ಹರ್ಯಾಣ ವಿರುದ್ಧ ಸೋತರೂ ಕ್ವಾರ್ಟರ್ ಫೈನಲ್ ತಲುಪಿದ ಜಮ್ಮು-ಕಾಶ್ಮೀರ

Update: 2020-02-15 18:32 GMT

ಜಮ್ಮು, ಫೆ.15: ಅಂತಿಮ ‘ಸಿ’ ಗುಂಪಿನ ಪಂದ್ಯದಲ್ಲಿ ಶನಿವಾರ ಹರ್ಯಾಣ ವಿರುದ್ಧ ಎರಡು ವಿಕೆಟ್‌ಗಳಿಂದ ಸೋತ ಹೊರತಾಗಿಯೂ ಜಮ್ಮು ಹಾಗೂ ಕಾಶ್ಮೀರ ತಂಡ ರಣಜಿ ಟ್ರೋಫಿ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ.

  ಪರ್ವೇಝ್ ರಸೂಲ್ ನೇತೃತ್ವದ ಜಮ್ಮು-ಕಾಶ್ಮೀರ ತಂಡ ಹರ್ಯಾಣ ವಿರುದ್ಧ ಸೋತಿದ್ದರೂ 9 ಪಂದ್ಯಗಳಲ್ಲಿ 6ರಲ್ಲಿ ಜಯ, ಏಕೈಕ ಪಂದ್ಯದಲ್ಲಿ ಸೋಲನುಭವಿಸಿ ಒಟ್ಟು 39 ಅಂಕ ಕಲೆ ಹಾಕಿದೆ. ‘ಸಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಅಂತಿಮ-8ರ ಘಟ್ಟಕ್ಕೆ ಪ್ರವೇಶಿಸಿದೆ. 500ಕ್ಕೂ ಅಧಿಕ ರನ್ ಗಳಿಸಿದ ಅಬ್ದುಲ್ ಸಮದ್ ಹಾಗೂ ಶುಭಂ ಖರ್ಚುರಿಯ ತಂಡದ ಯಶಸ್ಸಿನಲ್ಲಿ ದೊಡ್ಡ ಕೊಡುಗೆ ನೀಡಿದರು. ಬೌಲಿಂಗ್ ವಿಭಾಗದಲ್ಲಿ 28 ವಿಕೆಟ್ ಪಡೆದ ಉಮರ್ ನಝೀರ್ ಗಮನ ಸೆಳೆದಿದ್ದಾರೆ.

‘ಸಿ’ ಗುಂಪಿನಲ್ಲಿ ಒಟ್ಟು 38 ಅಂಕ ಗಳಿಸಿರುವ ಒಡಿಶಾ ತಂಡ ಎರಡನೇ ಸ್ಥಾನದೊಂದಿಗೆ ನಾಕೌಟ್ ಹಂತಕ್ಕೆ ತೇರ್ಗಡೆಯಾಯಿತು. ಒಡಿಶಾ ತಂಡ ಜಾರ್ಖಂಡ್ ವಿರುದ್ಧದ ಅಂತಿಮ ಪಂದ್ಯವನ್ನು ಡ್ರಾಗೊಳಿಸಿದೆ. ಗೆಲ್ಲಲು 224 ರನ್ ಗುರಿ ಪಡೆದ ಹರ್ಯಾಣ ನಾಲ್ಕನೇ ಹಾಗೂ ಅಂತಿಮ ದಿನವಾದ ಶನಿವಾರ 5 ವಿಕೆಟ್‌ಗಳ ನಷ್ಟಕ್ಕೆ 103 ರನ್‌ನಿಂದ ಎರಡನೇ ಇನಿಂಗ್ಸ್ ಮುಂದುವರಿಸಿತು. ಅಜಿತ್ ಚಹಾಲ್ ನಿನ್ನೆಯ ಸ್ಕೋರ್‌ಗೆ ಕೇವಲ 4 ರನ್ ಸೇರಿಸಿ ಔಟಾದರು. ನಾಯಕ ಹರ್ಷಲ್ ಪಟೇಲ್(5)ರಸೂಲ್‌ಗೆ ವಿಕೆಟ್ ಒಪ್ಪಿಸಿದಾಗ ಹರ್ಯಾಣ ಮತ್ತೊಂದು ಆಘಾತ ಅನುಭವಿಸಿತು. ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ(75 ರನ್, 141 ಎಸೆತ, 6 ಬೌಂಡರಿ,1ಸಿಕ್ಸರ್)ಜಯಂತ್ ಯಾದವ್(13)ಅವರೊಂದಿಗೆ 8ನೇ ವಿಕೆಟ್ ಜೊತೆಯಾಟದಲ್ಲಿ 64 ರನ್ ಸೇರಿಸಿ ತಂಡವನ್ನು ಆಧರಿಸಿದರು. ಯಾದವ್ ಔಟಾದ ಬಳಿಕ ರಾಹುಲ್ ಟೆವಾಟಿಯಾ(ಔಟಾಗದೆ 27)ಅವರೊಂದಿಗೆ 9ನೇ ವಿಕೆಟ್ ಜೊತೆಯಾಟದಲ್ಲಿ 44 ರನ್ ಸೇರಿಸಿದ ಶರ್ಮಾ ತಂಡವನ್ನು ಗೆಲುವಿನ ದಡ ಸೇರಿಸಿದರು. ಆದರೆ,ಈ ಗೆಲುವು ಹರ್ಯಾಣಕ್ಕೆ ಕ್ವಾರ್ಟರ್ ಫೈನಲ್ ತಲುಪಲು ಸಾಕಾಗಲಿಲ್ಲ. ‘ಸಿ’ ಗುಂಪಿನಲ್ಲಿ ಒಟ್ಟು 36 ಅಂಕ ಕಲೆ ಹಾಕಿ ಜಮ್ಮು-ಕಾಶ್ಮೀರ ಹಾಗೂ ಒಡಿಶಾದ ಬಳಿಕ ಮೂರನೇ ಸ್ಥಾನ ಪಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News