ಉ.ಪ್ರದೇಶ ವಿಧಾನಸಭೆ: ಎಲ್‌ಪಿಜಿ ಸಿಲಿಂಡರ್ ಹೊತ್ತು ವಿಪಕ್ಷ ಸದಸ್ಯರ ಪ್ರತಿಭಟನೆ

Update: 2020-02-13 16:18 GMT

ಲಕ್ನೊ, ಫೆ.13: ಉತ್ತರಪ್ರದೇಶ ವಿಧಾನಸಭೆಯಲ್ಲಿ ಬಜೆಟ್ ಅಧಿವೇಶನದ ಮೊದಲ ದಿನದ ಕಾರ್ಯಕಲಾಪದಲ್ಲಿ ವಿಪಕ್ಷ ಸದಸ್ಯರು ಪೌರತ್ವ ಕಾಯ್ದೆ, ನಿರುದ್ಯೋಗ ಸಮಸ್ಯೆ, ಎಲ್‌ಪಿಜಿ ಅಡುಗೆ ಅನಿಲ ದರ ಏರಿಕೆ, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಮತ್ತಿತರ ವಿಷಯಗಳಲ್ಲಿ ಸರಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ ಕಾರಣ ಸದನ ಗದ್ದಲದ ಮಡುವಾಯಿತು.

ಅಧಿವೇಶನದ ಮೊದಲ ದಿನ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಭಾಷಣ ಆರಂಭಿಸಲು ಎದ್ದು ನಿಲ್ಲುತ್ತಿದ್ದಂತೆಯೇ ಸಮಾಜವಾದಿ ಪಕ್ಷದವರು ಹೆಚ್ಚಿನ ಸಂಖ್ಯೆಯಲ್ಲಿದ್ದ ವಿಪಕ್ಷ ಶಾಸಕರು ಸದನದ ಮಧ್ಯಕ್ಕೆ ಧಾವಿಸಿ ಭಾಷಣಕ್ಕೆ ಅಡ್ಡಿಪಡಿಸಿದರು. ಪೌರತ್ವ ಕಾಯ್ದೆ ಮತ್ತು ಎನ್‌ಆರ್‌ಸಿ ವಿರೋಧಿ ಪೋಸ್ಟರ್‌ಗಳನ್ನು ಪ್ರದರ್ಶಿಸಿ ಘೋಷಣೆ ಕೂಗುತ್ತಾ ಧರಣಿ ಕುಳಿತರು. ಇನ್ನು ಕೆಲವು ಶಾಸಕರು ಎಲ್‌ಪಿಜಿ ಸಿಲಿಂಡರ್‌ಗಳನ್ನು ಬೆನ್ನ ಮೇಲೆ ಹೊತ್ತುಕೊಂಡು ಎಲ್‌ಪಿಜಿ ದರ ಏರಿಕೆಗೆ ಆಕ್ರೋಶ ವ್ಯಕ್ತಪಡಿಸಿದರು.

ಸದನದ ಹೊರಗೆಯೂ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಪಕ್ಷದ ಶಾಸಕರು ಸರಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು. ದೈನಂದಿನ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಸೈಕಲ್ ರಿಕ್ಷಾ ಎಳೆಯುವವರಿಗೆ ಟೊಮೆಟೊಗಳನ್ನು ಹಂಚಲಾಯಿತು. ಮಂಗಳವಾರ ಉತ್ತರಪ್ರದೇಶ ಸರಕಾರ ಬಜೆಟ್ ಮಂಡಿಸಲಿದೆ. ಆದರೆ ಪೌರತ್ವ ಕಾಯ್ದೆ ಮತ್ತು ಎನ್‌ಆರ್‌ಸಿ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯನ್ನು ಸದನದಲ್ಲಿ ಮುಂದುವರಿಸುವುದಾಗಿ ವಿಪಕ್ಷಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News