ಶಾಹೀನ್‌ ಬಾಗ್‌ನ ಮೃತ ಹಸುಳೆ ಸುಪ್ರೀಂ ಕೋರ್ಟ್‌ಗೆ ಕೇಳುತ್ತಿರುವ ಪ್ರಶ್ನೆಗಳು

Update: 2020-02-11 06:32 GMT

ದೇಶದ ಸುಪ್ರೀಂಕೋರ್ಟ್ ಆಗಾಗ ತನಗೂ ಹೃದಯವಿದೆ ಎನ್ನುವುದನ್ನು ಘೋಷಿಸುತ್ತಿರುತ್ತದೆ. ಶಾಹೀನ್‌ಬಾಗ್ ಪ್ರತಿಭಟನೆಯ ಸಂದರ್ಭದಲ್ಲಿ ಅಸ್ವಸ್ಥತೆಗೊಳಗಾಗಿ ಮೃತಪಟ್ಟ ನಾಲ್ಕು ತಿಂಗಳ ಮಗುವಿಗಾಗಿ ಸರ್ವೋಚ್ಚ ನ್ಯಾಯಾಲಯ ತೀವ್ರ ಕಳವಳ ವ್ಯಕ್ತಪಡಿಸಿದೆ ಮಾತ್ರವಲ್ಲ, ಕೇಂದ್ರ ಮತ್ತು ದಿಲ್ಲಿ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ‘‘ನಾಲ್ಕು ತಿಂಗಳ ಮಗು ಪ್ರತಿಭಟನೆಗೆ ಹೋಗುತ್ತದೆಯೆ, ಅದು ಸರಿಯೇ ?’’ ಎಂದು ಕೇಳುತ್ತಾ, ಸಾವಿಗೆ ಕಾರಣವಾದ ಪ್ರತಿಭಟನಾಕಾರರನ್ನು ಕಟಕಟೆಯಲ್ಲಿ ನಿಲ್ಲಿಸಿದೆ. ನಿಜ, ಮಕ್ಕಳನ್ನಾಗಲಿ, ಮಗುವನ್ನಾಗಲಿ ಪ್ರತಿಭಟನೆಗೆ ಬಳಸಿಕೊಳ್ಳುವುದು ಅಪರಾಧವೇ ಸರಿ. ಆದರೆ ಇಲ್ಲಿ ಮಗುವನ್ನು ಪ್ರತಿಭಟನೆಗಾಗಿ ಬಳಸಿಕೊಂಡಿಲ್ಲ. ಬದಲಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ ತಾಯಿ, ಮಗುವನ್ನು ಮನೆಯಲ್ಲಿ ಒಂಟಿಯಾಗಿ ಬಿಟ್ಟುಬರುವಂತಿಲ್ಲ ಎನ್ನುವ ಕಾರಣದಿಂದ ಆ ಮಗು ರಾತ್ರಿ ಹಗಲು ಚಳಿಯಲ್ಲಿ ಧರಣಿ ಕೂರುವಂತಾಯಿತು. ಯಾವ ತಾಯಿಯೂ ಎರಡು ನಾಲ್ಕು ತಿಂಗಳ ಮಗುವನ್ನು ಅಂತಹ ಸ್ಥಿತಿಗೆ ತಳ್ಳಲಾರಳು. ಆದರೂ ಆಕೆ ಮಗುವಿನ ಜೊತೆಗೆ ಶಾಹೀನ್‌ಬಾಗ್‌ನ ಪ್ರತಿಭಟನೆಯಲ್ಲಿ ಭಾಗಿಯಾದಳು ಎಂದರೆ, ಆಕೆಯನ್ನು ಅಂತಹದೊಂದು ಅನಿವಾರ್ಯತೆಗೆ ತಳ್ಳಿದ ಸಿಎಎ ಕಾಯ್ದೆಯ ಕಡೆಗೆ ಸುಪ್ರೀಂಕೋರ್ಟ್ ಕಣ್ಣು ಹೊರಳಿಸಬೇಕು.

