ಕಾಲುಚೀಲಗಳನ್ನು ಧರಿಸಿ ಮಲಗಿದರೆ ಏನಾಗುತ್ತದೆ?

Update: 2020-02-15 16:39 GMT

ಚಳಿಗಾಲದಲ್ಲಿ ರಾತ್ರಿ ಸುಖವಾಗಿ ನಿದ್ರೆ ಮಾಡುವುದು ಕಷ್ಟ. ಹೀಗಾಗಿ ಕನಿಷ್ಠ ಪಾದಗಳಾದರೂ ಬೆಚ್ಚಗಿದ್ದು ಒಳ್ಳೆಯ ನಿದ್ರೆ ಮಾಡುವಂತಾಗಲೆಂದು ಮಲಗುವ ಮುನ್ನ ಕಾಲುಚೀಲಗಳನ್ನು ಧರಿಸುವವರಿದ್ದಾರೆ. ಮಲಗುವಾಗ ಕಾಲುಚೀಲಗಳನ್ನು ಧರಿಸುವುದರಿಂದ ಲಾಭಗಳೂ ಇವೆ,ಕೆಲವು ಅಡ್ಡಪರಿಣಾಮಗಳೂ ಇವೆ.

ಕಾಲುಚೀಲ ಧರಿಸುವುದರ ಲಾಭಗಳು

* ರಕ್ತಸಂಚಾರ ಹೆಚ್ಚುತ್ತದೆ: ರಾತ್ರಿ ಮಲಗುವಾಗ ಕಾಲುಚೀಲಗಳನ್ನು ಧರಿಸುವುದರಿಂದ ಪಾದಗಳಿಗೆ ರಕ್ತದ ಹರಿವು ಹೆಚ್ಚುವ ಮೂಲಕ ರಕ್ತ ಪರಿಚಲನೆ ಉತ್ತಮಗೊಳ್ಳುತ್ತದೆ. ಇದರಿಂದಾಗಿ ನಿಮ್ಮ ಶ್ವಾಸಕೋಶಗಳು,ಹೃದಯ ಮತ್ತು ಸ್ನಾಯುಗಳು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತವೆ ಹಾಗೂ ಅಂಗಾಂಗಗಳಿಗೆ ಆರೋಗ್ಯಕರ ರಕ್ತ ಮತ್ತು ಆಮ್ಲಜನಕ ಪೂರೈಕೆಯಾಗುತ್ತದೆ.

* ಶರೀರದ ಉಷ್ಣತೆಯನ್ನು ನಿಯಂತ್ರಿಸುತ್ತದೆ

ನಮ್ಮ ಶರೀರವು ತನ್ನ ಉಷ್ಣತೆಯನ್ನು ನಿಯಂತ್ರಿಸುವ ಪ್ರಕ್ರಿಯೆಯನ್ನು ‘ಥರ್ಮೊರೆಗ್ಯುಲೇಷನ್’ಎಂದು ಕರೆಯಲಾಗುತ್ತದೆ. ನಮ್ಮ ಶರೀರವು ಪ್ರತಿ ಋತುಮಾನದಲ್ಲಿಯೂ ನಮ್ಮ ಸುತ್ತಲಿನ ವಾತಾವರಣಕ್ಕೆ ಸ್ಪಂದಿಸುತ್ತದೆ ಮತ್ತು ತನ್ನ ಉಷ್ಣತೆಯನ್ನು ಬದಲಿಸಿಕೊಳ್ಳುತ್ತದೆ. ಪಾದಗಳು ಮತ್ತು ಕೈಗಳು ಹೆಚ್ಚು ತಣ್ಣಗಿರುವ ಶರೀರದ ಭಾಗಗಳಾಗಿವೆ. ಬದಲಾಗುವ ತಾಪಮಾನಗಳಿಂದ ಬಾಧೆಯನ್ನು ತಡೆಯುವಲ್ಲಿ ಕಾಲುಚೀಲಗಳು ನೆರವಾಗುತ್ತವೆ.

