'ಸರಕಾರದಿಂದ ಯಾವ ಸಹಾಯವೂ ಸಿಕ್ಕಿಲ್ಲ': ಪುಲ್ವಾಮ ಹುತಾತ್ಮ ಯೋಧರ ಕುಟುಂಬಸ್ಥರ ಆಕ್ರೋಶ

Update: 2020-02-14 11:49 GMT
ಕೌಶಲ್ ಕುಮಾರ್ ರಾವತ್ ಕುಟುಂಬ

ಹೊಸದಿಲ್ಲಿ: ನಲ್ವತ್ತು ಮಂದಿ ಸಿಆರ್ ಪಿಎಫ್ ಯೋಧರನ್ನು ಬಲಿ ಪಡೆದ ಪುಲ್ವಾಮ ಭಯೋತ್ಪಾದಕ ದಾಳಿಗೆ ಇಂದು ಒಂದು ವರ್ಷ ತುಂಬಿದೆ. ಈ ದಾಳಿಯಲ್ಲಿ ಹುತಾತ್ಮರಾದ ಯೋಧರ ಬಗ್ಗೆ ದೇಶಕ್ಕೆ ದೇಶವೇ ಕಂಬನಿ ಮಿಡಿಯಿತು. ಆದರೆ ಹುತಾತ್ಮರ ಕುಟುಂಬಗಳು ಇಂದಿಗೂ ತಮ್ಮನ್ನು ಅಗಲಿದ ತಮ್ಮ ಪ್ರೀತಿಪಾತ್ರರನ್ನು ನೆನೆದು ದುಃಖಿಸುತ್ತಿವೆ. ಈ ದಾಳಿಯಲ್ಲಿ ಹುತಾತ್ಮರಾದ ಕೆಲ ಯೋಧರ ಕುಟುಂಬ ಸದಸ್ಯರ ಜತೆ thequint.com ಮಾತನಾಡಿ ಅವರ ಬಗ್ಗೆ ತಿಳಿದುಕೊಳ್ಳುವ ಯತ್ನ ನಡೆಸಿದೆ.

ಕಾನ್‍ಸ್ಟೇಬಲ್ ಕೌಶಲ್ ಕುಮಾರ್ ರಾವತ್

ಸಿಆರ್‍ ಪಿಎಫ್‍ ನ 115ನೇ ಬೆಟಾಲಿಯನ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದ ರಾವತ್ 1990ರಲ್ಲಿ  ಉದ್ಯೋಗಕ್ಕೆ ಸೇರ್ಪಡೆಗೊಂಡಿದ್ದರು. ಅವರು ತಮ್ಮ ಪತ್ನಿ, ತಾಯಿ, ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ. ರಾವತ್ ಅವರೇ ಕುಟುಂಬದ ಏಕೈಕ ಆಧಾರ ಸ್ಥಂಭವಾಗಿದ್ದರಿಂದ ಅವರ ಕುಟುಂಬ ಪಿಂಚಣಿ ಹಣದಿಂದಲೇ ಜೀವನ ದೂಡುತ್ತಿದೆ. "ಪಿಂಚಣಿಯಿಂದಲೇ ಹೇಗೆ ಬದುಕುತ್ತಿದ್ದೇವೆಂಬುದು ನಮಗೇ ಗೊತ್ತು. 25 ಲಕ್ಷ ರೂ. ಪರಿಹಾರ ಹೊರತು ಸರಕಾರದಿಂದ ಯಾವ ಸಹಾಯವೂ ಸಿಕ್ಕಿಲ್ಲ. ದೊಡ್ಡ ಭರವಸೆಗಳನ್ನಷ್ಟೇ ನೀಡಿದರೇ ಹೊರತು ಏನೂ ಮಾಡಿಲ್ಲ" ಎಂದು ರಾವತ್ ಅವರ ತಾಯಿ ಸುಧಾ ಹೇಳುತ್ತಾರೆ.

ರಾವತ್ ಅವರ ಒಬ್ಬ ಪುತ್ರ ರಷ್ಯಾದಲ್ಲಿ ಎಂಬಿಬಿಎಸ್ ಮಾಡುತ್ತಿದ್ದರೆ, ಪುತ್ರಿ ದಿಲ್ಲಿಯಲ್ಲಿ ಖಾಸಗಿ ಕಂಪೆನಿ ಉದ್ಯೋಗಿ. ಇನ್ನೊಬ್ಬ ಪುತ್ರನಿಗೆ ಸರಕಾರಿ ಉದ್ಯೋಗದ ಭರವಸೆ ನೀಡಲಾಗಿದೆ.