ಇದು ಒಬ್ಬ ತಾಯಿಗೆ ಸಂಬಂಧಪಟ್ಟ ವಿಷಯವಲ್ಲ. ಅಲ್ಲಿ ಸೇರಿರುವ ಸಾವಿರಾರು ತಾಯಂದಿರು ಇಂತಹದೊಂದು ಮಾಡು-ಇಲ್ಲವೇ ಮಡಿ ಎನ್ನುವಂತಹ ವಿಷಮ ಸ್ಥಿತಿಯಲ್ಲಿದ್ದಾರೆ. ಕಳೆದ ಎರಡು ತಿಂಗಳಿಂದ ಅವರು ಚಳಿ, ಬಿಸಿಲು ಎನ್ನದೆ ಧರಣಿ ಕೂತಿದ್ದಾರೆ. ಇವರನ್ನು ಇಂತಹದೊಂದು ಸ್ಥಿತಿಗೆ ತಳ್ಳಿದ ಸರಕಾರವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿ ಸುಪ್ರೀಂಕೋರ್ಟ್ ಪ್ರಶ್ನಿಸಬೇಕೇ ಹೊರತು, ಶಾಹೀನ್‌ಬಾಗ್‌ನಲ್ಲಿ ತಮ್ಮ ಭಾರತೀಯ ಅಸ್ಮಿತೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಹೋರಾಡುತ್ತಿರುವ ಮಹಿಳೆಯರನ್ನಲ್ಲ. ಮಹಿಳೆ ತನ್ನ ಮಗುವಿನ ಜೊತೆಗೆ ಪ್ರತಿಭಟನೆಗೆ ಭಾಗವಹಿಸಿರುವುದು ಕಳವಳಕಾರಿ ಸಂಗತಿ ಎಂದು ಹೇಳಿರುವ ಸುಪ್ರೀಂಕೋರ್ಟ್, ದಾಖಲೆಯಿಲ್ಲದೆ ಎನ್‌ಆರ್‌ಸಿಯಿಂದಾಗಿ ಡಿಟೆನ್‌ಶನ್ ಸೆಂಟರ್ ಸೇರುವ ಸಹಸ್ರಾರು ಹಸುಳೆಗಳ ಕುರಿತಂತೆ ಯಾಕೆ ಈವರೆಗೆ ಮಾತನಾಡಿಲ್ಲ? ಅಸ್ಸಾಮಿನ ಡಿಟೆನ್‌ಶನ್ ಸೆಂಟರ್‌ನಲ್ಲಿ ಪೌರತ್ವ ನಿರಾಕರಣೆಯ ಕಾರಣದಿಂದ ವಿವಿಧ ಜಾತಿ, ಧರ್ಮಗಳಿಗೆ ಸೇರಿದ ಸಾವಿರಾರು ಬಡವರು ನರಕದ ಬದುಕನ್ನು ಅನುಭವಿಸಿದ್ದಾರೆ. ಈಗಾಗಲೇ ಈ ಡಿಟೆನ್‌ಶನ್ ಕ್ಯಾಂಪ್‌ನಲ್ಲಿ ಸೂಕ್ತ ಆಹಾರ, ಔಷಧಿಗಳಿಲ್ಲದೆ 30 ಮಂದಿ ಮೃತಪಟ್ಟಿದ್ದಾರೆ. ಇವರ ಕುರಿತಂತೆ ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸದೆ, ಬರೇ ಶಾಹೀನ್‌ಬಾಗ್‌ಗಾಗಿ ಮಾತ್ರ ತನ್ನ ಕಳವಳವನ್ನು ಸೀಮಿತಗೊಳಿಸಿರುವುದು ಯಾಕೆ?

 ಆ ತಾಯಿ ತನ್ನ ಮಗುವಿನ ಜೊತೆಗೆ ಯಾಕೆ ಶಾಹೀನ್‌ಬಾಗ್‌ಗೆ ಆಗಮಿಸಿದಳೆಂದರೆ, ಯಾವುದೇ ದಾಖಲೆಗಳಿಲ್ಲ ಎನ್ನುವ ಕಾರಣಕ್ಕಾಗಿ ತನ್ನ ಮಗು ತನ್ನಿಂದ ದೂರವಾಗಬಾರದು ಎನ್ನುವ ಆತಂಕದಿಂದ. ಆದರೆ ಆ ತಾಯಿ ಕೊನೆಗೂ ತನ್ನ ಮಗುವನ್ನು ಕಳೆದುಕೊಂಡಿದ್ದಾಳೆ. ಇದೀಗ ಮಗುವನ್ನು ಕಳೆದುಕೊಂಡ ದುಃಖದ ಜೊತೆಗೇ ಮತ್ತೆ ಶಾಹೀನ್ ಬಾಗ್ ಪ್ರತಿಭಟನಾಕಾರರನ್ನು ಸೇರಿಕೊಂಡಿದ್ದಾಳೆ. ಆ ಮಗುವಿನ ಸಾವಿನ ಸಂಪೂರ್ಣ ಹೊಣೆ ದಿಲ್ಲಿಯಲ್ಲಿರುವ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಾಗಿದ್ದಾರೆ ಎನ್ನುವುದು ಸುಪ್ರೀಂಕೋರ್ಟ್‌ಗೆ ಮನವರಿಕೆಯಾಗುತ್ತಿಲ್ಲವೆ? ಸುಪ್ರೀಂಕೋರ್ಟ್ ಕಣ್ಣೀರು ಸುರಿಸಬೇಕಾದ ಇನ್ನೊಂದು ಹಸುಳೆಯ ಕತೆಯೂ ಇದೆ. ಅಸ್ಸಾಮಿನ ಶಾಹಿದಾ ಬೀಬಿ ಅವಳಿ ಮಕ್ಕಳಿಗೆ ಜನ್ಮಕೊಟ್ಟ ಎರಡೇ ವಾರದಲ್ಲಿ ಪೌರತ್ವ ಕಳೆದುಕೊಂಡಳು. ಹಸಿ ಬಾಣಂತಿ ಶಾಹಿದಾಳನ್ನು ಖೊಕ್ರಜಾರ್ ಜಿಲ್ಲೆಯ ಡಿಟೆನ್‌ಶನ್ ಸೆಂಟರ್‌ನಲ್ಲಿಡಲಾಯಿತು. ಈ ಅವಧಿಯಲ್ಲಿ ಎರಡು ತಿಂಗಳ ಆಕೆಯ ಹಸುಳೆ ಆಕೆಯ ಮಡಿಲಲ್ಲೇ ಮೃತಪಟ್ಟಿತು. ಆಕೆ ತನ್ನ ಪೌರತ್ವಕ್ಕಾಗಿ ನ್ಯಾಯಾಲಯದಲ್ಲಿ ಸುದೀರ್ಘ ಹೋರಾಟವನ್ನು ನಡೆಸಿದಳು. ಇದೀಗ ನ್ಯಾಯಾಲಯದಲ್ಲಿ ಆಕೆ ವಿದೇಶಿಯಳಲ್ಲ ಎನ್ನುವುದು ಸಾಬೀತಾಗಿದೆ. ಆದರೆ ಯಾವ ನ್ಯಾಯಾಲಯವೂ ಡಿಟೆನ್‌ಶನ್ ಸೆಂಟರ್‌ನಲ್ಲಿ ಮೃತಪಟ್ಟ ಎರಡು ತಿಂಗಳ ಹಸುಳೆಗಾಗಿ ಕಳವಳ ವ್ಯಕ್ತಪಡಿಸಲಿಲ್ಲ. ಸಿಎಎ ಕಾಯ್ದೆ ಜಾರಿಗೊಂಡ ದಿನದಿಂದ ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಬೇಕಾದ ಇನ್ನೂ ಹತ್ತು ಹಲವು ಸಂಗತಿಗಳಿವೆ.

