ತನ್ನ ತಂದೆಯ ಹಂತಕನ ಕುಟುಂಬಕ್ಕೆ ಭೂಮಿ ಬಿಟ್ಟುಕೊಟ್ಟ ಪುತ್ರಿ!

Update: 2020-02-15 03:44 GMT
ಆಸ್ತಿಗೆ ಸಂಬಂಧಿಸಿದ ದಾಖಲೆಪತ್ರಗಳನ್ನು ವಾಸು ಅವರಿಗೆ ನೈಸಿ (ವಾಸು ಬಲಬದಿಯಲ್ಲಿ) ಹಸ್ತಾಂತರಿಸಿದರು. ಚಿತ್ರ ಕೃಪೆ: thenewsminute.com

ಕೊಟ್ಟಾಯಂ, ಫೆ.15: ಮ್ಯಾಥ್ಯೂ ನಾಪತ್ತೆಯಾದ ದಿನದಿಂದ ಲೆಕ್ಕ ಹಾಕಿದರೆ ಅವರು ಮೃತಪಟ್ಟು 12 ವರ್ಷಗಳೆ ಕಳೆದಿದೆ. ಆದರೆ ಅವರ ಕುಟುಂಬಕ್ಕೆ ಅದು ಖಾತ್ರಿಯಾದದ್ದು ಮೂರು ವರ್ಷಗಳ ಹಿಂದೆ; ವಿಚಕ್ಷಣಾ ದಳದ ಇನ್‌ಸ್ಪೆಕ್ಟರ್ ಎ.ಎಸ್.ನವಾಸ್ ಅವರು ಕೊಟ್ಟಾಯಂನ ವೈಕೋಂ ಪಟ್ಟಣದ ತಲಯೊಲಪರಂಬು ಎಂಬಲ್ಲಿ ಕಟ್ಟಡದ ಅಡಿಯಿಂದ ಮೃತದೇಹವನ್ನು ವಶಪಡಿಸಿಕೊಂಡಾಗ.

ಶುಕ್ರವಾರ ಮ್ಯಾಥ್ಯೂ ಅವರ ಹಿರಿಯ ಪುತ್ರಿ ನೈಸಿ ಮತ್ತು ಕುಟುಂಬ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಯಿತು. ಕಾರಣ ಏನು ಗೊತ್ತೇ? ತನ್ನ ತಂದೆಯನ್ನು ಹತ್ಯೆ ಮಾಡಿದ ಅನೀಶ್ ಎಂಬಾತನ ತಂದೆ ವಾಸು ಎಂಬಾತನಿಗೆ ಐದು ಸೆಂಟ್ಸ್ ಜಾಗ ಮತ್ತು ಮನೆಯನ್ನು ಹಿಂದಿರುಗಿಸಿದ್ದಕ್ಕೆ. ಲೇವಾದೇವಿ ವೃತ್ತಿ ನಡೆಸುತ್ತಿದ್ದ ಮ್ಯಾಥ್ಯೂ ಅನೀಶ್‌ಗೆ ನೀಡಿದ್ದ ಸಾಲಕ್ಕೆ ಪ್ರತಿಯಾಗಿ ಈ ಆಸ್ತಿಯ ದಾಖಲೆಯನ್ನು ಅಡವಿಟ್ಟುಕೊಂಡಿದ್ದರು. ಆ ಬಳಿಕ ಅನೀಶ್, ಮ್ಯಾಥ್ಯೂವನ್ನು ಹತ್ಯೆ ಮಾಡಿದ್ದ. ಅನೀಶ್ ಈಗ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ. ಈ ಕಥಾನಕ 'ಮಾತೃಭೂಮಿ' ಪತ್ರಿಕೆಯಲ್ಲಿ ಪ್ರಕಟವಾಗಿದೆ.

