ಭಾರತದಲ್ಲಿ ಗೃಹಿಣಿಯರೇಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ?

Update: 2020-02-18 18:31 GMT

ಭಾರತದಲ್ಲಿ ಆತ್ಮಹತ್ಯೆಗೆ ಶರಣಾಗುವ ವಿವಾಹಿತ ಮಹಿಳೆಯರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ದೇಶದಲ್ಲಿ ಪ್ರತಿ ದಿನ ಸರಾಸರಿ 63 ಗೃಹಿಣಿಯರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಇದು ಒಟ್ಟು ಆತ್ಮಹತ್ಯೆಗಳ ಪ್ರಮಾಣದ ಶೇ.17.1ರಷ್ಟಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕ (ಎನ್‌ಸಿಆರ್‌ಬಿ)ದ ಅಂಕಿಸಂಖ್ಯೆಗಳಂತೆ 2001ರಿಂದ ಭಾರತದಲ್ಲಿ ಪ್ರತಿವರ್ಷ 20,000ಕ್ಕೂ ಅಧಿಕ ಗೃಹಿಣಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇಂದು ಗೃಹಿಣಿಯರು ನಿರುದ್ಯೋಗ, ಕೃಷಿ ಬಿಕ್ಕಟ್ಟು ಮತ್ತು ಅಸಂಘಟಿತ ಕ್ಷೇತ್ರದ ಮಂದಗತಿಯ ಬೆಳವಣಿಗೆಯಿಂದಾಗಿ ಬಡತನ ಮತ್ತು ಖಿನ್ನತೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ದಿನಗೂಲಿಗಳ ನಂತರದ ಸ್ಥಾನದಲ್ಲಿದ್ದಾರೆ.

2018ರ ಲ್ಯಾನ್ಸೆಟ್ ವರದಿಯಂತೆ 2016ರಲ್ಲಿ ವಿಶ್ವಾದ್ಯಂತ ಆತ್ಮಹತ್ಯೆ ಮಾಡಿಕೊಂಡಿದ್ದ ಮಹಿಳೆಯರ ಪೈಕಿ ಶೇ.36.6ರಷ್ಟು ಪ್ರಕರಣಗಳು ಭಾರತದ್ದಾಗಿದ್ದವು. 1990ರಲ್ಲಿ ಈ ಪ್ರಮಾಣ ಶೇ.25.3ರಷ್ಟಿತ್ತು. ಅಷ್ಟಕ್ಕೂ ಈ ದೇಶದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಗೃಹಿಣಿಯರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದೇಕೆ?

ದೇಶದಲ್ಲಿ ಮಹಿಳೆಯರ ಆತ್ಮಹತ್ಯೆ ಪ್ರಕರಣಗಳಲ್ಲಿ ಸಿಂಹಪಾಲು ಗೃಹಿಣಿಯರದಾಗಿದ್ದು, ಇದಕ್ಕೆ ಸಣ್ಣ ವಯಸ್ಸಿನಲ್ಲಿಯೇ ಮದುವೆ, ಇನ್ನೂ ಆಟವಾಡಿಕೊಂಡಿರುವ ವಯಸ್ಸಿನಲ್ಲಿ ಬಂದ ತಾಯ್ತನ, ಕೆಳಸ್ತರದ ಸಾಮಾಜಿಕ ಅಂತಸ್ತು, ಕೌಟುಂಬಿಕ ಹಿಂಸೆ ಮತ್ತು ಆರ್ಥಿಕ ಅವಲಂಬನ ಕಾರಣಗಳಾಗಿವೆ ಎಂದು ವರದಿಯು ಹೇಳಿದೆ.

