ಆರ್ಥಿಕ ಹಿಂಜರಿತವಿದ್ದರೆ ಜನರು ಕೋಟು ಧರಿಸುತ್ತಿದ್ದರೇ: ಬಿಜೆಪಿ ಸಂಸದನ ಪ್ರಶ್ನೆ

Update: 2020-02-10 16:50 GMT
ಫೋಟೊ :Facebook/ Virendra Singh Mast

ಲಕ್ನೊ, ಫೆ.10: ಜನತೆ ಜಾಕೆಟ್ ಹಾಗೂ ಕೋಟುಗಳನ್ನು ಖರೀದಿಸುತ್ತಿದ್ದಾರೆ. ಆದ್ದರಿಂದ ದೇಶದಲ್ಲಿ ಆರ್ಥಿಕ ಹಿಂಜರಿತವಿಲ್ಲ ಎಂದು ಬಿಜೆಪಿ ಸಂಸದ ವೀರೇಂದ್ರ ಸಿಂಗ್ ಮಸ್ತ್ ಹೇಳಿದ್ದಾರೆ.

ಉತ್ತರಪ್ರದೇಶದ ಬಲ್ಲಿಯಾದಲ್ಲಿ ನಡೆದ ರ್ಯಾಲಿಯೊಂದರಲ್ಲಿ ಮಾತನಾಡಿದ ಸಿಂಗ್, ಆರ್ಥಿಕ ಹಿಂಜರಿತದ ಬಗ್ಗೆ ದಿಲ್ಲಿ ಮತ್ತು ವಿದೇಶದಲ್ಲಿ ಚರ್ಚೆ ನಡೆಯುತ್ತಿದೆ. ಆದರೆ ಆರ್ಥಿಕ ಹಿಂಜರಿತವಿದ್ದರೆ ನಾವಿಲ್ಲಿಗೆ ಕೋಟು, ಜಾಕೆಟ್ ಬದಲು ಕುರ್ತಾ, ಧೋತಿ ಧರಿಸಿ ಬರುತ್ತಿದ್ದೆವು. ಆರ್ಥಿಕ ಹಿಂಜರಿತವಿದ್ದರೆ ನಮಗೆ ಪ್ಯಾಂಟ್, ಶರ್ಟ್, ಪೈಜಾಮ ಖರೀದಿಸಲು ಆಗುತ್ತಿತ್ತೇ ಎಂದು ಪ್ರಶ್ನಿಸಿದ್ದಾರೆ.

ಸರಕಾರಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ವಿಪಕ್ಷಗಳು ಆರ್ಥಿಕ ಹಿಂಜರಿತದ ಬಗ್ಗೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ರ್ಯಾಲಿಯೊಂದರಲ್ಲಿ ಮಾತನಾಡಿದ್ದ ಸಿಂಗ್, ಆಟೊಮೊಬೈಲ್ ಕ್ಷೇತ್ರಕ್ಕೆ ಆರ್ಥಿಕ ಹಿಂಜರಿತದ ಬಿಸಿ ತಟ್ಟಿದೆ ಎಂಬ ಹೇಳಿಕೆ ಸರಿಯಲ್ಲ. ಹಾಗಿದ್ದರೆ ರಸ್ತೆಗಳಲ್ಲಿ ಈ ರೀತಿ ಟ್ರಾಫಿಕ್ ಜ್ಯಾಂ ಉಂಟಾಗುತ್ತಿತ್ತೇ ಎಂದು ಪ್ರಶ್ನಿಸಿದ್ದರು.

2019-20ರ ದ್ವಿತೀಯ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಕೇವಲ 4.5% ಪ್ರಮಾಣದಲ್ಲಿದ್ದು ಕಳೆದ 6 ವರ್ಷಗಳಲ್ಲೇ ಇದು ಅತ್ಯಂತ ಕನಿಷ್ಟ ಪ್ರಮಾಣವಾಗಿದೆ ಎಂದು ಸರಕಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News