ಸಾಮಾಜಿಕ ಸಂದೇಶಕ್ಕೆ ಕಾವು ಕೊಟ್ಟ ‘ಸಿಡಿಲ ಹಕ್ಕಿ’

Update: 2020-02-14 07:18 GMT

ಸಿಡಿಲ ಅಬ್ಬರಕ್ಕೆ ಆಕಸ್ಮಿಕವಾಗಿ ಮೊಟ್ಟೆ ಒಡೆದು ಬಂದ ಹಕ್ಕಿ ಹಲವಾರು ಹಕ್ಕಿಗಳ ಬದುಕು ಬವಣೆಗೆ ಪ್ರೇರಣೆಯಾಗಬಲ್ಲುದು ಎಂಬ ಸುಂದರ ಕಥಾ ಹಂದರದಿಂದ ಕೂಡಿದ ನಾಟಕ ಸಿಡಿಲ ಹಕ್ಕಿ ಪ್ರೇಕ್ಷಕ ವರ್ಗದ ಮುಕ್ತ ಕಂಠದ ಶ್ಲಾಘನೆಗೆ ಪಾತ್ರವಾಗಿ ಇತ್ತೀಚೆಗೆ ಕೇರಳ ರಾಜ್ಯದ ಕಣ್ಣೂರು ವಿಶ್ವವಿದ್ಯಾನಿಲಯ ಕನ್ನಡ ನಾಟಕ ಸ್ಪರ್ಧಾಕಣದಲ್ಲಿ ಪ್ರಥಮ ಸ್ಥಾನ ಪಡೆಯಿತು.

ಮಂಜೇಶ್ವರದ ರಾಷ್ಟ್ರಕವಿ ಗೋವಿಂದ ಪೈ ಸರಕಾರಿ ಕಾಲೇಜಿನ ವಿದ್ಯಾರ್ಥಿಗಳ ಹೃದಯರಂಗ ರಂಗಭೂಮಿ ತಂಡ ಪ್ರದರ್ಶಿಸಿದ ‘ಸಿಡಿಲ ಹಕ್ಕಿ’ ಪ್ರಸ್ತುತ ಸಮಾಜದ ವಿದ್ಯಮಾನದಲ್ಲಿ ಅಬಲೆ ಹೆಣ್ಣು ಮಕ್ಕಳ ಮೇಲೆ ನಡೆಯುವ ದೌರ್ಜನ್ಯದ ಸುತ್ತ್ತ ಹೆಣೆದ ಸಾಮಾಜಿಕ ದೌರ್ಜನ್ಯದ ಕಥಾಹಂದರ. ಗಂಡನೆಂಬ ಆಸರೆಯಿಲ್ಲದ ಒಂಟಿ ಹೆಣ್ಣನ್ನು ಊರಿನ ಧನಿಕ ಬಳಸಿಕೊಳ್ಳಲು ಹೂಡುವ ಉಪಾಯ, ಬೆದರಿಕೆಗಳು, ಬೆಳೆಯುತ್ತಿರುವ ತನ್ನ ಮಗಳ ಮೇಲೆ ಹದ್ದಿನ ಕಣ್ಣು ಬೀಳದಿರಲಿ ಎಂಬ ತಾಯಿಯ ಮಾತೃ ವಾತ್ಸಲ್ಯದ ಸಹನೆ, ನಾಟಕದಲ್ಲಿ ಆಗಾಗ ಬರುವ ಬಳೆಗಾರ ಆತನಲ್ಲಿ ಮಗಳು ತನ್ನ ಅಪ್ಪನನ್ನು ಕಂಡಿದ್ದಿಯಾ ಅವರ ಚಹರೆಗಳನ್ನು ಹೇಳಿಕೊಡುವ ದೃಶ್ಯ ನೋಡುಗರ ಮನತಟ್ಟುವಂತೆ ಮೂಡಿ ಬಂದಿದೆ. ಊರಿನ ಧನಿಕನ ಕಣ್ಣು ಮಗಳ ಮೇಲೆ ಬಿದ್ದು ಅವಳನ್ನೂ ಬಳಸಿಕೊಳ್ಳಲು ಹೋಗುವಾಗ ಸಹನಾ ಮೂರ್ತಿಯಂತಿದ್ದ ತಾಯಿ ಒಮ್ಮೆಲೆ ಸಿಡಿದು ಧನಿಕನ ಮೇಲೆ ಆಕ್ರಮಣ ದೃಶ್ಯ ರೋಚಕವಾಗಿತ್ತು. ‘‘ಪ್ರತೀ ಹೆಣ್ಣು ಹೃದಯಗಳು ಜಾಗೃತಿಯಾಗುವುದೇ ಇಲ್ಲಿಂದಲೇ. ಕತ್ತಿ ಎಷ್ಟು ಜನರ ತಲೆ ತೆಗೆದಿದೆಯೋ ಗೊತ್ತಿಲ್ಲ ಆದರೆ ನಾನು ಹಿಡಿದ ಕತ್ತಿಗೊಂದು ಉದ್ದೇಶವಿದೆ’’ ಎಂದು ಸಿಡಿದಾಗ ನ್ಯಾಯದೇವತೆ ನೀಡುವ ಪರಿಹಾರ ಮರಣ ದಂಡನೆ ನಿರ್ಭಯಾಳನ್ನು ನೆನಪಿಸುತ್ತದೆ. ‘‘ನಾನು ಹಿಡಿದ ಕತ್ತಿ ಹರಿತವಿಲ್ಲ ಇನ್ನಷ್ಟು ಹರಿತವಾಗಬೇಕು’’ ಎಂಬ ತೀರ್ಮಾನ ಸಮಾಜ ಕಂಟಕರಿಗೆ ನಡುಕವಾದರೆ ಹೆಣ್ಣು ಮನಸ್ಸುಗಳಿಗೆ ಜಾಗೃತಿಯಾಗುತ್ತದೆ. ಕತ್ತಿಯನ್ನು ಹರಿತಗೊಳಿಸುವ ಸಂಗೀತದೊಂದಿಗೆ ನಾಟಕ ಕೊನೆಯಾಗುತ್ತದೆ. ಎಡೆ ಎಡೆಗೆ ಬರುವ ಹುಚ್ಚಿ ಪಾತ್ರ, ‘‘ಸಿಡಿಲು ಬರುತ್ತೆ ಸಿಡಿಲು... ಓಡೋಣ’’ ಎನ್ನುವ ಅಭಿನಯ ಎಲ್ಲರನ್ನು ಚಿಂತಿಸುವಂತೆ ಮಾಡುತ್ತದೆ.

