ಶಾಹಿನ್ ಬಾಗ್ ಹೋರಾಟಗಾರರ ಜೊತೆ ಮಾತುಕತೆಗೆ ಇಬ್ಬರು ಅಡ್ವಕೇಟ್ ಗಳನ್ನು ನೇಮಿಸಿದ ಸುಪ್ರೀಂ ಕೋರ್ಟ್

Update: 2020-02-17 15:34 GMT

ಹೊಸದಿಲ್ಲಿ, ಫೆ.17: ಪೌರತ್ವ ಕಾಯ್ದೆಯನ್ನು ವಿರೋಧಿಸಿ ಶಾಹೀನ್‌ ಬಾಗ್‌ ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದ ರಸ್ತೆ ಸಂಚಾರಕ್ಕೆ ತೊಡಕಾಗಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಬೇರೆಡೆ ಸ್ಥಳಾಂತರಿಸುವಂತೆ ಪ್ರತಿಭಟನಾಕಾರರ ಮನವೊಲಿಕೆಗೆ ಸುಪ್ರೀಂಕೋರ್ಟ್ ಇಬ್ಬರು ಹಿರಿಯ ನ್ಯಾಯವಾದಿಗಳನ್ನು ನೇಮಿಸಿದೆ.  

ಬೇರೆ ಜಾಗದಲ್ಲಿ ಪ್ರತಿಭಟನೆ ಮುಂದುವರಿಯುವಂತೆ ಮನ ಒಲಿಸಲು ಹಿರಿಯ ನ್ಯಾಯವಾದಿಗಳಾದ ಸಂಜಯ್ ಹೆಗ್ಡೆ ಮತ್ತು ಸಾಧನಾ ರಾಮಚಂದ್ರನ್‌ ರನ್ನು ಮಧ್ಯಸ್ಥಿಕೆಗಾರರನ್ನಾಗಿ ನೇಮಿಸಿದ್ದು ಇವರಿಗೆ ನೆರವಾಗಲು ಮಾಜಿ ಮಾಹಿತಿ ಆಯುಕ್ತ ವಜಾಹತ್ ಹಬೀಬುಲ್ಲಾರನ್ನು ನೇಮಿಸಲಾಗಿದೆ ಎಂದು ಸರ್ವೋಚ್ಛ ನ್ಯಾಯಾಲಯ ತಿಳಿಸಿದೆ.

 ಶಾಹೀನ್‌ ಬಾಗ್ ‌ನಲ್ಲಿ ಪ್ರತಿಭಟನೆ ಹಿನ್ನೆಲೆಯಲ್ಲಿ ಪ್ರಯಾಣಿಕರು ಪರ್ಯಾಯ ರಸ್ತೆ ಮೂಲಕ ಪ್ರಯಾಣಿಸುವಂತಾಗಿದೆ ಹಾಗೂ ಅಲ್ಲಿ ರಸ್ತೆ ತಡೆ ನಿರ್ಮಿಸುವುದರಿಂದ ಜನಸಂಚಾರಕ್ಕೆ ತೊಡಕಾಗಿದ್ದು ತಮಗೆ ನಷ್ಟವಾಗಿದೆ ಎಂದು ಕೆಲವು ವ್ಯಾಪಾರಿಗಳು ಸರಕಾರಕ್ಕೆ ದೂರು ನೀಡಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಪ್ರತಿಭಟನೆಯ ಹಕ್ಕು ಮೂಲಭೂತ ಹಕ್ಕಾಗಿದೆ. ರಸ್ತೆ ತಡೆ ಆಗದ ರೀತಿಯಲ್ಲಿ ಪ್ರತಿಭಟನೆ ನಡೆಸುವ ಪರ್ಯಾಯ ಪ್ರದೇಶವಿದೆಯೇ ಎಂದು ದಿಲ್ಲಿ ಪೊಲೀಸರನ್ನು ಪ್ರಶ್ನಿಸಿತು.

 ಅವರು ಬೇರೆ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ದಿಲ್ಲಿ ಪೊಲೀಸರ ವಕೀಲರು ಉತ್ತರಿಸಿದರು. ಪ್ರತಿಭಟನೆ ಮಾಡಲು ಅಡ್ಡಿಯಿಲ್ಲ. ಆದರೆ ನಾಳೆ ಮತ್ತೊಂದು ಸಂಘಟನೆ ಇನ್ನೊಂದು ಪ್ರದೇಶದಲ್ಲಿ ಪ್ರತಿಭಟನೆ ನಡೆಸಬಹುದು. ಸಂಚಾರ ವ್ಯವಸ್ಥೆಗೆ ತೊಂದರೆಯಾಗದ ರೀತಿಯಲ್ಲಿ ಪ್ರತಿಭಟನೆ ನಡೆಸಬೇಕು. ಎಲ್ಲರೂ ರಸ್ತೆ ತಡೆ ಮಾಡಿದರೆ ಜನರು ಹೇಗೆ ಪ್ರಯಾಣಿಸಬೇಕು ಎಂದು ಸುಪ್ರೀಂಕೋರ್ಟ್ ಆತಂಕ ವ್ಯಕ್ತಪಡಿಸಿತು.

ಪ್ರತೀ ದಿನ ಹಲವು ಜನ ಬಳಸುವ ರಸ್ತೆ ಬಿಟ್ಟು ಬೇರೆಡೆ ಪ್ರತಿಭಟನೆ ಮುಂದುವರಿಸಬಹುದು ಎಂದು ಪ್ರತಿಭಟನಾಕಾರರ ಪರ ವಕೀಲರಿಗೆ ತಿಳಿಸಿತು. ಸ್ವಲ್ಪ ಸಮಯಾವಕಾಶ ನೀಡಿದರೆ ಹಾಗೇ ಮಾಡುವುದಾಗಿ ವಕೀಲರು ಉತ್ತರಿಸಿದರು. ಪ್ರತಿಭಟನಾಕಾರರು ಮಕ್ಕಳನ್ನು ಗುರಾಣಿಯಂತೆ ಮುಂಭಾಗದಲ್ಲಿ ನಿಲ್ಲಿಸುತ್ತಿದ್ದಾರೆ ಎಂದು ದಿಲ್ಲಿ ಪೊಲೀಸರ ವಕೀಲರು ನ್ಯಾಯಾಲಯದ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂಕೋರ್ಟ್, ಈ ವಿವಾದವನ್ನು ಇತ್ಯರ್ಥಗೊಳಿಸಲು ಬಯಸುತ್ತಿದ್ದೇವೆ. ಯಾವುದೂ ಫಲಕಾರಿಯಾಗದಿದ್ದರೆ ಆಗ ಅಧಿಕಾರಿಗಳಿಗೆ ಬಿಟ್ಟುಬಿಡೋಣ. ವಿವಾದ ಪರಿಹಾರವಾಗುವುದೆಂಬ ಭರವಸೆಯಿದೆ ಎಂದು ತಿಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News