ಶರ್ಜೀಲ್ ವಿರುದ್ಧ ಹಿಂಸಾಚಾರ ಪ್ರಚೋದಿಸಿದ ಆರೋಪ: ಮಾ.3ರವರೆಗೆ ನ್ಯಾಯಾಂಗ ಬಂಧನ

Update: 2020-02-18 13:33 GMT
Photo: Facebook/SharjeelImam

ಹೊಸದಿಲ್ಲಿ,ಫೆ.18: ದೇಶದ್ರೋಹದ ಆರೋಪದಲ್ಲಿ ಕಳೆದ ತಿಂಗಳು ಬಂಧಿಸಲ್ಪಟ್ಟಿರುವ ಶರ್ಜೀಲ್ ಇಮಾಮ್ ವಿರುದ್ಧ ಪ್ರತ್ಯೇಕ ಪ್ರಕರಣದಲ್ಲಿ ದಿಲ್ಲಿ ಪೊಲೀಸರು ಮಂಗಳವಾರ ಇಲ್ಲಿಯ ಮುಖ್ಯ ಮೆಟ್ರೋಪಾಲಿಟನ್ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದಾರೆ. ಶರ್ಜೀಲ್ ಇಮಾಮ್‌ನನ್ನು ಕಳೆದ ವರ್ಷ ದಿಲ್ಲಿಯ ನ್ಯೂ ಫ್ರೆಂಡ್ಸ್ ಕಾಲನಿಯಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ಸಂದರ್ಭ ನಡೆದಿದ್ದ ಹಿಂಸಾಚಾರದ ಪ್ರಚೋದಕ ಎಂದು ದೋಷಾರೋಪಣ ಪಟ್ಟಿಯಲ್ಲಿ ಹೆಸರಿಸಲಾಗಿದ್ದು,ಮಾ.3ರವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ.

2019,ಡಿ.15ರ ಹಿಂಸಾಚಾರ ಪ್ರಕರಣದ ಆರೋಪಿಯಾಗಿರುವ ಫುರ್ಕಾನ್ ಎಂಬಾತ ಇಮಾಮ್ ಭಾಷಣಗಳಿಂದ ತಾನು ಪ್ರಚೋದಿತನಾಗಿದ್ದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದ್ದ ಹಿನ್ನೆಲೆಯಲ್ಲಿ ದಿಲ್ಲಿ ಪೊಲೀಸರು ಇಮಾಮ್‌ನ ವಿಚಾರಣೆ ನಡೆಸಲು ಬಯಸಿದ್ದರಿಂದ ನ್ಯಾಯಾಲಯವು ಸೋಮವಾರ ಆತನಿಗೆ ಒಂದು ದಿನದ ಪೊಲೀಸ್ ಕಸ್ಟಡಿ ವಿಧಿಸಿತ್ತು.

ಸಿಎಎ ಮತ್ತು ಎನ್‌ಆರ್‌ಸಿಯನ್ನು ವಿರೋಧಿಸಿ ಇಲ್ಲಿಯ ಶಾಹೀನ್‌ಬಾಗ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಸಂದರ್ಭ ಸುದ್ದಿಯಾಗಿದ್ದ ಶರ್ಜೀಲ್‌ನನ್ನು ದಿಲ್ಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಮತ್ತು ಅಲಿಗಡದಲ್ಲಿ ಪ್ರಚೋದನಾಕಾರಿ ಭಾಷಣಗಳನ್ನು ಮಾಡಿದ್ದ ಆರೋಪದಲ್ಲಿ ಪ್ರತ್ಯೇಕ ಪ್ರಕರಣದಲ್ಲಿ ಜ.28ರಂದು ಬಿಹಾರದ ಜೆಹಾನಾಬಾದ್‌ನಿಂದ ಬಂಧಿಸಲಾಗಿತ್ತು.

ಜ.26ರಂದು ಶರ್ಜೀಲ್ ವಿರುದ್ಧ ದೇಶದ್ರೋಹ ಮತ್ತು ಇತರ ಆರೋಪಗಳಲ್ಲಿ ಪ್ರಕರಣ ದಾಖಲಾಗಿತ್ತು.

ಡಿ.15ರಂದು ಜಾಮಿಯಾ ಸಮೀಪದ ನ್ಯೂ ಫ್ರೆಂಡ್ಸ್ ಕಾಲನಿಯಲ್ಲಿ ಪೊಲೀಸರೊಂದಿಗೆ ಘರ್ಷಣೆಗಿಳಿದಿದ್ದ ಪ್ರತಿಭಟನಾಕಾರರು ನಾಲ್ಕು ಸರಕಾರಿ ಬಸ್ಸುಗಳು ಮತ್ತು ಎರಡು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ್ದರು. ವಿದ್ಯಾರ್ಥಿಗಳು,ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ಸೇರಿದಂತೆ ಸುಮಾರು 60 ಜನರು ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News