* ರೇನಾಲ್ಡ್ಸ್ ಅಟ್ಯಾಕ್‌ನ್ನು ತಡೆಯುತ್ತದೆ

ತಂಪು ಹವಾಮಾನದಿಂದಾಗಿ ನಮ್ಮ ಕೈಬೆರಳುಗಳು ಮತ್ತು ಕಾಲ್ಬೆರಳುಗಳು ಮರಗಟ್ಟಿರುವ ಸ್ಥಿತಿಯನ್ನು ರೇನಾಲ್ಡ್ಸ್ ಅಟ್ಯಾಕ್ ಎಂದು ಕರೆಯಲಾಗುತ್ತದೆ. ರಕ್ತ ಪರಿಚಲನೆಗೆ ನಿರ್ಬಂಧವುಂಟಾಗುವುದು ಇದಕ್ಕೆ ಕಾರಣವಾಗಿದ್ದು,ಪೀಡಿತ ಭಾಗವು ಬಿಳಿ ಛಾಯೆಗೆ ತಿರುಗಿರುತ್ತದೆ. ಇದು ಗಂಭೀರ ಆರೋಗ್ಯ ಸಮಸ್ಯೆಗಳನ್ನುಂಟು ಮಾಡದಿದ್ದರೂ ಈ ಸ್ಥಿತಿಯನ್ನು ತಡೆಯುವುದು ಅಗತ್ಯವಾಗಿದೆ. ಇದಕ್ಕೆ ಕಾಲುಚೀಲ ಧರಿಸುವುದು ಒಳ್ಳೆಯ ಉಪಾಯವಾಗಿದೆ.

* ಋತುಬಂಧಗೊಳ್ಳುವ ಹಂತವನ್ನು ದಾಟುತ್ತಿರುವ ಮಹಿಳೆಯರಿಗೆ ರಾತ್ರಿ ನಿದ್ರೆ ಮಾಡುವುದು ಕೆಲವೊಮ್ಮೆ ಸವಾಲಾಗುತ್ತದೆ. ಶರೀರದಲ್ಲಿ ಹಾರ್ಮೋನ್ ಬದಲಾವಣೆಗಳಿಂದಾಗಿ ಅವರನ್ನು ಹಾಟ್ ಫ್ಲಷ್ ಅಥವಾ ಅತಿಯಾದ ಸೆಕೆ ಕಾಡತೊಡಗುತ್ತದೆ. ರಾತ್ರಿ ಮಲಗುವಾಗ ಕಾಲುಚೀಲಗಳನ್ನು ಧರಿಸುವ ಮೂಲಕ ಹಾರ್ಮೋನ್ ಬದಲಾವಣೆಗಳನ್ನು ತಡೆಯಬಹುದು. ಪಾದಗಳನ್ನು ಬೆಚ್ಚಗಿರಿಸುವ ಮೂಲಕ ವಾಸೋಡಿಲೇಷನ್ ಅಥವಾ ರಕ್ತನಾಳಗಳು ಹಿಗ್ಗುವ ಸ್ಥಿತಿಯನ್ನು ತಡೆಯಬಹುದು. ರಕ್ತನಾಳಗಳು ಹಿಗ್ಗಿದಾಗ ಅವು ಸಾಮಾನ್ಯಕ್ಕಿಂತ ಹೆಚ್ಚು ವೇಗವಾಗಿ ಉಷ್ಣತೆಯನ್ನು ಹೊರಸೂಸುತ್ತವೆ. ಕಾಲುಚೀಲಗಳ ಧರಿಸುವಿಕೆಯಿಂದ ಮೇಲ್ಮೈ ಪ್ರದೇಶ ಹೆಚ್ಚಾಗುವುದರಿಂದ ಶರೀರದ ಒಟ್ಟಾರೆ ಉಷ್ಣತೆ ಹೆಚ್ಚು ವೇಗವಾಗಿ ಕಡಿಮೆಯಾಗುತ್ತದೆ ಮತ್ತು ನಿದ್ರೆಗೆ ತೊಂದರೆಯಾಗುವುದಿಲ್ಲ.