ಮಹಿಳೆಯರು ತಮ್ಮ ಮದುವೆಯ ಬಗ್ಗೆ ಹಲವಾರು ಆಕಾಂಕ್ಷೆಗಳನ್ನಿಟ್ಟುಕೊಂಡಿರುತ್ತಾರೆ. ಆದರೆ ಹೆಚ್ಚಿನವರಿಗೆ ಮದುವೆಯ ನಂತರದ ವಾಸ್ತವ ಸ್ಥಿತಿಯ ಅರಿವಾದಾಗ ಅದು ಅವರನ್ನು ಶೋಷಿಸುವ ಬಂಧನವಾಗುತ್ತದೆ. ಇಂತಹ ಹಲವಾರು ಯುವ ಮಹಿಳೆಯರು ಖಿನ್ನತೆಗೆ ಗುರಿಯಾಗುತ್ತಾರೆ, ಆದರೆ ನೆರವಿಗಾಗಿ ಕೋರುವುದಿಲ್ಲ. ಒಂದು ವೇಳೆ ಅವರು ನೆರವು ಯಾಚಿಸಿದರೂ ಅಗತ್ಯ ಬೆಂಬಲ ಅವರಿಗೆ ದೊರೆಯುವುದಿಲ್ಲ ಎನ್ನುತ್ತಾರೆ ಸಮಾಜ ವಿಜ್ಞಾನಿ ಹಾಗೂ ‘ಚುಪ್:ಬ್ರೇಕಿಂಗ್ ದಿ ಸೈಲೆನ್ಸ್ ಅಬೌಟ್ ಇಂಡಿಯಾಸ್ ವಿಮೆನ್’ ಕೃತಿಯ ಲೇಖಕಿ ದೀಪಾ ನಾರಾಯಣ.

ವಿವಾಹಿತ ಮಹಿಳೆಯರನ್ನು ಪತಿಯ ಮನೆಯಲ್ಲಿ ಸರಿಯಾಗಿ ನೋಡಿಕೊಳ್ಳದಿದ್ದರೂ ತವರಿನವರು ‘ಹೊಂದಿಕೊಂಡು ಹೋಗು’ ಎಂದು ಸಲಹೆಯನ್ನು ನೀಡುವುದು ಸಾಮಾನ್ಯವಾಗಿದೆ. ಇದು ಅವರಲ್ಲಿ ಇನ್ನಷ್ಟು ಹತಾಶೆ ಮತ್ತು ಏಕಾಂಗಿತನದ ಭಾವನೆಯನ್ನು ಉಂಟುಮಾಡುತ್ತದೆ. ಇದು ಗೃಹಿಣಿಯರ ಆತ್ಮಹತ್ಯೆಗಳಿಗೆ ಪ್ರಮುಖ ಕಾರಣಗಳಲ್ಲೊಂದಾಗಿದೆ ಎಂದು ದೀಪಾ ನಾರಾಯಣ ಅಭಿಪ್ರಾಯಿಸಿದ್ದಾರೆ.

ಮಹಿಳೆಯರ ಆತ್ಮಹತ್ಯೆಗಳು ವರದಿಯಾಗುವುದು ಕಡಿಮೆ

ಎನ್‌ಸಿಆರ್‌ಬಿ ಅಂಕಿಸಂಖ್ಯೆಗಳಂತೆ 2017ರಲ್ಲಿ 21,453 ಗೃಹಿಣಿಯರು ಆತ್ಮಹತ್ಯೆ ಮಾಡಿಕೊಂಡಿದ್ದರೆ 2018ರಲ್ಲಿ ಈ ಸಂಖ್ಯೆ 22,937 (ಶೇ.6.9 ಹೆಚ್ಚಳ)ಕ್ಕೇರಿತ್ತು. ಆತ್ಮಹತ್ಯೆಗಳಲ್ಲಿ ಹೆಚ್ಚಳ ಅಥವಾ ಪೊಲೀಸರಲ್ಲಿ ಇಂತಹ ಪ್ರಕರಣಗಳು ವರದಿಯಾಗುವಲ್ಲಿ ಏರಿಕೆ ಇದಕ್ಕೆ ಕಾರಣವಾಗಿರಬಹುದು. ಆದರೆ ಎಷ್ಟೋ ಕುಟುಂಬಗಳು ಇಂತಹ ಪ್ರಕರಣಗಳನ್ನು ಪೊಲೀಸರಿಗೆ ವರದಿ ಮಾಡಲು ಹಿಂಜರಿಯುವುದರಿಂದ ಎನ್‌ಸಿಆರ್‌ಬಿ ಅಂದಾಜು ವಾಸ್ತವಕ್ಕಿಂತ ಕಡಿಮೆಯಾಗಿರುವ ಸಾಧ್ಯತೆಯಿದೆ. ಹೆಚ್ಚಿನ ಗೃಹಿಣಿಯರು ಕೌಟುಂಬಿಕ ಕಿರುಕುಳಗಳಿಂದಲೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರಾದರೂ ಗಂಡನ ಮನೆಯವರು ತಮ್ಮ ಮಾನವುಳಿಸಿಕೊಳ್ಳಲು ಅದನ್ನು ಬಚ್ಚಿಟ್ಟು ಬೇರೆ ಕಾರಣಗಳನ್ನು ಹೇಳುವುದೇ ಹೆಚ್ಚು. ಕೆಲವೊಮ್ಮೆ ವರದಕ್ಷಿಣೆ ಸಾವುಗಳೂ ಆತ್ಮಹತ್ಯೆಗಳೆಂದು ವರದಿಯಾಗುತ್ತವೆ.

