ಕೊರೋನ ವೈರಸ್‌ಗೆ ಬಲಿಯಾದವರು 1,600ಕ್ಕೂ ಅಧಿಕ

Update: 2020-02-16 04:13 GMT

ಬೀಜಿಂಗ್, ಫೆ.16: ಚೀನಾವನ್ನು ಅಕ್ಷರಶಃ ಸ್ಮಶಾನವನ್ನಾಗಿ ಮಾರ್ಪಡಿಸಿದ ಕೊರೋನ ವೈರಸ್‌ಗೆ ಬಲಿಯಾದವರ ಸಂಖ್ಯೆ ರವಿವಾರ 1,600ನ್ನು ದಾಟಿದೆ. ಈ ಮಧ್ಯೆ ಏಶ್ಯದ ಹೊರಗಡೆ ಮೊದಲ ಕೊರೋನ ಸಾವು ಸಂಭವಿಸಿದ್ದು, ಜಾಗತಿಕ ಕಳವಳಕ್ಕೆ ಕಾರಣವಾಗಿದೆ.

ಕೊರೋನ ಮೊಟ್ಟಮೊದಲು ಡಿಸೆಂಬರ್‌ನಲ್ಲಿ ಹ್ಯುಬೀ ಪ್ರಾಂತ್ಯದಲ್ಲಿ ಕಾಣಿಸಿಕೊಂಡಿದ್ದು, ಚೀನಾದಲ್ಲಿ 68 ಸಾವಿರಕ್ಕೂ ಅಧಿಕ ಮಂದಿಗೆ ಈ ಸೋಂಕು ತಗುಲಿದೆ. ಆ ಬಳಿಕ ಸುಮಾರು 25 ದೇಶಗಳಿಗೆ ಇದು ಹಬ್ಬಿದೆ.

ಪರಿಸ್ಥಿತಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿಂಗ್ಪಾಂಗ್ ಅವರು ಸಾಮಾಜಿಕ ಭದ್ರತೆಗೆ ಹೆಚ್ಚಿನ ಪೊಲೀಸ್ ಪಡೆ ನಿಯೋಜಿಸಿದ್ದಾರೆ. ರಾಜಧಾನಿಗೆ ವಾಪಸ್ಸಾಗಿರುವ ಸೋಂಕಿತರು ಕನಿಷ್ಠ 14 ದಿನಗಳ ಕಾಲ ಸ್ವಯಂ ನಿರ್ಬಂಧ ವಿಧಿಸಿಕೊಂಡು ಹೊರಗೆ ಬರದಂತೆ ಸೂಚಿಸಲಾಗಿದೆ.

80 ವರ್ಷದ ಚೀನಾ ಪ್ರವಾಸಿ ಕೊರೋನ ವೈರಸ್‌ನಿಂದ ಮೃತಪಟ್ಟಿರುವುದನ್ನು ಫ್ರೆಂಚ್ ಆರೋಗ್ಯ ಸಚಿವ ಆಗ್ನೆಸ್ ಬುಝ್ಯನ್ ಪ್ರಕಟಿಸಿದ್ದಾರೆ. ಈ ಮೊದಲು ಚೀನಾ ಹೊರತುಪಡಿಸಿ ಫಿಲಿಫೀನ್ಸ್, ಹಾಂಕಾಂಗ್ ಮತ್ತು ಜಪಾನ್‌ನಲ್ಲಿ ಮಾತ್ರ ಕೊರೋನ ಸಾವು ಸಂಭವಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News