ಗುಜರಾತ್ ಬಂದರಿಗೆ ಆಗಮಿಸಿದ ಚೀನಾದ ಹಡಗು: ಪಾಕ್‌ಗೆ ಕ್ಷಿಪಣಿ ಸಾಮಾಗ್ರಿ ಸಾಗಿಸುತ್ತಿದ್ದ ಶಂಕೆ

Update: 2020-02-18 16:50 GMT
ಫೈಲ್ ಫೋಟೊ 

ಅಹ್ಮದಾಬಾದ್, ಫೆ.18: ಗುಜರಾತ್‌ನ ಕಾಂಡ್ಲಾ ಬಂದರಿಗೆ ಆಗಮಿಸಿದ ಹಾಂಕಾಂಗ್ ಧ್ವಜವಿದ್ದ ಹಡಗಿನಲ್ಲಿ ಕ್ಷಿಪಣಿ ಉಡಾವಣೆಗೆ ಬಳಸುವ ಸಾಮಾಗ್ರಿಗಳನ್ನು ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಈ ಹಡಗು ಚೀನಾದಿಂದ ಪಾಕಿಸ್ತಾನದ ಕರಾಚಿಯ ಖಾಸಿಂ ಬಂದರಿಗೆ ತೆರಳುತ್ತಿತ್ತು ಎಂದು ಮೂಲಗಳು ತಿಳಿಸಿದೆ. ಹಡಗಿಗೆ ಹೆಚ್ಚುವರಿ ಸರಕನ್ನು ಲೋಡ್ ಮಾಡಲು ಅಥವಾ ಹಡಗಿನಲ್ಲಿದ್ದ ಸರಕನ್ನು ಇಳಿಸುವ ಉದ್ದೇಶದಿಂದ ಫೆ.3ರಂದು ಹಡಗನ್ನು ಕಾಂಡ್ಲಾ ಬಂದರಿಗೆ ತರಿಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

22 ಸಿಬಂದಿಗಳಿದ್ದ ಹಡಗಿನಲ್ಲಿದ್ದ ಸರಕಿನ ಬಗ್ಗೆ ಕಸ್ಟಮ್ಸ್ ಅಧಿಕಾರಿಗಳು ಸಂದೇಹ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಹಡಗನ್ನು ವಶಕ್ಕೆ ಪಡೆದು ಶೋಧಿಸಲಾಗಿತ್ತು. ಆಗ ಕ್ಷಿಪಣಿ ಉತ್ಪಾದನೆ ಹಾಗೂ ಉಡಾವಣೆಗೆ ಬಳಸಲಾಗುವ ಕೆಲವು ಸಾಮಾಗ್ರಿಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. 'ಡಾ ಕುಯಿ ಯುನ್' ಎಂಬ ಹೆಸರಿನ ಹಡಗು ಜನವರಿ 17ರಂದು ಚೀನಾದ ಜಿಯಾಂಗಿನ್ ಬಂದರಿನಿಂದ ಪ್ರಯಾಣ ಆರಂಭಿಸಿತ್ತು. ಹಡಗಿನಲ್ಲಿ ಸಂಶಯಾಸ್ಪದ ಸರಕು ಸಾಗಿಸುತ್ತಿರುವ ಬಗ್ಗೆ ಭಾರತದ ಗುಪ್ತಚರ ಇಲಾಖೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಕಾಂಡ್ಲಾ ಬಂದರಿನಲ್ಲಿ ಶೋಧ ನಡೆಸಲಾಗಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News