ಗುಂಪಿನಿಂದ ಥಳಿಸಿ ದಲಿತ ಯುವಕನ ಹತ್ಯೆ ಪ್ರಕರಣ: ಹಲವರ ಬಂಧನ

Update: 2020-02-15 16:04 GMT

ವಿಲ್ಲುಪುರಂ (ತಮಿಳುನಾಡು),ಫೆ.15: ಹಿಂಸಾಚಾರಕ್ಕೆ ಜಾತಿದ್ವೇಷ ಕಾರಣವಾಗಿತ್ತು ಎಂದು ಮೃತನ ಕುಟುಂಬವು ಆರೋಪಿಸುವುದರೊಂದಿಗೆ ಜಿಂಗೀ ತಾಲೂಕಿನ ಎಸ್.ಪುದೂರು ಗ್ರಾಮದಲ್ಲಿ ಬುಧವಾರ ಗುಂಪೊಂದು ದಲಿತ ಯುವಕನನ್ನು ಥಳಿಸಿ ಹತ್ಯೆಗೈದ ಪ್ರಕರಣವು ಹೊಸ ತಿರುವನ್ನು ಪಡೆದುಕೊಂಡಿದೆ.

  ಕಾರೈ ಗ್ರಾಮದ ಶಕ್ತಿವೇಲ್ ತನ್ನ ಕೆಲಸವನ್ನು ಮಗಿಸಿಕೊಂಡು ಮನೆಗೆ ಮರಳುತ್ತಿದ್ದಾಗ ಎಸ್.ಪುದೂರು ಗ್ರಾಮದಲ್ಲಿ ಮೂತ್ರಶಂಕೆಗೆ ನಿಂತಿದ್ದ. ಆದರೆ ಸಮೀಪದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೋರ್ವಳು ಆತ ತನ್ನೊಂದಿಗೆ ದುರ್ವರ್ತನೆಗೆ ಪ್ರಯತ್ನಿಸುತ್ತಿದ್ದಾನೆ ಎಂದು ಶಂಕಿಸಿ ಬೊಬ್ಬೆ ಹೊಡೆದಿದ್ದಳು. ಧಾವಿಸಿ ಬಂದ ಗ್ರಾಮಸ್ಥರು ಶಕ್ತಿವೇಲ್‌ ನನ್ನು ಹಿಗ್ಗಾಮುಗ್ಗಾ ಥಳಿಸಿದ್ದು, ತೀವ್ರವಾಗಿ ಗಾಯಗೊಂಡಿದ್ದ ಆತ ಬಳಿಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದ.

ತನ್ನ ಸೋದರ ದಲಿತ ಎನ್ನುವುದು ಗೊತ್ತಾದ ಬಳಿಕ ಗ್ರಾಮಸ್ಥರು ಆತನನ್ನು ಕಟ್ಟಿಹಾಕಿ ಥಳಿಸಿ ಕೊಂದಿದ್ದಾರೆ ಎಂದು ಶಕ್ತಿವೇಲ್ ಸೋದರಿ ದೇವಯಾನಿ ಆರೋಪಿಸಿದ್ದರೆ, ಆತ ಕೃಷಿ ಕೆಲಸ ಮಾಡುತ್ತಿದ್ದ ಮಹಿಳೆಯರೊಂದಿಗೆ ಅನುಚಿತ ವರ್ತನೆಗೆ ಹೊಂಚು ಹಾಕಿದ್ದ ಎಂದಷ್ಟೇ ಗುಂಪು ಭಾವಿಸಿತ್ತು ಮತ್ತು ಆತನನ್ನು ಥಳಿಸಿತ್ತು. ಕೊಲ್ಲಲು ಪ್ರಯತ್ನಿಸಿರಲಿಲ್ಲ ಎಂದು ಆರೋಪಿಯೋರ್ವನ ಬಂಧು ಹೇಳಿಕೊಂಡಿದ್ದಾನೆ.

ಗುರುವಾರ ಇಬ್ಬರನ್ನು ಬಂಧಿಸಿದ್ದ ಪೊಲೀಸರು ಈಗ ಇನ್ನೂ ಐವರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಮೂವರು ಮಹಿಳೆಯರು ಸೇರಿದ್ದಾರೆ.

ಸರಕಾರವು ಮೃತ ಶಕ್ತಿವೇಲ್ ಕುಟುಂಬಕ್ಕೆ 4.12 ಲ.ರೂ.ಗಳ ಪರಿಹಾರವನ್ನು ಮಂಜೂರು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News