ಸುಪ್ರೀಂಕೋರ್ಟ್‌ಗೆ ಶಾಹೀನ್‌ಬಾಗ್ ರಸ್ತೆಗಿಂತ ಸಂವಿಧಾನದ ರಸ್ತೆ ಮುಖ್ಯವಾಗಲಿ

Update: 2020-02-18 04:39 GMT

ಶಾಹೀನ್ ಬಾಗ್ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸುವುದಕ್ಕಾಗಿ ಸುಪ್ರೀಂಕೋರ್ಟ್, ಇಬ್ಬರು ಹಿರಿಯ ನ್ಯಾಯಾಧೀಶರನ್ನು ನೇಮಿಸಿದೆ. ಈ ಮಧ್ಯಸ್ಥಿಕೆಗಾರರು ಪ್ರತಿಭಟನಾಕಾರರ ಬೇಡಿಕೆಗಳನ್ನು ಆಲಿಸಿ ಸುಪ್ರೀಂಕೋರ್ಟ್‌ಗೆ ತಿಳಿಸುತ್ತಾರೆ ಎಂದು ಭಾವಿಸಿದರೆ ನಾವು ಮೂರ್ಖರಾದಂತೆ. ಈ ಮಧ್ಯಸ್ಥಿಕೆದಾರರನ್ನು ನೇಮಿಸಿರುವುದು ಶಾಹೀನ್‌ಬಾಗ್ ಬೇಡಿಕೆಗಳನ್ನು ಆಲಿಸುವುದಕ್ಕಲ್ಲ, ಸುಪ್ರೀಂಕೋರ್ಟ್‌ನ ಬೇಡಿಕೆಯನ್ನು ಶಾಹೀನ್ ಬಾಗ್‌ಗೆ ಮನವರಿಕೆ ಮಾಡಿಸುವುದಕ್ಕಾಗಿ. ಇತ್ತೀಚೆಗಷ್ಟೇ, ಇದೇ ಸುಪ್ರೀಂಕೋರ್ಟ್, ಶಾಹೀನ್ ಬಾಗ್ ಪ್ರತಿಭಟನೆಯ ಸ್ಥಳದಲ್ಲಿ ಅಸ್ವಸ್ಥಗೊಂಡು ಮೃತಪಟ್ಟ ಮಗುವಿನ ಕುರಿತಂತೆ ತೀವ್ರ ಕಳವಳವನ್ನು ವ್ಯಕ್ತಪಡಿಸಿತ್ತು. ಜೊತೆಗೆ, ಸುದೀರ್ಘವಾಗಿ ರಸ್ತೆ ತಡೆ ನಡೆಸುವುದು ಕೂಡ ತರವಲ್ಲ ಎಂದು ಬುದ್ಧಿಹೇಳಿತ್ತು. ಆದರೆ ಒಂದು ಮಗುವಿನ ಜೊತೆಗೆ ತಾಯಿಯೊಬ್ಬಳು ಪ್ರತಿಭಟನೆ ನಡೆಸಲೇಬೇಕಾದ ಅನಿವಾರ್ಯತೆಗೆ ಸಿಲುಕಿರುವುದರ ಬಗ್ಗೆ ಸುಪ್ರೀಂಕೋರ್ಟ್‌ಗೆ ಯಾವ ಕಳವಳವೂ ಇದ್ದಿರಲಿಲ್ಲ. ಜೊತೆಗೆ ಅಸ್ಸಾಮಿನ ಡಿಟೆನ್‌ಶನ್ ಸೆಂಟರ್‌ನಲ್ಲಿ ಸಾಯುತ್ತಿರುವ ಮಕ್ಕಳು, ಮಹಿಳೆಯರು, ಪೊಲೀಸರ ಗುಂಡಿಗೆ ಬರ್ಬರವಾಗಿ ಸಾವಿಗೀಡಾದ ಯುವಕರ ಬಗ್ಗೆಯೂ ಸುಪ್ರೀಂಕೋರ್ಟ್‌ಗೆ ಆತಂಕವಿದ್ದಿರಲಿಲ್ಲ. ರಸ್ತೆ ತಡೆ ಇಡೀ ದೇಶದ ಅರ್ಥವ್ಯವಸ್ಥೆಯನ್ನೇ ಹಾಳುಗೆಡಹುತ್ತದೆಯೇನೋ ಎಂದು ಹೆದರಿರುವ ಸುಪ್ರೀಂಕೋರ್ಟ್‌ಗೆ, ದೇಶದ ಜನರ ನಡುವೆ ಎನ್‌ಪಿಆರ್ ಮೂಲಕ ಕಟ್ಟುತ್ತಿರುವ ಗೋಡೆಯ ಬಗ್ಗೆ ಯಾವ ಆಕ್ಷೇಪವೂ ಇಲ್ಲ. ಒಂದು ರಸ್ತೆ ತಡೆಯಿಂದಾಗಿ ಶ್ರೀಸಾಮಾನ್ಯರಿಗೆ ಅನನುಕೂಲವಾಗುತ್ತದೆ ಎಂದು ಹೇಳುವ ಸುಪ್ರೀಂಕೋರ್ಟ್‌ಗೆ ಸಿಎಎಯಿಂದಾಗಿ ಈ ದೇಶದ ಕೋಟ್ಯಂತರ ಜನರ ಬದುಕೇ ಬೀದಿಗೆ ಬೀಳುತ್ತದೆ ಎನ್ನುವುದರ ಬಗ್ಗೆಯೂ ಕಳವಳವಿಲ್ಲ.

ಇದೀಗ ಇಬ್ಬರು ನ್ಯಾಯಾಧೀಶರು ಮಧ್ಯಸ್ಥಿಕೆ ಮೂಲಕ ಶಾಹೀನ್ ಬಾಗ್‌ನ ಪ್ರತಿಭಟನಾಕಾರರಲ್ಲಿ ‘ಸುದೀರ್ಘ ರಸ್ತೆ ತಡೆಯಿಂದಾಗಿ ಜನರಿಗೆ ಆಗುವ ಸಮಸ್ಯೆ’ಗಳ ಬಗ್ಗೆ ಮನವರಿಕೆ ಮಾಡಲು ಹೊರಟಿದ್ದಾರೆ. ಆ ಮೂಲಕ ಇಡೀ ಪ್ರತಿಭಟನೆಯನ್ನು ಬೇರೆಡೆಗೆ ವರ್ಗಾಯಿಸುವುದು ನ್ಯಾಯಾಲಯದ ಉದ್ದೇಶ. ಆದರೆ ಇದರಿಂದ ಅಲ್ಲಿ ಸೇರಿರುವ ಸಾವಿರಾರು ಜನರ ಆತಂಕ ಪರಿಹಾರವಾಗುತ್ತದೆಯೆ? ಆ ರಸ್ತೆಯಲ್ಲಿ ಓಡಾಡುವ ಜನರು ಮತ್ತು ಶಾಹೀನ್ ಬಾಗ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಜನರು ಬೇರೆ ಬೇರೆ ದೇಶಗಳಿಗೆ ಸೇರಿದವರೇ? ಯಾರ ಸಮಸ್ಯೆ ಅತಿ ದೊಡ್ಡದು? ರಸ್ತೆ ತಡೆಯಿಂದಾಗಿ ಸಂಚಾರಕ್ಕೆ ತೊಡಕನ್ನು ಅನುಭವಿಸುವವರದೇ ಅಥವಾ ಈ ದೇಶದ ತನ್ನ ಅಸ್ಮಿತೆಯನ್ನು ಕಳೆದುಕೊಂಡು ಜೈಲು ಸೇರುವ ಆತಂಕ ಹೊಂದಿದ ಶಾಹೀನ್‌ಬಾಗ್ ಪ್ರತಿಭಟನಾಕಾರರದೋ? ಇಷ್ಟಕ್ಕೂ ಶಾಹೀನ್‌ಬಾಗ್‌ನ ಇನ್ನೊಂದು ರಸ್ತೆಯನ್ನು ಪೊಲೀಸರು ಉದ್ದೇಶಪೂರ್ವಕವಾಗಿ ಮುಚ್ಚಿ ಜನರಿಗೆ ಸಮಸ್ಯೆಯನ್ನು