ಚುನಾವಣೆ ಮುಗಿದಿದೆ, ನಿಂದಿಸಿದವರನ್ನು ಕ್ಷಮಿಸಿದ್ದೇನೆ: ಕೇಜ್ರಿವಾಲ್

Update: 2020-02-16 18:14 GMT

ಹೊಸದಿಲ್ಲಿ, ಫೆ.16: ಚುನಾವಣಾ ಪ್ರಚಾರ ಸಂದರ್ಭದಲ್ಲಿ ತನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿ ನಿಂದಿಸಿದ ವಿರೋಧಿಗಳನ್ನು ಕ್ಷಮಿಸಿದ್ದೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಲು ನಿರ್ಧರಿಸಿದ್ದೇನೆ ಎಂದು ದಿಲ್ಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ದೇಶದ ರಾಜಕೀಯವನ್ನು ಬದಲಾಯಿಸಿದ ದಿಲ್ಲಿ ಜನತೆಗೆ ಅಭಿನಂದನೆ ಸಲ್ಲಬೇಕಿದೆ. ರಾಜಕಾರಣಿಗಳು ಬರುತ್ತಾರೆ, ಹೋಗುತ್ತಾರೆ. ಆದರೆ ದಿಲ್ಲಿಯನ್ನು ಲಕ್ಷಾಂತರ ನಿರ್ಮಾತೃಗಳು ಮುನ್ನಡೆಸುತ್ತಿದ್ದಾರೆ. ಇಂತಹ 50 ನಿರ್ಮಾತೃಗಳು ಈಗ ವೇದಿಕೆಯಲ್ಲಿ ಕುಳಿತಿದ್ದಾರೆ ಎಂದರು.

ಆಪ್ ಸರಕಾರ ಯಾರ ಬಗ್ಗೆಯೂ ಮಲತಾಯಿ ಧೋರಣೆ ತೋರಿಲ್ಲ. ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲರ ಬಗ್ಗೆಯೂ ಏಕರೀತಿಯ ಧೋರಣೆ ಹೊಂದಿದೆ. ನೀವು ಯಾರಿಗೆ ಮತ ಚಲಾಯಿಸಿದ್ದೀರಿ ಎಂಬುದು ಈಗ ಅಪ್ರಸ್ತುತ ಎಂದರು. ಪ್ರಧಾನಿ ಮೋದಿಗೂ ಆಹ್ವಾನ ನೀಡಿದ್ದೆ. ಆದರೆ ಅವರು ಬಂದಿಲ್ಲ. ಆದರೆ ದಿಲ್ಲಿಯ ಸುಗಮ ಆಡಳಿತಕ್ಕೆ ಪ್ರಧಾನಿ ಮತ್ತು ಕೇಂದ್ರ ಸರಕಾರದ ಆಶೀರ್ವಾದವನ್ನು ಈ ವೇದಿಕೆಯ ಮೂಲಕ ಕೋರುವುದಾಗಿ ಕೇಜ್ರಿವಾಲ್ ಹೇಳಿದ್ದಾರೆ.

ಕೇಜ್ರಿವಾಲ್ ಜನತೆಗೆ ಎಲ್ಲವನ್ನೂ ಉಚಿತವಾಗಿ ನೀಡುತ್ತಿದ್ದಾರೆ ಎಂದು ಕೆಲವರು ಟೀಕಿಸುತ್ತಿದ್ದಾರೆ. ಆದರೆ ಪ್ರಕೃತಿಯು ಕೆಲವು ಅಮೂಲ್ಯ ವಸ್ತುಗಳನ್ನು ನಮಗೆ ಉಚಿತವಾಗಿ ನೀಡಿದೆ. ಅದು ತಾಯಿಯ ಪ್ರೀತಿ ಇರಬಹುದು, ತಂದೆಯ ಆಶೀರ್ವಾದ ಇರಬಹುದು ಅಥವಾ ಶ್ರವಣ ಕುಮಾರನ ಸಮರ್ಪಣಾ ಭಾವನೆ ಇರಬಹುದು. ಕೇಜ್ರಿವಾಲ್ ತನ್ನ ಜನರನ್ನು ಪ್ರೀತಿಸುತ್ತಾರೆ ಮತ್ತು ಈ ಪ್ರೀತಿಗೆ ಬೆಲೆ ಕಟ್ಟಲಾಗದು. ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರಿಂದ ಅಥವಾ ಸರಕಾರಿ ಶಾಲೆಯಲ್ಲಿ ಅಧ್ಯಯನ ಮಾಡುವವರಿಂದ ಹಣ ಪಡೆದರೆ ನಾನು ನಾಚಿಗೆ ಪಟ್ಟುಕೊಳ್ಳಬೇಕಾಗುತ್ತದೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News