ಭಾರತ ವಿರುದ್ಧ ಪಾಕಿಸ್ತಾನ ಜಯಭೇರಿ

Update: 2020-02-17 18:34 GMT

ಲಾಹೋರ್, ಫೆ.17: ಸರ್ಕಲ್ ಶೈಲಿಯ ಕಬಡ್ಡಿ ವರ್ಲ್ಡ್‌ಕಪ್ ಫೈನಲ್‌ನಲ್ಲಿ ರವಿವಾರ ರಾತ್ರಿ ಹಾಲಿ ಚಾಂಪಿಯನ್ ಭಾರತವನ್ನು ಮಣಿಸಿದ ಆತಿಥೇಯ ಪಾಕಿಸ್ತಾನ ತಂಡ ಕಪ್ ಎತ್ತಿ ಹಿಡಿದಿದೆ.

ದ್ವಿತೀಯಾರ್ಧದಲ್ಲಿ ತಿರುಗಿ ಬಿದ್ದ ಪಾಕಿಸ್ತಾನ 43-41 ಅಂಕಗಳ ಅಂತರದಿಂದ ಭಾರತವನ್ನು ಮಣಿಸಿತು. ಇದೇ ಮೊದಲ ಬಾರಿ ಭಾರತ ಹೊರತುಪಡಿಸಿ ಬೇರೊಂದು ತಂಡ ಸರ್ಕಲ್ ಶೈಲಿಯ ಕಬಡ್ಡಿ ವಿಶ್ವಕಪ್‌ನ್ನು ಗೆದ್ದುಕೊಂಡಿದೆ. ಕಳೆದ ವಾರ ವಾಘಾ ಗಡಿ ಮೂಲಕ ಲಾಹೋರ್‌ಗೆ ತೆರಳಿದ್ದ ಭಾರತದ ಕಬಡ್ಡಿ ಆಟಗಾರರ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡು ಹೊಸ ವಿವಾದ ಸೃಷ್ಟಿಯಾಗಿತ್ತು. ಪಾಕಿಸ್ತಾನಕ್ಕೆ ತೆರಳಲು ಭಾರತದ ಕಬಡ್ಡಿ ತಂಡಕ್ಕೆ ಅನುಮತಿ ನೀಡಿಲ್ಲ ಎಂದು ಕ್ರೀಡಾ ಸಚಿವಾಲಯ ಸ್ಪಷ್ಟಪಡಿಸಿತ್ತು. ‘‘ಕ್ರೀಡಾ ಸಚಿವಾಲಯ ಹಾಗೂ ವಿದೇಶಾಂಗ ವ್ಯವಹಾರ ಸಚಿವಾಲಯ ಯಾವುದೇ ತಂಡಕ್ಕೆ ಅನುಮತಿ ನೀಡಿಲ್ಲ. ಯಾವುದೇ ಅಂತರ್‌ರಾಷ್ಟ್ರೀಯ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸುವಾಗ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ದೇಶದ ಹೆಸರಲ್ಲಿ, ಭಾರತದ ಧ್ವಜದೊಂದಿಗೆ ಆಡುವ ವಿಚಾರದ ಬಗ್ಗೆ ತನಿಖೆ ನಡೆಸುತ್ತೇವೆ’’ ಎಂದು ಕ್ರೀಡಾ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

ಏಶ್ಯನ್ ಗೇಮ್ಸ್‌ನ ಭಾಗವಾಗಿರುವ ಸರ್ಕಲ್ ಕಬಡ್ಡಿಯು ಸ್ಟಾಂಡರ್ಡ್ ಕಬಡ್ಡಿಗಿಂತ ಸ್ವಲ್ಪ ಭಿನ್ನ. ಸ್ಟಾಂಡರ್ಡ್ ಮಾದರಿಯ ಕಬಡ್ಡಿಯಲ್ಲಿ ಪ್ರತಿ ತಂಡದಲ್ಲಿ ಏಳು ಆಟಗಾರರು ಇರುತ್ತಾರೆ. 80 ಕೆಜಿ ಗಿಂತ ಕಡಿಮೆ ತೂಕ ಹೊಂದಿರುತ್ತಾರೆ. ಸರ್ಕಲ್ ಶೈಲಿಯ ಕಬಡ್ಡಿಯಲ್ಲಿ ಪ್ರತಿ ತಂಡಗಳು 8 ಆಟಗಾರರನ್ನು ಹೊಂದಿರುತ್ತವೆ. ಇಲ್ಲಿ ಯಾವುದೇ ತೂಕದ ನಿರ್ಬಂಧ ಇರುವುದಿಲ್ಲ. ಆಟದ ಮೈದಾನವು ಒಂದು ವೃತ್ತದಂತಿರುತ್ತದೆ.

ಅಂತರ್‌ರಾಷ್ಟ್ರೀಯ ಕಬಡ್ಡಿ ಒಕ್ಕೂಟ(ಐಕೆಎಫ್)ಆಯೋಜಿಸುವ ಸ್ಟಾಂಡರ್ಡ್ ಶೈಲಿಯ ಕಬಡ್ಡಿ ವಿಶ್ವಕಪ್‌ಗೆ ಭಾರತ ಹಾಲಿ ಚಾಂಪಿಯನ್ ಆಗಿದೆ. 2016ರಲ್ಲಿ ನಡೆದ ಕಳೆದ ಆವೃತ್ತಿಯ ವಿಶ್ವಕಪ್ ಫೈನಲ್‌ನಲ್ಲಿ ಇರಾನ್ ತಂಡವನ್ನು ಮಣಿಸಿದ್ದ ಭಾರತ ಚಾಂಪಿಯನ್ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News