"ಹಣಕಾಸು ವಿಚಾರದಲ್ಲಿನ ಜಗಳ ಮ್ಯಾಥ್ಯೂ ಕೊಲೆಯಲ್ಲಿ ಪರ್ಯವಸಾನಗೊಂಡಿತು" ಎಂದು ಎ.ಎಸ್.ನವಾಝ್ ಹೇಳುತ್ತಾರೆ. ಅದಕ್ಕೂ ಮುನ್ನ ಇಬ್ಬರೂ ಸ್ನೇಹಿತರಾಗಿದ್ದರದು. ಅನೀಶ್‌ಗೆ ಹಣಕಾಸು ತೊಂದರೆ ಇದ್ದಾಗ 5 ಸೆಂಟ್ಸ್ ಜಾಗ ಹಾಗೂ ತನ್ನ ಮನೆಯನ್ನು ಕೇರಳ ಸ್ಟೇಟ್ ಫೈನಾನ್ಶಿಯಲ್ ಎಂಟರ್‌ಪ್ರೈಸಸ್‌ಗೆ ಅಡವಿಟ್ಟು ಸಾಲ ಪಡೆದಿದ್ದ. ಈ ಒಪ್ಪಂದದಲ್ಲಿ ಮ್ಯಾಥ್ಯೂ ಕೂಡಾ ಇದ್ದ. ಇದು ಇಬ್ಬರ ನಡುವಿನ ಜಗಳಕ್ಕೆ ಕಾರಣವಾಗಿತ್ತು. ಮ್ಯಾಥ್ಯೂ ಅವರನ್ನು ಬಿಯರ್ ಕುಡಿಯಲು ಆಹ್ವಾನಿಸಿದ್ದ. ಮರುದಿನದಿಂದ ಮ್ಯಾಥ್ಯೂ ನಾಪತ್ತೆಯಾಗಿದ್ದ. ಈ ಘಟನೆ ನಡೆದದ್ದು 2008ರಲ್ಲಿ. ಆದಾಗ್ಯೂ ವಿಚಾರಣೆ ನಡೆದು 2013-14ರಲ್ಲಿ ಪ್ರಕರಣ ಮುಚ್ಚಿಹಾಕಲಾಯಿತು.

ಮ್ಯಾಥ್ಯೂ ಅವರ ಮೃತದೇಹ ಪತ್ತೆಯಾದ ಬಳಿಕ ಸಾವು ದೃಢಪಟ್ಟಿತ್ತು ಹಾಗೂ ಅವರ ಆಸ್ತಿಯನ್ನು ಕುಟುಂಬ ಬಳಸುತ್ತಿತ್ತು. ಮ್ಯಾಥ್ಯೂ ನಾಪತ್ತೆಯಾದ್ದರಿಂದ ಅವರ ಪತ್ನಿ ಹಾಗೂ ಪುತ್ರಿಯರು ಸಾಲದ ಸುಳಿಯಲ್ಲಿ ಸಿಲುಕಿದರು. ಅವರ ಆಸ್ತಿಯ ಹಕ್ಕು ಪಡದ ಬಳಿಕ ಸಾಲ ತೀರಿಸಿದರು. ನೈಸಿ ಬೆಂಗಳೂರಿನಲ್ಲಿ ಉದ್ಯೋಗ ಪಡೆದ ಬಳಿಕ ತಾಯಿ ಹಾಗೂ ತಂಗಿಯಂದಿರ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ.

ಇಷ್ಟಾಗಿಯೂ ತಂದೆಯ ಹಂತಕನ ಕುಟುಂಬಕ್ಕೆ ನೆರವಾಗಲು ನೈಸಿ ಮುಂದಾದದ್ದು ಅಚ್ಚರಿ ತಂದಿದೆ. ಈ ಅಚ್ಚರಿಯನ್ನು ಸ್ವತಃ ನೈಸಿ ಬಿಚ್ಚಿಟ್ಟಿದ್ದಾರೆ. ಅನೀಶ್ ಅವರ ತಂದೆ ವಾಸು, ಮ್ಯಾಥ್ಯೂ ಹತ್ಯೆ ಬಗ್ಗೆ ಹೇಳಿದ್ದರು. ಪ್ರಕರಣದ ಮರು ತನಿಖೆ ನಡೆಸಲು ಅವರು ನೀಡಿದ ಮಾಹಿತಿಯೇ ಆಧಾರ. "ಮಗನೇ ಹತ್ಯೆ ಪ್ರಕರಣದಲ್ಲಿದ್ದರೂ, ತಂದೆಯ ಹತ್ಯೆ ಬಗ್ಗೆ ನನಗೆ ಹೇಳುವ ಒಳ್ಳೆಯ ಮನಸ್ಸು ಅವರಿಗಿತ್ತು. ಅನೀಶ್ ಮಾಡಿದ ತಪ್ಪಿಗೆ ಕುಟುಂಬಕ್ಕೆ ಶಿಕ್ಷೆ ನೀಡಬಾರದು. ಅವರ ಮನೆ ದಯನೀಯ ಸ್ಥಿತಿಯಲ್ಲಿದೆ ಎನ್ನುವುದು ತಿಳಿದುಬಂತು. ಬೇಸರವಾಗಿ ಅವರ ಆಸ್ತಿ ದಾಖಲೆಗಳನ್ನು ಮರಳಿಸಿದೆ. ಈ ಬಗ್ಗೆ ಧರ್ಮಗುರು ರೆವರೆಂಡ್ ವರ್ಗೀಸ್ ಚೆರಪರಂಬಿಲ್ ಮತ್ತು ನವಾಝ್ ಅವರಿಗೆ ತಿಳಿಸಿದಾಗ ಇಬ್ಬರೂ ಬೆಂಬಲಿಸಿದರು"

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News