‘‘ನನಗೆ ಶಬ್ದ ಬೇಕು ಶಬ್ದ.... ಏಳು ಮೋಡಗಳಿಂದಾಚೆಯಿಂದ ಭೋರ್ಗರೆದು ಬರುವ ಸಿಡಿಲನ್ನು ಓಡಿಸುವ ಶಬ್ದ ಬೇಕು ನನಗೆ ಶಬ್ದ ಬೇಕು’’ ಎಂದು ಮುಗ್ಧವಾಗಿ ಅಭಿನಯಿಸುವ ಹುಚ್ಚಿ ಪಾತ್ರ ನೋಡುಗರ ಕನಿಕರ ಗಿಟ್ಟಿಸುತ್ತದೆ. ಈ ಪಾತ್ರದಲ್ಲಿ ಮಿಂಚಿದ ಕಾವ್ಯಾ ಬಾಯಾರ್, ಯಜಮಾನ ಪಾತ್ರ ರಾಜೇಶ್ ನೆಲ್ಲಿಕಟ್ಟೆ, ರೋಚಕ ಸನ್ನಿವೇಶದಲ್ಲಿ ಅದ್ಬುತ ಅಭಿನಯ ನೀಡಿದ ನವ್ಯ ಕೋಟೆಕ್ಕಾರ್, ಮಗಳ ಪಾತ್ರಕ್ಕೆ ನ್ಯಾಯ ಒದಗಿಸಿದ ರಶ್ಮಿತಾ ಬೋವಿಕ್ಕಾನ, ಸುಂದರ ಕಲ್ಪನೆಯ ಪಾತ್ರ ಬಳೆಗಾರನಾಗಿ ಚೇತನ್ ಕುಮಾರ್ ಬಾರಿಕ್ಕಾಡ್, ಸಹ ಕಲಾವಿದರಾಗಿ ಸಂಗೀತಾ ಪಚ್ಲಪಾರೆ, ರಂಜಿತಾ ಪಟ್ಟಾಜೆ, ಭವ್ಯ ಪಾಂಡಿ ಕಥಾ ಪಾತ್ರಗಳಿಗೆ ಜೀವ ತುಂಬಿ ಮನಮೋಹಕ ಅಭಿನಯ ನೀಡಿದ್ದಾರೆ. ಹಿನ್ನೆಲೆ ಸಂಗೀತದಲ್ಲಿ ಯಜ್ಞೇಶ್ ಕಳತ್ತೂರು, ದೇವಿಕಾ ಸಹಕರಿಸಿದ್ದಾರೆ. ರಂಗ ವಿನ್ಯಾಸ ಪರಿಕರ ಉದಯ ಕಿಳಿಗಾರ್ .