ಸೃಷ್ಟಿಸಿದ್ದಾರೆ. ಅಂದರೆ ದಿಲ್ಲಿಯ ಜನರ ಆಕ್ರೋಶ ಶಾಹೀನ್‌ಬಾಗ್‌ನ ಪ್ರತಿಭಟನಾಕಾರರ ಮೇಲೆ ತಿರುಗಬೇಕು ಎನ್ನುವುದು ಸರಕಾರದ ಸಂಚು. ಹಾಗೂ, ಸುಪ್ರೀಂಕೋರ್ಟ್ ಇದನ್ನೇ ಮುಂದಿಟ್ಟುಕೊಂಡು ಶಾಹೀನ್‌ಬಾಗ್‌ನ ಪ್ರತಿಭಟನಾಕಾರರನ್ನು ತೆರವುಗೊಳಿಸಬೇಕು ಎನ್ನುವುದು ಕೇಂದ್ರ ಸರಕಾರದ ಉದ್ದೇಶವಾಗಿದೆ. ಸುಪ್ರೀಂಕೋರ್ಟ್ ಈ ಉದ್ದೇಶಕ್ಕೆ ಪೂರಕವಾಗಿ ಮಧ್ಯಸ್ಥಿಕೆಗಾಗಿ ತಂಡವನ್ನು ನೇಮಿಸಿದೆ. ಈ ತಂಡದ ಉದ್ದೇಶ, ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವುದು ಅಲ್ಲ. ಅದನ್ನು ಬೇರೆಡೆಗೆ ವರ್ಗಾಯಿಸುವುದು ಅಥವಾ ಆ ಮೂಲಕ ಪ್ರತಿಭಟನೆಯ ಕಾವನ್ನು ತಗ್ಗಿಸುವುದು. ಇದೇ ಸಂದರ್ಭದಲ್ಲಿ ಸಿಎಎ ವಿರುದ್ಧ ಹಲವರು ಈಗಾಗಲೇ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.

ಈ ಕಾಯ್ದೆ ಈ ದೇಶದ ಸಂವಿಧಾನದ ಮೇಲೆ ದಾಳಿ ನಡೆಸಿದೆ ಎಂದು ದೂರಿದ್ದಾರೆ. ಸಂವಿಧಾನಕ್ಕೆ ನ್ಯಾಯ ನೀಡುವುದೆಂದರೆ ನ್ಯಾಯಾಲಯ ತನಗೆ ತಾನೇ ನ್ಯಾಯ ದೊರಕಿಸಿ ಕೊಡುವುದು. ನಿಜಕ್ಕೂ ನ್ಯಾಯಾಲಯದ ರಸ್ತೆಗೆ ತಡೆಯಾಗಿ ನಿಂತಿರುವವರು ಶಾಹೀನ್ ಬಾಗ್‌ನ ಜನರಲ್ಲ. ಕೇಂದ್ರ ಸರಕಾರ. ಸಿಎಎ ಪ್ರತಿಭಟನಾಕಾರರು ಸಂವಿಧಾನದ, ನ್ಯಾಯಾಲಯದ ರಸ್ತೆಗೆ ಅಡ್ಡವಾಗಿ ನಿಂತಿರುವ ಸಿಎಎ ಕಾಯ್ದೆಯನ್ನು ತೆರವು ಪಡಿಸಬೇಕು ಎಂದು ಕಳೆದ ಎರಡು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಇಡೀ ದೇಶ ಇವರ ಜೊತೆಗಿದೆ. ಸಂವಿಧಾನದ ಪರವಾಗಿ ಬೀದಿಗಿಳಿದು ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಜನರು ಜೈಲು ಸೇರಿದ್ದಾರೆ. ಸಾವಿರಾರು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರೆಲ್ಲರೂ ಹೋರಾಡುತ್ತಿರುವುದು ಸಂವಿಧಾನ ಮತ್ತು ನ್ಯಾಯಾಲಯದ ಪರವಾಗಿ. ದುರದೃಷ್ಟವಶಾತ್ ತನ್ನ ರಸ್ತೆಗೆ ಅಡ್ಡವಾಗಿ ನಿಲ್ಲಿಸಿರುವ ಸಿಎಎ ಕಾಯ್ದೆಯ ವಿರುದ್ಧ ಕೇಂದ್ರವನ್ನು ಪ್ರಶ್ನಿಸಬೇಕಾದ ಸುಪ್ರೀಂಕೋರ್ಟ್, ತನ್ನ ಪರವಾಗಿ ರಸ್ತೆಯಲ್ಲಿ ಕುಳಿತ ಶಾಹೀನ್‌ಬಾಗ್‌ನ್ನು ಪ್ರಶ್ನಿಸುತ್ತಿದೆ. ಸುಪ್ರೀಂಕೋರ್ಟ್‌ಗೆ ಈ ದೇಶದ ಸಂವಿಧಾನದ ರಸ್ತೆಗಿಂತಲೂ ಶಾಹೀನ್ ಬಾಗ್ ರಸ್ತೆ ಮುಖ್ಯವಾಗಿದೆ.

ಇಷ್ಟಕ್ಕೂ ಈ ಮಧ್ಯಸ್ಥಿಕೆ ಪ್ರತಿಭಟನಾಕಾರರಿಗೆ ಏನನ್ನು ಹೇಳಲು ಹೊರಟಿದೆ? ಸುದೀರ್ಘವಾಗಿ ಒಂದು ರಸ್ತೆಯನ್ನು ತಡೆಯುವುದು ತಪ್ಪು, ನಿಮ್ಮ ಪ್ರತಿಭಟನೆಯನ್ನು ಬೇರೆಡೆಗೆ ವರ್ಗಾಯಿಸಿ ಎಂದು ಮನವೊಲಿಕೆ ಮಾಡಬಹುದು. ಆದರೆ, ಇಷ್ಟು ದಿನಗಳಿಂದ ನೀವು ಪ್ರತಿಭಟನೆ ನಡೆಸುತ್ತಿರುವುದರ ಹಿಂದಿನ ಆತಂಕಗಳೇನು ? ಎಂದು ಈ ಮಧ್ಯಸ್ಥಿಕೆಗಾರರು ಪ್ರಶ್ನಿಸಲಿದ್ದಾರೆಯೇ? ಖಂಡಿತವಾಗಿಯೂ ಅನುಮಾನ. ಯಾಕೆಂದರೆ ನ್ಯಾಯಾಲಯದ ಗುರಿ ರಸ್ತೆತೆರವುಗೊಳಿಸುವುದಲ್ಲ, ಪ್ರತಿಭಟನಾಕಾರರನ್ನೇ ತೆರವು ಗೊಳಿಸುವುದು. ಅದು ವಿರೋಧಿಸುತ್ತಿರುವುದು ರಸ್ತೆ ತಡೆಯನ್ನಲ್ಲ, ಪ್ರತಿಭಟನೆಯನ್ನು. ಪರೋಕ್ಷವಾಗಿ ಸಿಎಎ ಕಾಯ್ದೆಯ ಪರವಾಗಿ ಸುಪ್ರೀಂ ಕೋರ್ಟ್ ತನ್ನ ಆದೇಶವನ್ನು ನೀಡಿದೆ. ಈ ಮಧ್ಯಸ್ಥಿಕೆಗಾರರಿಗೆ ಸಂವಿಧಾನದ ದಾರಿಯಲ್ಲಿ ಅಡ್ಡವಾಗಿ ಬಿದ್ದಿರುವ ಸಿಎಎ ಎನ್ನುವ ಬೃಹತ್ ಬಂಡೆಯ ಬಗ್ಗೆ ಮನವರಿಕೆ ಮಾಡಿ ಕಳುಹಿಸುವುದು ಪ್ರತಿಭಟನಾಕಾರರ ಹೊಣೆಯಾಗಿದೆ. ಈ ದೇಶಕ್ಕೆ ಯಾವುದು ಹೆಚ್ಚು ಅನ್ಯಾಯವನ್ನುಂಟು ಮಾಡಲಿದೆ ಎನ್ನುವುದನ್ನು ನ್ಯಾಯಾಧೀಶರಿಗೆ ತಿಳಿಸಿಕೊಡಬೇಕಾಗಿದೆ. ಇಂದು ಕೇಂದ್ರ ಸರಕಾರ ಪ್ರತಿಭಟನಾಕಾರರ ಜೊತೆಗೆ ಮಾತುಕತೆ ನಡೆಸಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡುವವರೆಗೆ ಸಮಸ್ಯೆ ಪರಿಹಾರವಾಗುವುದಿಲ್ಲ. ಕೇಂದ್ರ ಸಚಿವರು, ‘ಪ್ರತಿಭಟನಾಕಾರರ ಆತಂಕಗಳೇನು, ಸಿಎಎ ಕಾಯ್ದೆಯಿಂದ ಸಂವಿಧಾನಕ್ಕೆ ಮತ್ತು ಈ ದೇಶದ ಪ್ರಜೆಗಳಿಗೆ ಮಾಡಲಿರುವ ಗಾಯಗಳೇನು’ ಎನ್ನುವುದನ್ನು ಆಲಿಸಬೇಕು. ದೇಶ, ಸಂವಿಧಾನಕ್ಕಿಂತ ದೊಡ್ಡವರು ಯಾರೂ ಇಲ್ಲ. ಈ ದೇಶಕ್ಕೆ, ಸಂವಿಧಾನಕ್ಕೆ ಅನ್ಯಾಯವಾಗುತ್ತದೆಯೆಂದಾದರೆ ಸಿಎಎ ಕಾಯ್ದೆಯನ್ನು ಯಾವ ಶರತ್ತು ಇಲ್ಲದೆ ಹಿಂದೆಗೆದುಕೊಳ್ಳಬೇಕು ಅಥವಾ ಸೂಕ್ತ ತಿದ್ದುಪಡಿಗಳನ್ನು ಮಾಡಬೇಕು. ಜೊತೆಗೆ ಎನ್‌ಪಿಆರ್‌ನಿಂದಲೂ ಹಿಂದೆ ಸರಿಯಬೇಕು. ಆಗ ಮಾತ್ರ ಶಾಹೀನ್‌ಬಾಗ್ ಪ್ರತಿಭಟನೆಗೆ ಶಾಶ್ವತ ಪರಿಹಾರ ಸಿಗುತ್ತದೆ. ಸುಪ್ರೀಂಕೋರ್ಟ್ ಮೊಸಳೆ ಕಣ್ಣೀರು ಸುರಿಸುವುದು ಬಿಟ್ಟು, ಬೀದಿಯಲ್ಲಿ ನಿಂತಿರುವ ಶಾಹೀನ್‌ಬಾಗ್ ಮಹಿಳೆಯರ ನಿಜವಾದ ಕಣ್ಣೀರನ್ನು ಒರೆಸುವುದಕ್ಕೆ ಮುಂದಾಗುವವರೆಗೆ ಸಂವಿಧಾನದ ರಸ್ತೆ ಮತ್ತು ಶಾಹೀನ್‌ಬಾಗ್ ರಸ್ತೆಗಳೆರಡೂ ತೆರವಾಗಲಾರವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News