ಸಿಎಎ ವಿರುದ್ಧ ಪ್ರಜಾಸತ್ತಾತ್ಮಕವಾಗಿ ಪ್ರತಿಭಟನೆ ಮಾಡುತ್ತಿದ್ದ ಸುಮಾರು 30 ಭಾರತೀಯರನ್ನು ಬರ್ಬರವಾಗಿ ಕೊಂದು ಹಾಕಲಾಯಿತು. ಇದೇಕೆ ಸುಪ್ರೀಂಕೋರ್ಟ್‌ಗೆ ಕಳವಳಕಾರಿಯಾಗಿ ಕಾಣುತ್ತಿಲ್ಲ? ಈ ದೇಶದ ಸೇನೆಯಲ್ಲಿ ದುಡಿದ ಹಲವು ಸೈನಿಕರೇ ಎನ್‌ಆರ್‌ಸಿಯಲ್ಲಿ ಪೌರತ್ವವನ್ನು ಕಳೆದುಕೊಂಡಿದ್ದಾರೆ. ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ನಿವೃತ್ತ ಅಧಿಕಾರಿ ಮುಹಮ್ಮದ್ ಸನಾವುಲ್ಲಾ ಅವರ ಪೌರತ್ವವನ್ನು ರದ್ದುಗೊಳಿಸಿದ್ದಲ್ಲದೆ ಅವರನ್ನು ಡಿಟೆನ್‌ಶನ್ ಕ್ಯಾಂಪ್‌ಗೆ ಸೇರಿಸಲಾಗಿತ್ತು. ನ್ಯಾಯಾಲಯದಲ್ಲಿ ಬಡಿದಾಡಿ, ದುಡ್ಡು ಕಟ್ಟಿ ಜಾಮೀನು ಪಡೆದುಕೊಳ್ಳುವಂತಹ ಸ್ಥಿತಿ ಅವರಿಗೆ ಒದಗಿತು. ಈ ದೇಶಕ್ಕಾಗಿ ಅವರು 30 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಅವರಿಗೆ ಮಾಡಿದ ಅವಮಾನ ಈ ದೇಶದ ಆತ್ಮಕ್ಕೆ ಮಾಡಿದ ಗಾಯವಾಗಿದೆ. ಈ ದೇಶಕ್ಕಾಗಿ ಹೋರಾಡಿದ ಇನ್ನೋರ್ವ ಯೋಧ ಬೀರ್ ಬಹದ್ದೂರ್ ಥಾಪಾ ಅವರೂ ಪೌರತ್ವವನ್ನು ಕಳೆದುಕೊಂಡಿದ್ದಾರೆ. ಯಾವ ದೇಶಕ್ಕಾಗಿ ಹೋರಾಡಿದ್ದನೋ ಆ ಯೋಧ, ತನ್ನ ಪೌರತ್ವಕ್ಕಾಗಿ ಮತ್ತೊಮ್ಮೆ ಸರಕಾರದ ವಿರುದ್ಧ ಹೋರಾಡಬೇಕಾದ ಸ್ಥಿತಿ ನಿರ್ಮಾಣವಾಗಿರುವುದು ಸುಪ್ರೀಂಕೋರ್ಟ್‌ಗೆ ಯಾಕೆ ಕಳವಳಕಾರಿಯಾಗಿ ಕಾಣುತ್ತಿಲ್ಲ?

