ಟಿವಿ ಮಾಧ್ಯಮಗಳು ಮುಂಬೈ ರೆಡ್‌ಲೈಟ್ ಏರಿಯಾಗಳಿದ್ದಂತೆ : ಡಿಎಂಕೆ ಮುಖಂಡ ಆರ್.ಎಸ್.ಭಾರತಿ

Update: 2020-02-18 05:56 GMT

ಚೆನ್ನೈ: ಟಿವಿ ಮಾಧ್ಯಮಗಳು ಮುಂಬೈನ ರೆಡ್‌ಲೈಟ್ ಏರಿಯಾದ ವೇಶ್ಯಾಗೃಹಗಳಿದ್ದಂತೆ ಎಂದು ಹೇಳಿಕೆ ನೀಡುವ ಮೂಲಕ ಡಿಎಂಕೆ ನಾಯಕ ಆರ್.ಎಸ್.ಭಾರತಿ ವಿವಾದಕ್ಕೆ ಸಿಲುಕಿದ್ದಾರೆ. ವಂಚನೆ ಹಾಗೂ ಭ್ರಷ್ಟಾಚಾರದ ತಾಣವಾಗಿರುವ ಟಿವಿ ವಾಹಿನಿಗಳು ಹಾಗೂ ಪತ್ರಕರ್ತರು ವೇಶ್ಯೆಯರಂತೆ ಎಂದು ಅವರು ಬಣ್ಣಿಸಿದ್ದಾರೆ.

ಚೆನ್ನೈ ಪ್ರೆಸ್‌ಕ್ಲಬ್ ಈ ಹೇಳಿಕೆಯನ್ನು ಬಲವಾಗಿ ಖಂಡಿಸಿದ್ದು, ಡಿಎಂಕೆ ಮುಖಂಡ ಕ್ಷಮೆ ಯಾಚಿಸಬೇಕು ಎಂದು ಪಟ್ಟು ಹಿಡಿದಿದೆ.

ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರನ್ನು ಪಕ್ಷ ನೇಮಕ ಮಾಡಿಕೊಂಡರೆ ಆ ಬಗ್ಗೆ ಮಾಧ್ಯಮಗಳಲ್ಲಿ ಏಕೆ ಚರ್ಚೆಯಾಗುತ್ತಿದೆ ಎಂದು ಅವರು ಪ್ರಶ್ನಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡಾ ಪ್ರಶಾಂತ್ ಕಿಶೋರ್ ಅವರ ನೆರವು ಪಡೆದಿದ್ದಾರೆ. ಅದೇಕೆ ಸುದ್ದಿಯಾಗಿಲ್ಲ ಎಂದು ಅವರು ಪ್ರಶ್ನಿಸುತ್ತಿರುವುದು ವೀಡಿಯೊದಲ್ಲಿ ಕೇಳಿಬರುತ್ತಿದೆ.

ಟಿವಿ ಮಾಧ್ಯಮ ಸಂಸ್ಥೆಗಳು ತಮ್ಮ ಚಾನಲ್‌ಗಳನ್ನು ಮುಂಬೈ ರೆಡ್‌ಲೈಟ್ ಪ್ರದೇಶದ ಮನೆಗಳಂತೆ ನಡೆಸುತ್ತಿವೆ. ಇಲ್ಲಿ ಹರಿದಾಡುವ ಹಣ ನಿಜಕ್ಕೂ ಆತಂಕಕಾರಿ ಎಂದು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಚೆನ್ನೈ ಪ್ರೆಸ್ ಕ್ಲಬ್ ಜಂಟಿ ಕಾರ್ಯದರ್ಶಿ ಭಾರತಿ ತಮಿಜಾನ್, ಪತ್ರಕರ್ತರು ಹಾಗೂ ಮಾಧ್ಯಮವನ್ನು ಗುರಿ ಮಾಡುವ ನಿದರ್ಶನಗಳು ಹೆಚ್ಚುತ್ತಿವೆ. ಇಂಥ ಹೇಳಿಕೆಯನ್ನು ಪ್ರೆಸ್ ಕ್ಲಬ್ ಬಲವಾಗಿ ಖಂಡಿಸುತ್ತದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News