ಹೊಸ ರಾಮಾಯಣ ರೈಲು ಮಾರ್ಚ್ ಅಂತ್ಯಕ್ಕೆ ಸಂಚಾರ ಆರಂಭ: ರೈಲ್ವೆ

Update: 2020-02-14 17:55 GMT

ಹೊಸದಿಲ್ಲಿ, ಫೆ. 14: ರೈಲ್ವೆಯ ರಾಮಾಯಣ ಎಕ್ಸ್‌ಪ್ರೆಸ್‌ನ ಮುಂದಿನ ಆವೃತ್ತಿ ಭಕ್ತರನ್ನು ಶ್ರೀರಾಮನಿಗೆ ಸಂಬಂಧಿಸಿದ ಪವಿತ್ರ ಸ್ಥಳಗಳಿಗೆ ಕರೆದೊಯ್ಯಲಿದ್ದು, ಇದು ಮಾರ್ಚ್ 10ರ ನಂತರ ಆರಂಭವಾಗುವ ಸಾಧ್ಯತೆ ಇದೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ. ಯಾದವ್ ಹೇಳಿದ್ದಾರೆ.

ಈ ರೈಲು ಉತ್ತರ, ದಕ್ಷಿಣ, ಪೂರ್ವ ಹಾಗೂ ಪಶ್ಚಿಮದಿಂದ ತನ್ನ ಸಂಚಾರವನ್ನು ಆರಂಭಿಸಲಿದೆ. ಆದುದರಿಂದ ದೇಶಾದ್ಯಂತದ ಜನರಿಗೆ ಈ ಸೇವೆ ಲಭ್ಯವಾಗಲಿದೆ. ರೈಲಿನ ಒಳಾಂಗಣ ಹಾಗೂ ಹೊರಾಂಗಣ ರಾಮಾಯಣದ ವಿಷಯವನ್ನು ಒಳಗೊಂಡಿರಲಿದೆ. ನಾವು ರೈಲಿನ ಒಳಗಡೆ ಭಜನೆ ಹೇಳಬಹುದು. ಸಮಯ ಹಾಗೂ ಪ್ಯಾಕೇಜ್ ಬಗ್ಗೆ ಐಆರ್‌ಸಿಟಿಸಿ ಚಿಂತಿಸುತ್ತಿದೆ. ಹೋಲಿಯ ಬಳಿಕ ಈ ರೈಲು ಸಂಚಾರ ಆರಂಭಿಸುವ ನಿರೀಕ್ಷೆ ಇದೆ ಎಂದು ಯಾದವ್ ಹೇಳಿದ್ದಾರೆ.

 ಈ ಹಿಂದೆ ರೈಲ್ವೆ ಶ್ರೀರಾಮನಿಗೆ ಸಂಬಂಧಿಸಿದ ಸ್ಥಳಗಳಿಗೆ ಪ್ರಯಾಣಿಕರನ್ನು ಕರೆದೊಯ್ಯುವ ವಿಶೇಷ ರೈಲು ಆರಂಭಿಸಿತ್ತು. ಈ ರೈಲಿಗೆ ‘ಶ್ರೀ ರಾಮಾಯಣ ಎಕ್ಸ್‌ಪ್ರೆಸ್’ ಎಂದು ಕರೆಯಲಾಗಿತ್ತು. ನವೆಂಬರ್ 14ರಂದು ಸಂಚಾರ ಆರಂಭಿಸಿದ ಈ ರೈಲು 800 ಪ್ರಯಾಣಿಕರನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿತ್ತು. ‘ಶ್ರೀ ರಾಮಾಯಣ ಎಕ್ಸ್‌ಪ್ರೆಸ್’ ನಂದಿಗ್ರಾಮ, ಸೀತಾಮರ್ಹಿ, ಜಾನಕ್‌ಪುರ, ವಾರಣಾಸಿ, ಪ್ರಯಾಗ್, ಶ್ರಿಂಗವೇರ್‌ಪುರ, ಚಿತ್ರಕೂಟ, ನಾಸಿಕ್, ಹಂಪಿ, ಅಯೋಧ್ಯೆ, ರಾಮೇಶ್ವರಂನಂತಹ ಶ್ರೀರಾಮನಿಗೆ ಸಂಬಂಧಿಸಿದ ಪ್ರಮುಖ ಸ್ಥಳಗಳಿಗೆ ತೆರಳುತ್ತಿತ್ತು. ಈ ಹೊಸ ರೈಲಿನ ವಿವರಗಳು ಇನ್ನಷ್ಟೇ ಬಹಿರಂಗವಾಗಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News