 ಎಲ್ಲ ಬೇಡ. ಕರ್ನಾಟಕದ ಬೀದರ್‌ನ ಶಾಲೆಯೊಂದರಲ್ಲಿ ಸಿಎಎ ವಿರುದ್ಧ ಕಿರು ಪ್ರಹಸನ ಮಾಡಿದ ಶಾಲಾ ವಿದ್ಯಾರ್ಥಿಗಳನ್ನು ‘ಭಯೋತ್ಪಾದಕರನ್ನು ವಿಚಾರಿಸುವಂತೆ’ ಪೊಲೀಸರು ಪದೇ ಪದೇ ವಿಚಾರಣೆ ನಡೆಸಿದರು. ಮಕ್ಕಳಿಗೆ ಮಾನಸಿಕ ದೌರ್ಜನ್ಯ ನೀಡಿದರು. ವಿದ್ಯಾರ್ಥಿಯ ವಿಧವೆ ತಾಯಿಯನ್ನು, ಓರ್ವ ಶಿಕ್ಷಕಿಯನ್ನು ದೇಶದ್ರೋಹದ ಆರೋಪದಲ್ಲಿ ಜೈಲಿಗೆ ತಳ್ಳಲಾಯಿತು. ಪ್ರಾಥಮಿಕ ಶಾಲೆಯ ಮಕ್ಕಳು ಯಾವ ನಾಟಕ ಆಡಬೇಕು, ಆಡಬಾರದು ಎನ್ನುವುದನ್ನು ಪೊಲೀಸರು ನಿರ್ಧರಿಸುವಂತಹ ಸನ್ನಿವೇಶ ಸೃಷ್ಟಿಯಾಗಿದೆ. ಆದರೂ ಸುಪ್ರೀಂಕೋರ್ಟಿಗೆ ಕಳವಳವಾಗಿಲ್ಲ. ಕನಿಷ್ಟ ಮಕ್ಕಳ ಹಕ್ಕಿನ ಉಲ್ಲಂಘನೆಯ ಕುರಿತಂತೆಯೂ ಯಾವುದೇ ನ್ಯಾಯಾಲಯ ಸರಕಾರವನ್ನು ಪ್ರಶ್ನಿಸಲಿಲ್ಲ. ಅದೆಲ್ಲ ಹಿಂದಿನ ಸಂಗತಿಯಾಯಿತು. ಶಾಹೀನ್ ಬಾಗ್‌ನ ಹಸುಳೆಗಾಗಿ ಸುಪ್ರೀಂಕೋರ್ಟ್ ಆಘಾತ ವ್ಯಕ್ತಪಡಿಸಿದ ದಿನವೇ, ಪತ್ರಿಕೆಗಳಲ್ಲಿ ಕೋಲ್ಕತಾದಿಂದ ಸುದ್ದಿಯೊಂದು ವರದಿಯಾಗಿದೆ. ತನ್ನಲ್ಲಿ ಸೂಕ್ತ ದಾಖಲೆಯಿಲ್ಲದ ಕಾರಣದಿಂದ ಎಲ್ಲಿ ತನ್ನ ಮಗ ಡಿಟೆನ್‌ಶನ್ ಸೆಂಟರ್ ಸೇರುತ್ತಾನೆಯೋ ಎಂಬ ಆತಂಕದಿಂದ ಖಿನ್ನನಾದ ತಂದೆಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪಶ್ಚಿಮಬಂಗಾಳದಲ್ಲಿ ಇನ್ನೂ ಎನ್‌ಆರ್‌ಸಿ ಜಾರಿಯಾಗಿಲ್ಲ. ಆದರೂ ಎನ್‌ಆರ್‌ಸಿ ಕುರಿತ ಆತಂಕ ಆತನನ್ನು ಆತ್ಮಹತ್ಯೆಯೆಡೆಗೆ ತಳ್ಳಿತು.