 ಮಹಿಳೆಯರ ಆತ್ಮಹತ್ಯೆಗಳ ಒಟ್ಟು ಪ್ರಕರಣಗಳ ಪೈಕಿ ಕನಿಷ್ಠ ಶೇ.50ರಷ್ಟು ವರದಕ್ಷಿಣೆಗೆ ಸಂಬಂಧಿಸಿರುತ್ತವೆ. ಆದರೆ ವರದಕ್ಷಿಣೆ ನೀಡುವುದೂ ಅಪರಾಧವಾಗಿರುವುದರಿಂದ ಮತ್ತು ಮಹಿಳೆಯ ಪೋಷಕರೂ ಈ ಅಪರಾಧದಲ್ಲಿ ಭಾಗಿಯಾಗಿರುವುದರಿಂದ ಇಂತಹ ಪ್ರಕರಣಗಳು ನೈಜರೂಪದಲ್ಲಿ ವರದಿಯಾಗುವುದು ಕಡಿಮೆ. ಹೆಚ್ಚಿನ ವರದಕ್ಷಿಣೆ ಸಾವುಗಳು ಆತ್ಮಹತ್ಯೆಯ ಬದಲು ಸುಟ್ಟ ಗಾಯ,ಸ್ಟವ್ ಸ್ಫೋಟ,ಬಾತರೂಮಿನಲ್ಲಿ ಜಾರಿ ಬಿದ್ದ ಇತ್ಯಾದಿ ಕಾರಣಗಳನ್ನು ಮುಂದೊಡ್ಡಿ ಆಕಸ್ಮಿಕ ಸಾವುಗಳೆಂದು ದಾಖಲಾಗುತ್ತವೆ ಎನ್ನುತ್ತಾರೆ ಮಹಿಳೆಯರ ಹಕ್ಕುಗಳಿಗಾಗಿ ಶ್ರಮಿಸುತ್ತಿರುವ ಎನ್‌ಜಿಒ ವಿಮೋಚನಾದ ಡೊನ್ನಾ ಫೆರ್ನಾಂಡಿಸ್.

ಭೀತಿ, ಸಾಮಾಜಿಕ ಸ್ಥಿತಿ, ಬೆಂಬಲದ ಕೊರತೆ ಮಹಿಳೆಯರ ಆತ್ಮಹತ್ಯೆಗೆ ಕಾರಣ

2018ರ ಎನ್‌ಸಿಆರ್‌ಬಿ ದತ್ತಾಂಶಗಳಂತೆ ಭಾರತದಲ್ಲಿ ಪ್ರತಿದಿನ ಸರಾಸರಿ 20 ವರದಕ್ಷಿಣೆ ಸಾವುಗಳು ಸಂಭವಿಸುತ್ತವೆ. ವರದಕ್ಷಿಣೆಯ 35 ಪ್ರಕರಣಗಳು ಮತ್ತು ಪತಿ ಅಥವಾ ಆತನ ಬಂಧುಗಳಿಂದ ಕೌಟುಂಬಿಕ ಹಿಂಸೆಯ 283 ಪ್ರಕರಣಗಳು ದಾಖಲಾಗುತ್ತಿವೆ.