"ವಸತಿ ಹಂಚಿಕೆ, ಪ್ರತಿಮೆ ನಿರ್ಮಾಣ, ಗ್ರಾಮದ ಹೆಸರು ಬದಲಾವಣೆ ಹೀಗೆ ಹುತಾತ್ಮರಿಗಾಗಿ ಹಲವು ನಿಯಮಗಳಿವೆ. ಆದರೆ ಒಂದೇ ಒಂದು 'ಹುತಾತ್ಮ ನಿಯಮ'ವನ್ನು ಪಾಲಿಸಿಲ್ಲ ಎಂದು ಕುಟುಂಬಸ್ಥರು ಆರೋಪಿಸುತ್ತಾರೆ.

ಹೆಡ್ ಕಾನ್‍ಸ್ಟೇಬಲ್ ಸಂಜಯ್ ಕುಮಾರ್ ಸಿನ್ಹಾ

ಸಿಆರ್‍ ಪಿಎಫ್‍ ನಲ್ಲಿ 170ನೇ ಬೆಟಾಲಿಯನ್‍ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಸಿನ್ಹಾ ಆವರು ಒಂದು ತಿಂಗಳ ರಜೆ ನಂತರ ಕಳೆದ ವರ್ಷದ ಫೆಬ್ರವರಿ 8ರಂದು  ಮತ್ತೆ ಉದ್ಯೋಗಕ್ಕೆ ಮರಳಿದ್ದರು. ಮತ್ತೆ 15 ದಿನಗಳ ನಂತರ ಮನೆಗೆ ಮರಳುವುದಾಗಿ ಹೇಳಿದ್ದ ಅವರು ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದರು. ಅವರಿಗೆ ಪತ್ನಿ, ವೃದ್ಧ ಹೆತ್ತವರು ಒಬ್ಬ ಪುತ್ರ ಹಾಗೂ ಒಬ್ಬರು ಪುತ್ರಿಯರಿದ್ದಾರೆ. ಅವರ ಹೆತ್ತವರು ತಮಗೆ ದೊರೆಯುವ ರೂ 400 ಪಿಂಚಣಿ ಹಣದಲ್ಲಿಯೇ ದಿನ ದೂಡುತ್ತಿದ್ದಾರೆ. ಸಿನ್ಹಾ ಅವರ ಪುತ್ರಿಗಿನ್ನೂ ವಿವಾಹವಾಗಿಲ್ಲ. "ಸರಕಾರ ನಮ್ಮ ಕಷ್ಟಗಳನ್ನು ಆಲಿಸಬೇಡವೇ?, ನಾವು ಮುಂದೆ ಹೇಗೆ ಬದುಕುವುದು?'' ಎಂದು ಸಿನ್ಹಾ ಅವರ ತಂದೆ ಮಹೇಂದ್ರ ಪ್ರಸಾದ್ ಸಿಂಗ್ ದಯನೀಯವಾಗಿ ಕೇಳುತ್ತಾರೆ.

ಕಾನ್‍ ಸ್ಟೇಬಲ್ ಅಜಿತ್ ಕುಮಾರ್ ಆಝಾದ್

115ನೇ ಬೆಟಾಲಿಯನ್‍ ನಲ್ಲಿದ್ದ ಆಝಾದ್ ಐದು ಮಂದಿ ಸೋದರರಲ್ಲಿ ಹಿರಿಯವರು. ಅವರ ಇಬ್ಬರು ಸೋದರರೂ ಸೇನೆ ಸೇರಿದ್ದಾರೆ. ಆಝಾದ್ ಅವರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ವೃದ್ಧ ಹೆತ್ತವರನ್ನು ಅಗಲಿದ್ದಾರೆ. ಆಝಾದ್ ಪತ್ನಿ ಮೀನಾಗೆ  ಪುಲ್ವಾಮ ದಾಳಿ ನಂತರ ಸರಕಾರಿ ಹುದ್ದೆ ನೀಡಲಾಯಿತಾದರೂ ಉಳಿದಂತೆ ಸರಕಾರ ತನ್ನ ಯಾವುದೇ ಆಶ್ವಾಸನೆಗಳನ್ನು ಈಡೇರಿಸಿಲ್ಲ ಎಂದು ಕುಟುಂಬ ಹೇಳುತ್ತಿದೆ. "ಸರಕಾರ ಮನೆ ನಿರ್ಮಿಸಲು ಜಮೀನು ನೀಡುವುದಾಗಿ ಹೇಳಿತ್ತು, ಅಧಿಕಾರಿಗಳು ಮನೆಗೆ ಬಂದು ಸಾಕಷ್ಟು ಭರವಸೆಗಳನ್ನು ನೀಡಿದ್ದರು ಆದರೆ ಭರವಸೆ ಹಾಗೆಯೇ ಉಳಿದಿದೆ'' ಎಂದು ಮೀನಾ ಹೇಳುತ್ತಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News