ಈ ಆತಂಕ ಕೊರೋನ ವೈರಸ್‌ಗಿಂತ ವೇಗವಾಗಿ ಇಡೀ ದೇಶವನ್ನು ವ್ಯಾಪಿಸುತ್ತಿರುವುದು ಯಾಕೆ ಸುಪ್ರೀಂಕೋರ್ಟ್‌ಗೆ ಕಳವಳಕಾರಿಯಾಗಿ ಕಂಡಿಲ್ಲ? ನಿಜಕ್ಕೂ ಸುಪ್ರೀಂಕೋರ್ಟ್ ಕಳವಳಗೊಂಡಿರುವುದು ಮಗುವಿನ ಸಾವಿಗಾಗಿ ಅಲ್ಲ. ಸರಕಾರ ಜಾರಿಗೆ ತಂದಿರುವ ಸಿಎಎ ವಿರುದ್ಧ ಶಾಹೀನ್‌ಬಾಗ್‌ನಲ್ಲಿ ಪ್ರತಿಭಟನೆ ತೀವ್ರಗೊಳ್ಳುತ್ತಿರುವುದು ಅದರ ಸಮಸ್ಯೆಯಾಗಿದೆ. ಮಗುವನ್ನು ಮುಂದಿಟ್ಟುಕೊಂಡು ಶಾಹೀನ್‌ಬಾಗ್ ಪ್ರತಿಭಟನಾಕಾರರನ್ನು ಆರೋಪಿಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನವನ್ನು ಸುಪ್ರೀಂಕೋರ್ಟ್ ಮಾಡುತ್ತಿದೆ ಅಥವಾ ಸರಕಾರವೇ ಸುಪ್ರೀಂಕೋರ್ಟ್‌ನ್ನು ಬಳಸಿಕೊಂಡು ಶಾಹೀನ್‌ಬಾಗ್ ಪ್ರತಿಭಟನಾಕಾರರ ಮೇಲೆ ದಾಳಿ ನಡೆಸುವುದಕ್ಕೆ ಈ ಮೂಲಕ ಹುನ್ನಾರ ನಡೆಸುತ್ತಿದೆ. ಆದರೆ ಶಾಹೀನ್‌ಬಾಗ್‌ನಲ್ಲಿ ನಡೆಯುತ್ತಿರುವುದೇನು, ಅದನ್ನು ದಮನಿಸಲು ಸಂಘಪರಿವಾರ ಕಾರ್ಯಕರ್ತರು ಏನೆಲ್ಲ ಬೆದರಿಕೆಗಳನ್ನು ಒಡ್ಡುತ್ತಿದ್ದಾರೆ ಎನ್ನುವುದನ್ನು ದೇಶಕ್ಕೆ ಸ್ಪಷ್ಟವಾಗಿ ಅರ್ಥವಾಗಿದೆ. ನ್ಯಾಯ ಕೊಡಬೇಕಾದ ಸುಪ್ರೀಂಕೋರ್ಟ್ ಪ್ರತಿಭಟನಾಕಾರರ ಪ್ರತಿಭಟಿಸುವ ಹಕ್ಕನ್ನೂ ಕಿತ್ತುಕೊಂಡದ್ದೇ ಆದರೆ, ಈ ದೇಶದಲ್ಲಿ ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯಿಲ್ಲ ಎನ್ನುವುದನ್ನು ನ್ಯಾಯಾಲಯವೇ ಘೋಷಿಸಿದಂತಾಗುತ್ತದೆ. ಶಾಹೀನ್ ಬಾಗ್‌ನ್ನು ಸರಕಾರ ಜಲಿಯನ್‌ವಾಲಾಬಾಗ್ ಮಾಡುವ ಮೊದಲು, ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಬೇಕಾಗಿದೆ. ಸಂವಿಧಾನದ ಘನತೆಯನ್ನು ಉಳಿಸಿಕೊಳ್ಳುವ ಮೂಲಕ ನ್ಯಾಯಾಲಯ ತನ್ನನ್ನು ತಾನೇ ಉಳಿಸಿಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News