ನಮ್ಮ ಸಮಾಜದಲ್ಲಿ ಪುರುಷರ ಧ್ವನಿಗೆ ಅಗತ್ಯಕ್ಕಿಂತ ಹೆಚ್ಚಿನ ಬೆಲೆಯಿದೆ ಮತ್ತು ಮಹಿಳೆಯ ಧ್ವನಿಯನ್ನು ಕೀಳಂದಾಜಿಸಲಾಗುತ್ತಿದೆ ಎನ್ನುತ್ತಾರೆ ದೀಪಾ ನಾರಾಯಣ.

ಬಲವಂತದ ಮದುವೆ, ಬಂಜೆತನ, ಕೌಟುಂಬಿಕ ಹಿಂಸೆ, ಪತಿಯಿಂದ ದಾಂಪತ್ಯ ದ್ರೋಹ, ವರದಕ್ಷಿಣೆ ಬೇಡಿಕೆಗಳು ಹಾಗೂ ಶಿಕ್ಷಣ ಅಥವಾ ಉದ್ಯೋಗವನ್ನು ಮುಂದುವರಿಸಲಾಗದ ಅಸಹಾಯಕತೆ ಇವು ಮಹಿಳೆಯರನ್ನು ತೀವ್ರ ಖಿನ್ನತೆಗೆ ತಳ್ಳುತ್ತವೆ ಮತ್ತು ಅಂತಿಮವಾಗಿ ಆತ್ಮಹತ್ಯೆಗೆ ಕಾರಣವಾಗುತ್ತವೆ ಎನ್ನುತ್ತಾರೆ ದಿಲ್ಲಿಯ ನ್ಯಾಯವಾದಿ ಹಾಗೂ ಸಾಮಾಜಿಕ ಮತ್ತು ಲಿಂಗ ಸಮಾನತೆಗಾಗಿ ಶ್ರಮಿಸುತ್ತಿರುವ ಫೌಂಡೇಷನ್ ಫಾರ್ ಇನ್‌ಸ್ಟಿಟ್ಯೂಷನಲ್ ರಿಫಾರ್ಮ್ ಆ್ಯಂಡ್ ಎಜ್ಯುಕೇಷನ್‌ನ ಸಂಸ್ಥಾಪಕಿ ಕಾರ್ಣಿಕಾ ಸೇಠ್.

 ಮಗಳನ್ನು ಮದುವೆ ಮಾಡಿ ಕೊಟ್ಟ ಬಳಿಕ ತಮ್ಮ ಜವಾಬ್ದಾರಿ ಮುಗಿಯಿತು ಎಂದು ಹೆತ್ತವರು ಭಾವಿಸುತ್ತಾರೆ. ಹೀಗಾಗಿ ಅತ್ತೆ-ಮಾವನ ಜೊತೆ, ನಿರ್ದಿಷ್ಟವಾಗಿ ಅವಿಭಕ್ತ ಕುಟುಂಬಕ್ಕೆ ಹೊಂದಿಕೊಳ್ಳಲು ಕಷ್ಟಡುತ್ತಿರುವ ಮಹಿಳೆ ತನ್ನ ನೋವುಗಳನ್ನು ವೌನವಾಗಿ ಸಹಿಸಬೇಕು ಅಥವಾ ಕಾನೂನಿನ ಮೊರೆ ಹೋಗಬೇಕು. ಆದರೆ, ವಿಶೇಷವಾಗಿ ಮಕ್ಕಳನ್ನು ಹೊಂದಿರುವ ಇಂತಹ ಮಹಿಳೆಯರು ಕಳಂಕದ ಭೀತಿ ಮತ್ತು ಸಿಂಗಲ್ ಪೇರೆಂಟ್ ಆಗಿ ಕುಟುಂಬ ನಿರ್ವಹಿಸುವ ಅಸಾಮರ್ಥ್ಯದಿಂದಾಗಿ ಕಾನೂನಿನ ಮೊರೆ ಹೋಗುವುದು ತುಂಬ ಅಪರೂಪ ಎನ್ನುತ್ತಾರೆ ಸೇಠ್.

