ಪೊಲೀಸರಿಂದ ಬೆದರಿಕೆ, ಹಲ್ಲೆ: ಕಾಶ್ಮೀರ ಪ್ರೆಸ್‌ಕ್ಲಬ್ ಆರೋಪ

Update: 2020-02-10 18:13 GMT

ಶ್ರೀನಗರ, ಫೆ. 10: ಜಮ್ಮು ಹಾಗೂ ಕಾಶ್ಮೀರ ಸರಕಾರ, ಪೊಲೀಸರು ಮುಕ್ತವಾಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡುತ್ತಿಲ್ಲ ಎಂದು ಕಾಶ್ಮೀರ ಕಣಿವೆಯ ಪತ್ರಕರ್ತರನ್ನು ಪ್ರತಿನಿಧಿಸುತ್ತಿರುವ ಸಂಘಟನೆ ಕಾಶ್ಮೀರ ಪ್ರೆಸ್ ಕ್ಲಬ್ ಆರೋಪಿಸಿದೆ.

ಅಲ್ಲದೆ, ಈ ಹಿಂದಿನ ರಾಜ್ಯದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಬಳಿಕ ಪೊಲೀಸರು ಪತ್ರಕರ್ತರಿಗೆ ಕಿರುಕುಳ ನೀಡಿದ ಹಾಗೂ ಸಮನ್ಸ್ ನೀಡಿದ ಹಲವು ಪ್ರಕರಣಗಳನ್ನು ಉಲ್ಲೇಖಿಸಿದೆ. ನಿಷೇಧಿತ ಜೆಕೆಎಲ್‌ಎಫ್ (ಜಮ್ಮು ಹಾಗೂ ಕಾಶ್ಮೀರ ಲಿಬರೇಶನ್ ಫ್ರಂಟ್)ನ ಹೇಳಿಕೆಯನ್ನು ವರದಿ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಔಟ್‌ಲುಕ್ ಮ್ಯಾಗಝಿನ್‌ನ ಪತ್ರಕರ್ತ ನಸೀರ್ ಗನಾಯಿ ಹಾಗೂ ಸ್ಥಳೀಯ ಪತ್ರಕರ್ತ ಹಾರೂನ್ ನಬಿ ಅವರಿಗೆ ಶನಿವಾರ ಸಮನ್ಸ್ ನೀಡಿದ್ದರು ಹಾಗೂ ವಿಚಾರಣೆ ನಡೆಸಿದ್ದರು.

ಈ ಹಿನ್ನೆಲೆಯಲ್ಲಿ ಕಾಶ್ಮೀರ ಪ್ರೆಸ್ ಕ್ಲಬ್ ತುರ್ತು ಸಭೆ ನಡೆಸಿದೆ. ಜಮ್ಮು ಹಾಗೂ ಕಾಶ್ಮೀರದಲ್ಲಿ ಪೊಲೀಸರಿಂದ ನಡೆಯುತ್ತಿರುವ ದೈಹಿಕ ಹಲ್ಲೆ, ಬೆದರಿಕೆ ಕುರಿತು ಚರ್ಚೆ ನಡೆಸಲು ಈ ಸಭೆ ನಡೆಸಲಾಗಿದೆ ಎಂದು ಕಾಶ್ಮೀರ ಪ್ರೆಸ್ ಕ್ಲಬ್‌ನ ಹೇಳಿಕೆ ತಿಳಿಸಿದೆ. ಜಮ್ಮು ಹಾಗೂ ಕಾಶ್ಮೀರದ ವಿಶೇಷ ಸ್ಥಾನವನ್ನು ರದ್ದುಗೊಳಿಸಿದ ಆಗಸ್ಟ್ 5ರ ಬಳಿಕ ಕಣಿವೆಯಲ್ಲಿ ಪತ್ರಕರ್ತರು ಹಾಗೂ ಮಾಧ್ಯಮಗಳಿಗೆ ಮುಕ್ತವಾಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡದಿರುವ ಬಗ್ಗೆ ಸಭೆಯಲ್ಲಿ ಪಾಲ್ಗೊಂಡ ಅಖಿಲ ಪತ್ರಕರ್ತರ ಸಂಘಟನೆಗಳ ಪ್ರತಿನಿಧಿಗಳು ಕಳವಳ ವ್ಯಕ್ತಪಡಿಸಿದರು ಎಂದು ಹೇಳಿಕೆ ತಿಳಿಸಿದೆ. ಆಗಸ್ಟ್ 5ರ ಬಳಿಕ ದೀರ್ಘ ಕಾಲ 6 ತಿಂಗಳು ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿತ್ತು. ಅದು ಸಾಲದೆಂಬಂತೆ ಪತ್ರಕರ್ತರಿಗೆ ದೈಹಿಕ ಹಲ್ಲೆ ಹಾಗೂ ಸಮನ್ಸ್ ನೀಡುವ ಮೂಲಕ ಬೆದರಿಕೆ ಒಡ್ಡಲಾಗುತ್ತಿದೆ ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News