ವೋಟರ್ ಐಡಿ ಪೌರತ್ವಕ್ಕೆ ಪುರಾವೆ: ಮುಂಬೈ ನ್ಯಾಯಾಲಯ

Update: 2020-02-15 16:51 GMT

ಮುಂಬೈ, ಫೆ. 15: ಅಕ್ರಮ ಬಾಂಗ್ಲಾದೇಶಿ ವಲಸಿಗರು ಎಂಬ ಆರೋಪಕ್ಕೆ ಒಳಗಾದ ದಂಪತಿಯನ್ನು ಖುಲಾಸೆಗೊಳಿಸಿರುವ ಮುಂಬೈ ಮ್ಯಾಜಿಸ್ಟ್ರೇಟ್ ಕೋರ್ಟ್, ತಪ್ಪೆಂದು ಸಾಬೀತುಪಡಿಸುವವರೆಗೆ ಅಸಲಿ ಚುನಾವಣಾ ಗುರುತು ಚೀಟಿ ಪೌರತ್ವಕ್ಕೆ ಪುರಾವೆ ಎಂದು ಹೇಳಿದೆ.

ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಹಾಗೂ ದಾಖಲೆಗಳಿಲ್ಲದೆ ಮಹಾರಾಷ್ಟ್ರದ ಮುಂಬೈಯಲ್ಲಿ ವಾಸಿಸಿದ ಹಿನ್ನೆಲೆಯಲ್ಲಿ ಈ ದಂಪತಿಯನ್ನು 2017ರಲ್ಲಿ ಬಂಧಿಸಲಾಗಿತ್ತು. ಆದರೆ, ಅವರನ್ನು ಮಂಗಳವಾರ ಬಿಡುಗಡೆ ಮಾಡಿದೆ ನ್ಯಾಯಾಲಯ, ಯಾವುದೇ ವ್ಯಕ್ತಿಯ ಮೂಲವನ್ನು ಸಾಬೀತುಪಡಿಸಲು ನಿವಾಸ ಪ್ರಮಾಣಪತ್ರ, ವಿಶ್ವಸನೀಯ ಪ್ರಮಾಣಪತ್ರ, ಪಾಸ್‌ಪೋರ್ಟ್ ಮೊದಲಾದವುಗಳನ್ನು ಪರಿಗಣಿಸಬಹುದು ಎಂದು ಹೇಳಿತು.

ಚುನಾವಣಾ ಗುರುತು ಚೀಟಿ ಪೌರತ್ವ ಸಾಬೀತುಪಡಿಸಲು ಪುರಾವೆಯಾಗಬಹುದಾದರೂ ಚುನಾವಣಾ ಗುರುತು ಚೀಟಿಗೆ ಅರ್ಜಿ ಸಲ್ಲಿಸುವಾಗ ವ್ಯಕ್ತಿಯೊಬ್ಬನು ಜನತಾ ಪ್ರಾತಿನಿಧ್ಯ ಕಾಯ್ದೆಯ ಫಾರ್ಮ್ 6ರಂತೆ ತಾನು ಭಾರತದ ಪ್ರಜೆ ಎಂಬ ಘೋಷಣೆಯನ್ನು ಅಧಿಕಾರಿಗಳಿಗೆ ಸಲ್ಲಿಬೇಕು. ಅಲ್ಲದೆ, ಈ ಘೋಷಣೆಯು ತಪ್ಪು ಎಂದು ಕಂಡು ಬಂದರೆ ಆತ ಶಿಕ್ಷೆಗೆ ಒಳಗಾಗುತ್ತಾನೆ ಎಂದು ನ್ಯಾಯಾಲಯ ಹೇಳಿತು.

ಅಬ್ಬಾಸ್ ಶೇಖ್ (45) ಹಾಗೂ ರುಬಿಯಾಖಾತುನ್ ಶೇಖ್ (40) ಅಸಲಿ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ನ್ಯಾಯಾಲಯ ಪ್ರತಿಪಾದಿಸಿತು. ಈ ದಾಖಲೆಗಳು ಸಾಚಾ ಅಲ್ಲ ಎಂದು ಪ್ರಾಸಿಕ್ಯೂಷನ್ ಹೇಳಿತು. ಆದರೆ, ಆರೋಪಿಗಳು ಸಲ್ಲಿಸಿದ ದಾಖಲೆಗಳ ಪುರಾವೆಗಳನ್ನು ನಕಲಿ ಎಂಬುದುನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ಪುರಾವೆಗಳನ್ನು ಸಲ್ಲಿಸಲು ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿತು.

ಆದರೆ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಚಾಲನಾ ಪರವಾನಿಗೆ ಅಥವಾ ಅಥವಾ ಪಡಿತರ ಚೀಟಿ ಯಾವುದೇ ವ್ಯಕ್ತಿಯ ಪೌರತ್ವವನ್ನು ತೃಪ್ತಿಕರ ರೀತಿಯಲ್ಲಿ ಸಾಬೀತುಪಡಿಸುವ ದಾಖಲೆಗಳಲ್ಲ. ಯಾಕೆಂದರೆ, ಈ ದಾಖಲೆಗಳು ಪೌರತ್ವದ ಉದ್ದೇಶಕ್ಕೆ ಇರುವುದಲ್ಲ ಎಂದು ನ್ಯಾಯಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News