ಕಾಲಚೀಲ ಧರಿಸುವುದರ ಅಡ್ಡ ಪರಿಣಾಮಗಳು

ರಕ್ತ ಪರಿಚಲನೆ ಕಡಿಮೆಯಾಗಬಹುದು: ಶರೀರದಲ್ಲಿ ರಕ್ತ ಸಂಚಾರವು ನಾವು ಧರಿಸಿರುವ ಕಾಲುಚೀಲಗಳನ್ನು ಅವಲಂಬಿಸಿರುತ್ತದೆ. ಹೆಚ್ಚು ಬಿಗಿಯಾದ ಮತ್ತು ಹಿತವನ್ನು ನೀಡದ ಕಾಲುಚೀಲಗಳನ್ನು ಧರಿಸಿದರೆ ರಕ್ತ ಸಂಚಾರ ಕಡಿಮೆಯಾಗುತ್ತದೆ. ಹೀಗಾಗಿ ರಾತ್ರಿ ಮಲಗುವಾಗ ಧರಿಸಲೆಂದೇ ವಿಶೇಷವಾಗಿ ವಿನ್ಯಾಸಗೊಂಡಿರುವ ಸೂಕ್ತ ಅಳತೆಯ ‘ಬೆಡ್ ಸಾಕ್ಸ್’ ಧರಿಸುವುದು ಒಳ್ಳೆಯದು.

* ಕಡಿಮೆ ನೈರ್ಮಲ್ಯ

ದಿನವಿಡೀ ಧರಿಸಿದ ಕಾಲುಚೀಲಗಳೊಂದಿಗೆ ಹಾಸಿಗೆಯಲ್ಲಿ ಬಿದ್ದುಕೊಳ್ಳುವುದು ಕೆಲವೊಮ್ಮೆ ಅನೈರ್ಮಲ್ಯವನ್ನುಂಟು ಮಾಡುತ್ತದೆ. ಬಿಗಿಯಾದ ಮತ್ತು ಹೊಲಸಾದ ಕಾಲುಚೀಲಗಳು ಪಾದಗಳು ಸಮರ್ಪಕವಾಗಿ ಉಸಿರಾಡಲು ಅವಕಾಶ ನೀಡುವುದಿಲ್ಲ ಮತ್ತು ಸೋಂಕುಗಳು ಅಥವಾ ಕೆಟ್ಟ ವಾಸನೆ ಉಂಟಾಗುವ ಸಾಧ್ಯತೆಗಳು ಹೆಚ್ಚುತ್ತವೆ.

* ಅತಿಯಾಗಿ ಬಿಸಿಯಾಗುವಿಕೆ

ಕಾಲುಚೀಲಗಳನ್ನು ಧರಿಸುವುದು ಪಾದಗಳನ್ನು ಬೆಚ್ಚಗಿರಿಸಲು ನೆರವಾಗುತ್ತದೆ,ಆದರೆ ಅದು ವಿರುದ್ಧ ಪರಿಣಾಮವನ್ನೂ ಉಂಟು ಮಾಡಬಹುದು. ಕಾಲುಚೀಲಗಳು ಅತಿಯಾಗಿ ಬಿಗಿಯಾಗಿದ್ದರೆ ಮತ್ತು ಗಾಳಿಯಾಡಲು ಅವಕಾಶವಿಲ್ಲದಿದ್ದರೆ ವಾಸೋಡಿಲೇಷನ್ ಮೂಲಕ ಉತ್ಪತ್ತಿಯಾಗುವ ಉಷ್ಣತೆಗೆ ಹೊರಹೋಗಲು ಸಾಧ್ಯವಾಗದೆ ಪಾದಗಳು ಅತಿಯಾಗಿ ಬಿಸಿಯಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News