸಂದರ್ಭಗಳಲ್ಲಿ ಹೆತ್ತವರಿಗೆ ತುಂಬ ಕಷ್ಟವಾಗುತ್ತದೆ. ಇಂತಹ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುವುದು ಅಗತ್ಯವಾಗಿದೆ. ಮಗುವಿನ ವರ್ತನೆಯನ್ನು ಗಮನಿಸಿ ಅದು ಏನನ್ನು ಹೇಳಲು ಬಯಸುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಅದರೊಂದಿಗೆ ಹೆಚ್ಚು ಮಾತನಾಡುತ್ತಿರಬೇಕು. ಅದು ಸದಾ ಮೋಜಿನಲ್ಲಿ ಇರುವಂತೆ ನೋಡಿಕೊಳ್ಳಬೇಕು. ಒಟ್ಟಾರೆಯಲ್ಲಿ ಅದು ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ. ಆಟಿಸಂ ರೋಗಿಗಳು ಅಂತರ್ಮುಖಿಯಾಗಿರುತ್ತಾರೆ,ಅವರು ಸಮಾಜದೊಂದಿಗೆ ಸಂಪರ್ಕ ಬೆಳೆಸಿಕೊಳ್ಳುವುದಿಲ್ಲ. ಅವರು ಸಮಾಜದಲ್ಲಿ ಬೆರೆತರೂ ಅವರ ವರ್ತನೆ ಸಾಕಷ್ಟು ಭಿನ್ನವಾಗಿರುತ್ತದೆ. ಇಂತಹ ವ್ಯಕ್ತಿಗಳು ಏನನ್ನಾದರೂ ಕೇಳಿದಾಗ ಸತತವಾಗಿ ಮಾತನಾಡುತ್ತಲೇ ಇರುತ್ತಾರೆ. ತಮ್ಮ ದಿನಚರಿಯಲ್ಲಿ ಬದಲಾವಣೆಯಾದರೆ ಅವರು ಮಾನಸಿಕವಾಗಿ ತೊಂದರೆಗೊಳಗಾಗುತ್ತಾರೆ. ಆಟಿಸಂ ರೋಗಿಗಳಿಗೆ ಸೂಕ್ತ ಕಾಳಜಿಯ ಅಗತ್ಯವಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News