ಎಪ್ರಿಲ್‌ನಲ್ಲಿ 51 ರಾಜ್ಯಸಭಾ ಸದಸ್ಯರ ನಿವೃತ್ತಿ: ಯಾರಿಗೆ ಲಾಭ?

Update: 2020-02-15 03:56 GMT

ಹೊಸದಿಲ್ಲಿ, ಫೆ.15: ಮುಂದಿನ ಎಪ್ರಿಲ್ ತಿಂಗಳಲ್ಲಿ ರಾಜ್ಯಸಭೆಯ 51 ಸದಸ್ಯರು ನಿವೃತ್ತರಾಗಲಿದು, ಈ ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಎರಡೂ ಪಕ್ಷಗಳ ಸಂಖ್ಯಾಬಲ ಅಲ್ಪ ಪ್ರಮಾಣದಲ್ಲಿ ಇಳಿಕೆಯಾದರೂ, ಬಹುತೇಕ ಸ್ಥಾನಗಳು ಕಾಂಗ್ರೆಸ್ ಹಾಗೂ ಬಿಜೆಪಿ ಪಾಲಾಗುವ ನಿರೀಕ್ಷೆ ಇದೆ.

245 ಸದಸ್ಯಬಲದ ಸದನದಲ್ಲಿ ತೃಣಮೂಲ ಕಾಂಗ್ರೆಸ್ ಹಾಗೂ ವೈಎಸ್‌ಆರ್ ಕಾಂಗ್ರೆಸ್ ಪಾರ್ಟಿಗೆ ಲಾಭವಾಗುವ ಸಾಧ್ಯತೆ ಇದೆ. ಈ ಸಂಯೋಜನೆ ಬದಲಾಗುವುದರಿಂದ ಮೇಲ್ಮನೆಯಲ್ಲಿ ಬಹುಮತ ಇಲ್ಲದಿದ್ದರೂ ಬಿಜೆಪಿ ಆತಂಕಪಡುವ ಸ್ಥಿತಿಯಲ್ಲಿಲ್ಲ. ಆದಾಗ್ಯೂ ಬಿಜು ಜನತಾದಳ ಹಾಗೂ ವೈಎಸ್‌ಆರ್‌ಸಿಪಿ ಬೆಂಬಲದೊಂದಿಗೆ ರಾಜ್ಯಸಭೆಯಲ್ಲಿ ಬಿಜೆಪಿ ಹಾದಿ ಸುಗಮವಾಗಲಿದೆ.

ರಾಜ್ಯಸಭೆಯಲ್ಲಿ 82 ಸದಸ್ಯರನ್ನು ಹೊಂದಿರುವ ಬಿಜೆಪಿಗೆ ತೆರವಾಗುವ 51 ಸ್ಥಾನಗಳ ಪೈಕಿ 13 ಸ್ಥಾನ ಲಭಿಸುವ ನಿರೀಕ್ಷೆ ಇದೆ. ಇದು ಹಾಲಿ ಇರುವ ಸಂಖ್ಯೆಗಿಂತ ಐದು ಕಡಿಮೆ. ಒಡಿಶಾದಿಂದ ತೆರವಾಗುವ ಮೂರು ಸ್ಥಾನಗಳ ಪೈಕಿ ಎರಡು ಬಿಜೆಡಿ ಪಾಲಾಗಲಿದ್ದು, ಉಳಿದ ಒಂದು ಬಿಜೆಪಿಗೆ ಸಿಗಲಿದೆ. ಅಂತೆಯೇ ಎಪ್ರಿಲ್‌ನಲ್ಲಿ ಆಂಧ್ರದಿಂದ ತೆರವಾಗುವ ಎಲ್ಲ ನಾಲ್ಕು ಸ್ಥಾನಗಳನ್ನು ವೈಎಸ್‌ಆರ್‌ ಕಾಂಗ್ರೆಸ್ ಬಾಚಿಕೊಳ್ಳಲಿದೆ. ಹಿಮಾಚಲ ಪ್ರದೇಶ ಹಾಗೂ ಹರ್ಯಾಣದಲ್ಲಿ ತಲಾ ಒಂದು ಸ್ಥಾನಗಳು ಬಿಜೆಪಿಗೆ ಲಾಭವಾಗಲಿವೆ.

46 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಪಕ್ಷ 10 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಪಕ್ಷದ 11 ಸದಸ್ಯರು ಎಪ್ರಿಲ್‌ನಲ್ಲಿ ನಿವೃತ್ತರಾಗುತ್ತಿದ್ದಾರೆ. ಮಹಾರಾಷ್ಟ್ರದಿಂದ ಏಳು, ತಮಿಳುನಾಡಿನಿಂದ ಆರು, ಬಿಹಾರ ಹಾಗೂ ಪಶ್ಚಿಮ ಬಂಗಾಳದಿಂದ ತಲಾ ಐದು, ಆಂಧ್ರ ಹಾಗೂ ಗುಜರಾತ್‌ನಿಂದ ತಲಾ ನಾಲ್ಕು, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಹಾಗೂ ಒಡಿಶಾದಿಂದ ತಲಾ ಮೂರು, ಜಾರ್ಖಂಡ್ ಹಾಗೂ ಛತ್ತೀಸ್‌ಗಢದಿಂದ ತಲಾ ಎರಡು, ಅಸ್ಸಾಂ, ಮಣಿಪುರ, ಹರ್ಯಾಣ ಮತ್ತು ಹಿಮಾಚಲ ಪ್ರದೇಶಗಳ ತಲಾ ಒಂದು ಸ್ಥಾನಗಳು ತೆರವಾಗಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News