ಲೈಬ್ರರಿಯಲ್ಲಿ ವಿದ್ಯಾರ್ಥಿಗಳ ಮೇಲೆ ಪೊಲೀಸರ ದಾಳಿಯ ವಿಡಿಯೊ ಬಿಡುಗಡೆ ಮಾಡಿದ ಜಾಮಿಯಾ ಸಮನ್ವಯ ಸಮಿತಿ

Update: 2020-02-16 06:47 GMT
Photo: Twitter

ಹೊಸದಿಲ್ಲಿ, ಫೆ.15: ಪೌರತ್ವ ತಿದ್ದುಪಡಿ ಕಾಯ್ದೆ ಅಥವಾ ಸಿಎಎ ವಿರುದ್ಧ ಪ್ರತಿಭಟನಾ ಮೆರವಣಿಗೆ ವೇಳೆ ಕ್ಯಾಂಪಸ್‌ನಲ್ಲಿ ಭುಗಿಲೆದ್ದಿದ್ದ ಹಿಂಸಾಚಾರ ದಿನದಂದೇ ದಿಲ್ಲಿಯ ಜಾಮಿಯಾ ಮಿಲ್ಲಿಯಾ ಯುನಿವರ್ಸಿಟಿಯ ಓದುವ ಕೊಠಡಿಗೆ ನುಗ್ಗಿದ್ದ ಪೊಲೀಸರು ವಿದ್ಯಾರ್ಥಿಗಳಿಗೆ ಮನಸೋಇಚ್ಛೆ ಥಳಿಸಿರುವ ವಿಡಿಯೊ, ಘಟನೆ ನಡೆದು ಎರಡು ತಿಂಗಳ ಬಳಿಕ ಬಿಡುಗಡೆ ಮಾಡಲಾಗಿದೆ.

  ಜಾಮಿಯಾ ಸಮನ್ವಯ ಸಮಿತಿಯು ಶನಿವಾರ ಸಾಮಾಜಿಕ ಜಾಲತಾಣಕ್ಕೆ 49 ಸೆಕೆಂಡ್‌ಗಳ ವಿಡಿಯೊ ತುಣಕನ್ನು ಬಿಡುಗಡೆ ಮಾಡಿದೆ. ಈ ವಿಡಿಯೊದಲ್ಲಿ ವಿದ್ಯಾರ್ಥಿಗಳು ಯುನಿವರ್ಸಿಟಿಯ ಓಲ್ಡ್ ರೀಡಿಂಗ್ ಹಾಲ್‌ನಲ್ಲಿ(ಎಂಫಿಲ್ ಸೆಕ್ಷನ್)ಓದುತ್ತಾ ಕುಳಿತುಕೊಂಡಿರುತ್ತಾರೆ. ಮುಖಕ್ಕೆ ಬಟ್ಟೆ ಸುತ್ತಿಕೊಂಡಿದ್ದ ಪೊಲೀಸ್ ಪಡೆ ಒಮ್ಮೆಲೇ ಲೈಬ್ರರಿಯ ಒಳಗೆ ನುಗ್ಗಿ ಓದುತ್ತಿದ್ದ ವಿದ್ಯಾರ್ಥಿಗಳ ಮೇಲೆ ಇದ್ದಕ್ಕಿದ್ದಂತೆ ಲಾಠಿಚಾರ್ಜ್ ಮಾಡುತ್ತಾರೆ. ಈ ವೇಳೆ ಕೆಲವು ವಿದ್ಯಾರ್ಥಿಗಳು ಅಲ್ಲೆ ಅಡಗಿ ಕುಳಿತುಕೊಳ್ಳಲು ಯತ್ನಿಸಿದರೆ, ಇನ್ನು ಕೆಲವರು ಗಾಬರಿಯಿಂದ ಓಡಿ ಹೋಗುತ್ತಾರೆ.ಆದರೆ, ಪೊಲೀಸರು ವಿದ್ಯಾರ್ಥಿಗಳನ್ನು ಥಳಿಸುವುದನ್ನು ಮುಂದುವರಿಸಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ಹೊಸದಿಲ್ಲಿಯಲ್ಲಿ ಡಿ.15ರಂದು ಸಿಎಎ ವಿರುದ್ಧ ಜಾಮಿಯಾ ಮಿಲ್ಲಿಯಾ ಯುನಿವರ್ಸಿಟಿಯಲ್ಲಿ ವಿವಿ ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ನಡೆಸಿದ ದಿನ ಹಿಂಸಾಚಾರ ಭುಗಿಲೆದ್ದಿತ್ತು. ಪೊಲೀಸರು ಹಿಂಸಾಚಾರವನ್ನು ನಿಯಂತ್ರಿಸಲು ಲಾಠಿಚಾರ್ಜ್ ಹಾಗೂ ಅಶ್ರುವಾಯು ಸಿಡಿಸಿದ್ದರು. ಆ ನಂತರ ಯುನಿವರ್ಸಿಟಿ ಒಳಗೆ ನುಗ್ಗಿದ ಪೊಲೀಸರು ಸುಮಾರು 100 ವಿದ್ಯಾರ್ಥಿಗಳನ್ನು ಬಂಧಿಸಿದ್ದರು. ಘರ್ಷಣೆಯಲ್ಲಿ ವಿದ್ಯಾರ್ಥಿಯೊಬ್ಬ ಗಾಯಗೊಂಡಿದ್ದು, ಆತ ತನ್ನ ಎಡಗಣ್ಣಿನ ದೃಷ್ಟಿ ಕಳೆದುಕೊಂಡಿದ್ದಾನೆ.

ಜಾಮಿಯಾ ವಿವಿ ಹಾಗೂ ಅಲಿಗಢ ಮುಸ್ಲಿಂ ಯುನಿವರ್ಸಿಟಿಯಲ್ಲಿ ಪೊಲೀಸರ ಕ್ರಮದ ವಿರುದ್ಧ ದೇಶಾದ್ಯಂತ ಪ್ರತಿಭಟನೆ ವ್ಯಕ್ತವಾಗಿತ್ತು. ಯುನಿವರ್ಸಿಟಿ ಕ್ಯಾಂಪಸ್ ಒಳಗೆ ಪ್ರವೇಶಿಸಿ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡಿದ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ದಿಲ್ಲಿ ಪೊಲೀಸ್,‘‘ಪರಿಸ್ಥಿತಿಯನ್ನು ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ’’ ಎಂದಿದೆ.

ಘಟನೆಯ ವಿಡಿಯೊವೊಂದು ಬೆಳಕಿಗೆ ಬಂದಿದೆ. ನಾವು ಅದನ್ನು ಅರಿತುಕೊಂಡಿದ್ದೇವೆ. ಈ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಕ್ರೈಮ್ ಬ್ರಾಂಚ್‌ನ ವಿಶೇಷ ಸಿಪಿ ಪ್ರವೀಣ್ ರಂಜನ್ ಪ್ರತಿಕ್ರಿಯಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News