×
Ad

ಮಾದಕವಸ್ತು ಪೂರೈಸುವ ಕ್ರಿಮಿನಲ್‌ಗಳ ವಿರುದ್ಧ ಅಪರೂಪದ ಕಾಯ್ದೆ ಬಳಸಲು ಎನ್‌ಸಿಬಿ ನಿರ್ಧಾರ

Update: 2020-02-10 23:41 IST

ಹೊಸದಿಲ್ಲಿ,  ಫೆ.10: ಮಾದಕವಸ್ತುಗಳಿಗೆ ಸಂಬಂಧಿಸಿದ ಅಪರಾಧ ಕೃತ್ಯವನ್ನು ಪುನರಾವರ್ತಿಸುವ ವ್ಯಕ್ತಿಗಳ ವಿರುದ್ಧ ಅಪರೂಪದಲ್ಲಿ ಬಳಕೆಯಾಗುವ ಕಾಯ್ದೆಯನ್ನು ಬಳಸಲು ಮಾದಕವಸ್ತು ನಿಯಂತ್ರಣ ಮಂಡಳಿ(ಎನ್‌ಸಿಬಿ) ನಿರ್ಧರಿಸಿದೆ.

ಪ್ರಿವೆನ್ಷನ್ ಆಫ್ ಇಲ್ಲಿಸಿಟ್ ಟ್ರಾಫಿಕ್ ಇನ್ ನಾರ್ಕೊಟಿಕ್ ಡ್ರಗ್ಸ್ ಆ್ಯಂಡ್ ಸೈಕೊಟ್ರಾಫಿಕ್ ಸಬ್‌ಸ್ಟಾನ್ಸಸ್ ಆ್ಯಕ್ಟ್ (ಪಿಟಿಐ-ಎನ್‌ಡಿಪಿಎಸ್) ಎಂಬ ಹೆಸರಿನ ಕಾಯ್ದೆಯನ್ನು ಕಳೆದ ಐದು ವರ್ಷದಲ್ಲಿ ಇದೇ ಮೊದಲ ಬಾರಿಗೆ, ಬೆಂಗಳೂರಿನಲ್ಲಿ ಇತ್ತೀಚೆಗೆ ನೈಜೀರಿಯಾದ ಪ್ರಜೆಯನ್ನು ಬಂಧಿಸಿದ ಸಂದರ್ಭ ಬಳಸಲಾಗಿದೆ.

1988ರ ಈ ಕಾಯ್ದೆಯಡಿ, ಪುನರಾವರ್ತಿತ ಆಪಾದಿತ ಅಥವಾ ಅಪರಾಧ ಎಸಗುವ ಚಾಳಿ ಹೊಂದಿರುವ ಮಾದಕವಸ್ತು ಪೂರೈಕೆ ಮಾಡುವ ದುಷ್ಕರ್ಮಿಯನ್ನು ಎನ್‌ಸಿಬಿ 45 ದಿನದವರೆಗೆ ಬಂಧನದಲ್ಲಿ ಇಡಬಹುದಾಗಿದೆ. ಬಳಿಕ ಹೈಕೋರ್ಟ್‌ನ ಮೂವರು ನ್ಯಾಯಾಧೀಶರನ್ನು ಒಳಗೊಂಡಿರುವ ಸಲಹಾ ಸಮಿತಿಯ ಎದುರು ಆಪಾದಿತನನ್ನು ಹಾಜರುಪಡಿಸಬೇಕು. ಎನ್‌ಸಿಬಿಯ ಕೃತ್ಯವನ್ನು ಸಲಹಾ ಸಮಿತಿ ಅನುಮೋದಿಸಿದರೆ, ಆಪಾದಿತನನ್ನು ಪ್ರತಿಬಂಧಕ (ನಿರೋಧಕ) ಬಂಧನದಡಿ 1 ವರ್ಷ ಇರಿಸಬಹುದು. ಈ ಅವಧಿಯಲ್ಲಿ ಆಪಾದಿತನಿಗೆ ಜಾಮೀನು ದೊರಕುವುದಿಲ್ಲ ಮತ್ತು ಜೈಲಿನಿಂದ ಬಿಡುಗಡೆಗೊಳಿಸುವ ಯಾವುದೇ ಪರಿಹಾರ ಕ್ರಮ ಪಡೆಯಲೂ ಅವಕಾಶವಿರುವುದಿಲ್ಲ. ಒಂದು ವೇಳೆ ಸಲಹಾ ಸಮಿತಿ ಎನ್‌ಸಿಬಿಯ ಕ್ರಮವನ್ನು ವಿರೋಧಿಸಿದರೆ ಆಗ ಆಪಾದಿತನನ್ನು ತಕ್ಷಣವೇ ಬಿಡುಗಡೆ ಮಾಡಬೇಕಾಗುತ್ತದೆ. ನೈಜೀರಿಯಾದ ಪ್ರಜೆ ಕೆನ್ನೆತ್ ಜಿಡೇಫರ್ ಎಂಬ ವ್ಯಕ್ತಿಯನ್ನು ಬೆಂಗಳೂರಿನಲ್ಲಿ ಪಿಐಟಿ-ಎನ್‌ಡಿಪಿಎಸ್ ಕಾಯ್ದೆಯಡಿ ಶನಿವಾರ ಬಂಧಿಸಲಾಗಿದೆ. 2018ರಲ್ಲಿ ಮೆಡಿಕಲ್ ವೀಸಾದಡಿ ಭಾರತಕ್ಕೆ ಬಂದಿದ್ದ ಈತ ಮಾದಕವಸ್ತು ಸಾಗಾಟ ಪ್ರಕರಣದಲ್ಲಿ ಮೂರು ಬಾರಿ ಸಿಕ್ಕಿಬಿದ್ದಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News