ಶಶಿಧರ್ ಎದ್ರುತ್ತೊಡು, ಅಶೋಕ ಮಾಸ್ತರ್ ಕೊಡ್ಲಮೊಗರು, ಶರಣ್ ಕಾಟುಕುಕ್ಕೆ ಸಹಕರಿಸಿದ್ದಾರೆ. ಮಕ್ಕಳ ಈ ನಾಟಕ ಪ್ರಯೋಗದ ಹಿಂದೆ ಗೋವಿಂದ ಪೈ ಕಾಲೇಜಿನ ಉಪನ್ಯಾಸಕಿ ಕವಯಿತ್ರಿ ಲಕ್ಮೀ ತಂಡದ ಮಾರ್ಗದರ್ಶಕರಾಗಿ ನೇತೃತ್ವವಹಿಸಿದ್ದಾರೆ. ಸಿಡಿಲ ಹಕ್ಕಿ ನಾಟಕವನ್ನು ಮಕ್ಕಳ ರಂಗಭೂಮಿಯ ಯಶಸ್ವಿ ನಾಟಕಗಾರ ಉದಯ ಸಾರಂಗ ರಚಿಸಿ ನಿರ್ದೇಶಿಸಿದ್ದಾರೆ. ಹಲವಾರು ಯಶಸ್ವಿ ನಾಟಕಗಳನ್ನು ರಂಗಭೂಮಿಗೆ ನೀಡಿದ ಪ್ರತಿಭಾನ್ವಿತ ರಂಗ ನಿರ್ದೇಶಕರಾಗಿರುವ ಸಾರಂಗ ‘ನನ್ನ ಗೋಪಾಲ’, ‘ಸಿಹಿ ಮೂಲಂಗಿ’, ‘ಮಂಟೇಸ್ವಾಮಿ’, ‘ಪಂಜರದ ಗಿಳಿ’ ಕಾವ್ಯ ಕಥನವನ್ನು ನಾಟಕ ರೂಪಾಂತರ ಮಾಡಿ ಎಲ್ಲರಿಂದಲೂ ಪ್ರಶಂಸಿಸಲ್ಪಟ್ಟ ಸೃಜನಾತ್ಮಕ ರಂಗ ನಿರ್ದೇಶಕರಾಗಿದ್ದಾರೆ. ಮಕ್ಕಳ ರಂಗಭೂಮಿಯಲ್ಲಿ ಕ್ರಿಯಾತ್ಮಕವಾಗಿ ತೊಡಗಿಸಿಕೊಂಡು ಗಡಿನಾಡು ಕಾಸರಗೋಡಿನಲ್ಲಿ ರಂಗಭೂಮಿಯನ್ನು ಪೋಷಿಸುತ್ತಿದ್ದಾರೆ. ಹಲವಾರು ಶಿಷ್ಯ ವೃಂದವನ್ನು ಪಡೆದ ಇವರ ಎಲ್ಲಾ ನಾಟಕಗಳಲ್ಲೂ ಸಾಮಾಜಿಕ ತುಡಿತ, ಪರಿಸರ ಬಾಂಧವ್ಯ ಎದ್ದು ಕಂಡು ಬರುತ್ತದೆ.

Writer - ಜಯ ಮಣಿಯಂಪಾರೆ

contributor

Editor - ಜಯ ಮಣಿಯಂಪಾರೆ

contributor

Similar News