ಈ ರೈಲು ಸೇವೆಯ ಬಗ್ಗೆ ಗೊತ್ತೇ?

Update: 2020-02-12 18:32 GMT

ನೀವು ಪ್ರಯಾಣಿಸುತ್ತಿರುವ ರೈಲು ಇಳಿಯಬೇಕಾದ ನಿಲ್ದಾಣಕ್ಕೆ ಬೆಳಗಿನ ನಾಲ್ಕು ಗಂಟೆಗೆ ಅಥವಾ ಅಂತಹುದೇ ಎಡಬಿಡಂಗಿ ಸಮಯಲ್ಲಿ ತಲುಪಲಿದೆಯೇ? ನಿದ್ರೆಯಿಂದಾಗಿ ನೀವು ಇಳಿಯಬೇಕಾದ ನಿಲ್ದಾಣವು ತಪ್ಪಿಹೋಗಬಹುದು ಎಂಬ ಆತಂಕ ಬೇಡ. ಹಲವಾರು ರೈಲು ಪ್ರಯಾಣಿಕರು ನಸುಕಿನ ವೇಳೆಯಲ್ಲಿ ಗಾಢನಿದ್ರೆಯಲ್ಲಿರುತ್ತಾರೆ ಮತ್ತು ತಾವು ಇಳಿಯಬೇಕಾದ ನಿಲ್ದಾಣವನ್ನು ತಪ್ಪಿಸಿಕೊಳ್ಳುತ್ತಾರೆ. ಇಂತಹ ಪ್ರಯಾಣಿಕರ ಅನುಕೂಲಕ್ಕಾಗಿಯೇ ಭಾರತೀಯ ರೈಲ್ವೆಯು ಸೇವೆಯನ್ನು ಒದಗಿಸುತ್ತಿದ್ದು, ಈ ಸೇವೆಯಡಿ ಪ್ರಯಾಣಿಕರು ರೈಲು ತಾವು ಇಳಿಯುವ ನಿಲ್ದಾಣವನ್ನು ತಲುಪುವ ಮುನ್ನವೇ ತಮ್ಮ ಮೊಬೈಲ್ ಫೋನ್‌ನಲ್ಲಿ ಸಂದೇಶವನ್ನು ಪಡೆಯುತ್ತಾರೆ. ಈ ಸೇವೆಯನ್ನು ಬಳಸಿಕೊಳ್ಳುವ ಮೂಲಕ ಪ್ರಯಾಣಿಕರು ರಾತ್ರಿಯಿಡೀ ಎಚ್ಚರವಾಗಿರುವ ಸಂಕಟದಿಂದ ಪಾರಾಗುವ ಜೊತೆಗೆ ತಾವು ಇಳಿಯುವ ನಿಲ್ದಾಣವು ತಪ್ಪಿ ಹೋಗಬಹುದು ಎಂದು ತಲೆ ಬಿಸಿ ಮಾಡಿಕೊಳ್ಳಬೇಕಿಲ್ಲ.

 ಈ ಸೇವೆಯನ್ನು ಪಡೆಯಲು ಪ್ರಯಾಣಿಕರು ರೈಲ್ವೆಯ ಸಹಾಯವಾಣಿ ಸಂಖ್ಯೆ 139ಕ್ಕೆ ಕರೆ ಮಾಡಬೇಕಾಗುತ್ತದೆ ಮತ್ತು ತಮ್ಮ ಪಿಎನ್‌ಆರ್ ಸಂಖ್ಯೆ,ಇಳಿಯಬೇಕಾದ ನಿಲ್ದಾಣದ ಹೆಸರು ಮತ್ತು ಎಸ್‌ಟಿಡಿ ಕೋಡ್‌ನಂತಹ ಪ್ರಾಥಮಿಕ ಮಾಹಿತಿಗಳನ್ನು ಸಲ್ಲಿಸಬೇಕಾಗುತ್ತದೆ. ಪ್ರಯಾಣಿಕರು ಈ ಎಲ್ಲ ಮಾಹಿತಿಗಳನ್ನು ನೀಡಿದ ಬಳಿಕ ಸಿಸ್ಟಂ ರೈಲಿನ ಪ್ರಚಲಿತ ಸ್ಥಿತಿಗತಿಯನ್ನು ಕಂಡುಕೊಳ್ಳುತ್ತದೆ ಮತ್ತು ಫೋನ್ ಕರೆಯ ಮೂಲಕ ಪ್ರಯಾಣಿಕರಿಗೆ ಸರಿಯಾದ ಮಾಹಿತಿಯನ್ನು ಒದಗಿಸುತ್ತದೆ. ನಿಗದಿತ ನಿಲ್ದಾಣವನ್ನು ತಲುಪುವ ಅರ್ಧ ಗಂಟೆ ಮೊದಲು ಪ್ರಯಾಣಿಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕರೆ ಬರುತ್ತದೆ.

ಇತ್ತೀಚೆಗೆ ಪ್ರಯಾಣಿಕರ ಅನುಕೂಲಕ್ಕಾಗಿ 139 ಸೇವಾ ಸಂಖ್ಯೆಯನ್ನು ಇಂಟರ್ಯಾಕ್ಟ್ ವಾಯಿಸ್ ರಿಸ್ಪಾನ್ಸ್ ಸಿಸ್ಟಮ್ ಆಧಾರಿತ ಏಕೀಕೃತ ಸಹಾಯವಾಣಿ ಸಂಖ್ಯೆಯನ್ನಾಗಿ ಪರಿವರ್ತಿಸಲಾಗಿದೆ. ಹೀಗಾಗಿ ಪ್ರಯಾಣಿಕರು ರೈಲ್ವೆ ಸೇವೆಗಳ ವಿವಿಧ ಸಂಖ್ಯೆಗಳನ್ನು ನೆನಪಿಟ್ಟುಕೊಳ್ಳಬೇಕಿಲ್ಲ. ಜನವರಿ 1ರಿಂದ ವಿವಿಧ ಸಂಪರ್ಕ ಸಂಖ್ಯೆಗಳ ಬದಲು 139 ಏಕಮಾತ್ರ ಸೇವಾ ಸಂಖ್ಯೆಯಾಗಿ ಜಾರಿಗೆ ಬಂದಿದೆ. ಯಾವುದೇ ನೆರವನ್ನುಕೋರಲು ಪ್ರಯಾಣಿಕರು 139 ಸಂಖ್ಯೆ ಕರೆ ಅಥವಾ ಎಸ್‌ಎಂಎಸ್ ಮಾಡಬಹುದು. ಈ ದೂರವಾಣಿ ಸಂಖ್ಯೆಯು 12 ವಿವಿಧ ಭಾಷೆಗಳಲ್ಲಿ ಲಭ್ಯವಿದೆ.

Writer - -ಬಿ. ಎಸ್.

contributor

Editor - -ಬಿ. ಎಸ್.

contributor

Similar News

ಜಗದಗಲ
ಜಗ ದಗಲ