ಆಪ್ ಶಾಸಕನ ಬೆಂಗಾವಲು ವಾಹನದ ಮೇಲೆ ಗುಂಡಿನ ದಾಳಿ: ಓರ್ವ ಮೃತ್ಯು

Update: 2020-02-12 03:37 GMT

ಹೊಸದಿಲ್ಲಿ, ಫೆ.12 ದೆಹಲಿ ವಿಧಾನಸಭೆಗೆ ನೂತನವಾಗಿ ಆಯ್ಕೆಯಾದ ಆಮ್ ಆದ್ಮಿ ಪಕ್ಷದ ಶಾಸಕ ನರೇಶ್ ಯಾದವ್ ಅವರ ಬೆಂಗಾವಲು ವಾಹನದ ಮೇಲೆ ಅಪರಿಚಿತರು ಮಂಗಳವಾರ ತಡರಾತ್ರಿ ಗುಂಡಿನ ದಾಳಿ ನಡೆಸಿದಾಗ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ. ದೆಹಲಿಯ ಕಿಶನ್‌ಗಢ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಹೊಸದಾಗಿ ಆಯ್ಕೆಯಾದ ಶಾಸಕ ತಮ್ಮ ಬೆಂಬಲಿಗರೊಂದಿಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ವಾಪಸ್ಸಾಗುತ್ತಿದ್ದಾಗ ಈ ಕೃತ್ಯ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೆಹರೌಲಿ ಕ್ಷೇತ್ರದ ಶಾಸಕನ ಬೆಂಗಾವಲು ವಾಹನದ ಮೇಲೆ ಏಳು ಸುತ್ತು ಗುಂಡು ಹಾರಿಸಲಾಗಿದೆ. ಘಟನೆಯಲ್ಲಿ ವ್ಯಕ್ತಿಯೊಬ್ಬ ಗಾಯಗೊಂಡಿದ್ದು, ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಸಂಬಂಧ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆಯಲ್ಲಿ ಜೀವ ಕಳೆದುಕೊಂಡ ವ್ಯಕ್ತಿ ಪಕ್ಷದ ಕಾರ್ಯಕರ್ತ ಅಶೋಕ್ ಮಾನ್ ಎಂದು ಆಮ್ ಆದ್ಮಿ ಪಾರ್ಟಿ ನಾಯಕ ಸಂಜಯ್ ಸಿಂಗ್ ಟ್ವೀಟ್ ಮಾಡಿದ್ದಾರೆ.

"ನರೇಶ್ ಯಾದವ್ ಅವರ ಬೆಂಗಾವಲು ವಾಹನದ ಮೇಲೆ ಮೆಹರೌಲಿಯಲ್ಲಿ ಗುಂಡಿನ ದಾಳಿ ನಡೆದಿದೆ. ಅಶೋಕ್ ಮಾನ್ ಎಂಬುವವರು ಮೃತಪಟ್ಟಿದ್ದಾರೆ. ನರೇಶ್ ಯಾದವ್, ದೇವಸ್ಥಾನಕ್ಕೆ ಭೇಟಿ ನೀಡಿ ವಾಪಸ್ಸಾಗುತ್ತಿದ್ದರು" ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾಗಿ ಆಪ್ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಅಂಕಿತ್ ಲಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News