ದಾರುಲ್ ಉಲೂಂ ಭಯೋತ್ಪಾದನೆಯ ಗಂಗೋತ್ರಿ: ಗಿರಿರಾಜ ಸಿಂಗ್ ವಿವಾದಾತ್ಮಕ ಹೇಳಿಕೆ

Update: 2020-02-12 14:52 GMT

ಹೊಸದಿಲ್ಲಿ,ಫೆ.12: ತನ್ನ ಅತಿರೇಕದ ದ್ವೇಷ ಭಾಷಣಗಳಿಗಾಗಿ ಕುಖ್ಯಾತರಾಗಿರುವ ಕೇಂದ್ರ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ಗಿರಿರಾಜ ಸಿಂಗ್ ಮತ್ತೊಮ್ಮೆ ಅಂತಹುದೇ ಹೇಳಿಕೆಯನ್ನು ನೀಡಿದ್ದಾರೆ.

ಉತ್ತರ ಪ್ರದೇಶದ ದೇವಬಂದ್‌ನಲ್ಲಿರುವ ಇಸ್ಲಾಮಿಕ್ ಶಿಕ್ಷಣ ಸಂಸ್ಥೆ ದಾರುಲ್ ಉಲೂಂ ‘ಭಯೋತ್ಪಾದಕರ ಗಂಗೋತ್ರಿ (ಉಗಮ ಸ್ಥಾನ)’ಯಾಗಿದೆ ಎಂದು ಅವರು ಈ ಬಾರಿ ಆರೋಪಿಸಿದ್ದಾರೆ.

 ದೇವಬಂದ್ ಭಯೋತ್ಪಾದಕರ ಗಂಗೋತ್ರಿಯೆಂದು ತಾನೊಮ್ಮೆ ಹೇಳಿದ್ದೆ. ಹಫೀಝ್ ಸಯೀದ್ ಸೇರಿದಂತೆ ಎಲ್ಲ ‘ಮೋಸ್ಟ್ ವಾಂಟೆಡ್’ ಭಯೋತ್ಪಾದಕರು ದೇವಬಂದ್‌ನಿಂದಲೇ ಬಂದಿದ್ದಾರೆ. ದೇವಬಂದ್ ಮತ್ತು ದಿಲ್ಲಿಯ ಶಾಹೀನ್‌ ಬಾಗ್‌ ನಂತಹ ಸ್ಥಳಗಳು ಆತ್ಮಹತ್ಯಾ ಬಾಂಬರ್‌ಗಳನ್ನು ಸೃಷ್ಟಿಸುವ ತಾಣಗಳಾಗಿವೆ. ಈ ಜನರು ಸಿಎಎ ವಿರುದ್ಧವಾಗಿಲ್ಲ,ಅವರು ಭಾರತದ ವಿರುದ್ಧವಾಗಿದ್ದಾರೆ. ಇದೊಂದು ಬಗೆಯ ಖಿಲಾಫತ್ ಆಂದೋಲನವಾಗಿದೆ ಎಂದು ಸಿಂಗ್ ಹೇಳಿದರು.

ಶಾಹೀನ್‌ ಬಾಗ್ ‌ನಲ್ಲಿ,ವಿಶೇಷವಾಗಿ ಮಹಿಳೆಯರು ಕಳೆದ ಎರಡು ತಿಂಗಳುಗಳಿಂದಲೂ ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

ಶಾಹೀನ್‌ಬಾಗ್ ಪ್ರತಿಭಟನೆ ಕುರಿತು ತನ್ನ ಇತ್ತೀಚಿನ ಟೀಕೆಯನ್ನು ಪುನರುಚ್ಚರಿಸಿದ ಅವರು,ಅದು ಈಗ ಪ್ರತಿಭಟನೆಯಾಗಿ ಉಳಿದಿಲ್ಲ. ಅಲ್ಲಿ ಸುಸೈಡ್ ಬಾಂಬರ್‌ಗಳ ಗುಂಪೊಂದನ್ನು ಸೃಷ್ಟಿಸಲಾಗುತ್ತಿದೆ ಮತ್ತು ದೇಶದ ವಿರುದ್ಧ ಒಳಸಂಚೊಂದು ಅದರ ರಾಜಧಾನಿಯಲ್ಲೇ ರೂಪುಗೊಳ್ಳುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News