ಡೊನಾಲ್ಡ್ ಟ್ರಂಪ್‌ ಮೂರು ಗಂಟೆಗಳ ಗುಜರಾತ್ ಭೇಟಿಗೆ 100 ಕೋ.ರೂ.ಗೂ ಅಧಿಕ ವೆಚ್ಚ

Update: 2020-02-15 08:40 GMT

ಅಹ್ಮದಾಬಾದ್,ಫೆ.15: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆಬ್ರವರಿ 24ರಂದು ಮೂರು ಗಂಟೆಗಳ ಕಾಲ ಅಹ್ಮದಾಬಾದ್‌ಗೆ ಭೇಟಿ ನೀಡಲಿದ್ದು, ಟ್ರಂಪ್‌ಗೆ ರತ್ನಗಂಬಳಿಯ ಸ್ವಾಗತ ನೀಡಲು ಗುಜರಾತ್ ರಾಜಧಾನಿ ಮದುಮಗಳಂತೆ ಶೃಂಗಾರಗೊಂಡಿದೆ.

ಒಂದು ಅಂದಾಜಿನ ಪ್ರಕಾರ ಟ್ರಂಪ್ ಅವರ ಮೂರು ಗಂಟೆಗಳ ಗುಜರಾತ್ ಭೇಟಿಗೆ ರಾಜ್ಯ ಸರಕಾರ 100 ಕೋ.ರೂ.ಗೆ ಅಧಿಕ ಖರ್ಚು ಮಾಡಲು ಮುಂದಾಗಿದೆ.

 ಅಹ್ಮದಾಬಾದ್ ಏರ್‌ಪೋರ್ಟ್‌ನಿಂದ ಮೊಟೆರಾ ಸ್ಟೇಡಿಯಂಗೆ ಟ್ರಂಪ್ ಸಂಚರಿಸುವ 1.5 ಕಿ.ಮೀ. ದೂರದ ದಾರಿಯಲ್ಲಿ ಹೊಸ ರಸ್ತೆಗಳ ನಿರ್ಮಾಣ ಹಾಗೂ ರಿಪೇರಿಗೆ 80 ಕೋ.ರೂ. ವ್ಯಯಿಸಲಾಗುತ್ತಿದೆ. 12ರಿಂದ 15 ಕೋ.ರೂ.ವನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಭದ್ರತೆಗೆ ಖರ್ಚು ಮಾಡಲಾಗುತ್ತಿದೆ. ಮೊಟೆರಾ ಸ್ಟೇಡಿಯಂನ ಉದ್ಘಾಟನೆಗೆ ಆಗಮಿಸಲಿರುವ 1 ಲಕ್ಷಕ್ಕೂ ಅಧಿಕ ಅತಿಥಿಗಳ ಸಾರಿಗೆ ಹಾಗೂ ಊಟೋಪಚಾರಕ್ಕೆ 7ರಿಂದ 10 ಕೋ.ರೂ., ಡಿವೈಡರ್‌ನಲ್ಲಿ ಪಾಮ್ ಗಿಡಗಳನ್ನು ನೆಡುವುದು ಸೇರಿದಂತೆ ನಗರದ ಸೌಂದರ್ಯಕ್ಕೆ 6 ಕೋ.ರೂ., ಮೋದಿ-ಟ್ರಂಪ್ ರೋಡ್ ಶೋ ಹಾದಿಯುದ್ದಕ್ಕೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 4 ಕೋ.ರೂ. ವೆಚ್ಚ ಮಾಡಲಾಗುತ್ತಿದೆ.

ಟ್ರಂಪ್‌ಗೆ ಆತಿಥ್ಯ ನೀಡಲು ಬಜೆಟ್‌ಗೆ ನಿರ್ಬಂಧ ಹೇರಬಾರದು ಎಂದು ಮುಖ್ಯಮಂತ್ರಿ ವಿಜಯ ರೂಪಾನಿ ಸೂಚಿಸಿದ್ದಾರೆ ಎಂದು ಟ್ರಂಪ್‌ರ ಅಹ್ಮದಾಬಾದ್ ಭೇಟಿಯ ತಯಾರಿ ಉಸ್ತುವಾರಿವಹಿಸಿರುವವರು ತಿಳಿಸಿದ್ದಾರೆ.

 ಅಹ್ಮದಾಬಾದ್ ಮುನ್ಸಿಪಲ್ ಕಾಪೋರೇಶನ್ ಹಾಗೂ ಅಹ್ಮದಾಬಾದ್ ನಗರಾಭಿವೃದ್ಧಿ ಪ್ರಾಧಿಕಾರ ಟ್ರಂಪ್ ಭೇಟಿ ಹಿನ್ನೆಲೆಯಲ್ಲಿ ರಸ್ತೆಗಳನ್ನು ನವೀಕರಿಸಿದ್ದಲ್ಲದೆ, ನಗರವನ್ನು ಸೌಂದರ್ಯಗೊಳಿಸಿದೆ. ಈ ಎರಡು ಸಂಸ್ಥೆ ಇದಕ್ಕಾಗಿ ಸುಮಾರು 100 ಕೋ.ರೂ. ವ್ಯಯಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News