 ನೆರವು ಕೋರಲು ಹಿಂಜರಿಕೆ

ಹೆಚ್ಚಿನ ಸಂಖ್ಯೆಯಲ್ಲಿ ಗೃಹಿಣಿಯರ ಆತ್ಮಹತ್ಯೆಗಳಿಗೆ ಸಾಮಾಜಿಕ ಮಾತ್ರವಲ್ಲ, ದೈಹಿಕ ಕಾರಣಗಳೂ ಇವೆ ಎನ್ನುತ್ತಾರೆ ಬೆಂಗಳೂರಿನ ‘ದಿ ಮೈಂಡ್ ರೀಸರ್ಚ್ ಫೌಂಡೇಷನ್’ನ ಮನೋವಿಜ್ಞಾನಿ ದೇಬದತ್ತ ಮಿತ್ರಾ. ಯುವ ಮಹಿಳೆಯರು ಮುಟ್ಟಿನ ಮೊದಲು ಅಥವಾ ಪ್ರಸವಾನಂತರ ಖಿನ್ನತೆಗೆ ಜಾರುವುದು ಸಾಮಾನ್ಯ. ಪುರುಷರಲ್ಲಿ ಪ್ರೊಗೆಸ್ಟರೋನ್ ಹಾರ್ಮೋನ್ ಅವರಲ್ಲಿ ಒತ್ತಡದ ಮಟ್ಟವು ಹೆಚ್ಚುವುದನ್ನು ತಡೆಯುತ್ತದೆ, ಆದರೆ ಮಹಿಳೆಯರ ವಿಷಯದಲ್ಲಿ ಹೀಗಿಲ್ಲ. ಇದರಿಂದಾಗಿ ಅವರು ಒತ್ತಡಗಳಿಗೆ ಹೆಚ್ಚು ಸುಲಭವಾಗಿ ಗುರಿಯಾಗುತ್ತಾರೆ. ಇಂತಹ ಖಿನ್ನತೆಗಳಿಂದ ಬಳಲುವ ಕೆಲವೇ ಗೃಹಿಣಿಯರು ವೈದ್ಯಕೀಯ ಸಹಾಯ ಪಡೆಯುತ್ತಾರೆ. ಆಹಾರ ಮತ್ತು ಮನೆಯ ಕಾಳಜಿಯಂತಹ ಇತರ ಪ್ರಾಥಮಿಕ ವಿಷಯಗಳಿಂದಾಗಿ ಖಿನ್ನತೆಯನ್ನು ಸಮಸ್ಯೆ ಎಂದು ಹೆಚ್ಚಿನವರು ಪರಿಗಣಿಸುವುದೇ ಇಲ್ಲ ಎನ್ನುತ್ತಾರೆ ಮಿತ್ರಾ.

ರಾಷ್ಟ್ರೀಯ ಮಹಿಳಾ ಆಯೋಗವು ಕೌಟುಂಬಿಕ ಹಿಂಸೆಯನ್ನು ಅನುಭವಿಸುತ್ತಿರುವ ಮಹಿಳೆಯರಿಗೆ ಕೌನ್ಸೆಲಿಂಗ್ ಸೌಲಭ್ಯವನ್ನು ಒದಗಿಸುತ್ತದೆ ಮತ್ತು ನ್ಯಾಯಾಂಗ ನೆರವಿಗಾಗಿ ಅವರನ್ನು ಜಿಲ್ಲಾ ದಂಡಾಧಿಕಾರಿಗಳೊಂದಿಗೆ ನೇರವಾಗಿ ಸಂಪರ್ಕಿಸುವ ಮೂಲಕ ಸಂಕಷ್ಟದಿಂದ ಪಾರಾಗಲು ಅವರನ್ನು ಬೆಂಬಲಿಸುತ್ತದೆ. ಆದರೆ ಹೆಚ್ಚಿನ ಮಹಿಳೆಯರು ತಮ್ಮ ನೋವುಗಳನ್ನು ವೌನವಾಗಿ ಸಹಿಸುತ್ತಿರುತ್ತಾರೆ ಮತ್ತು ನೆರವಿಗೆ ಲಭ್ಯ ಮಾರ್ಗಗಳನ್ನು ಬಳಸಿಕೊಳ್ಳುವುದಿಲ್ಲ ಎನ್ನುವುದು ಆಯೋಗದ ಮಾಧ್ಯಮ ಸಮನ್ವಯಕಾರರಾದ ನಂಗ್ ತನ್ವಿ ಮನ್ಪೂಂಗ್ ಅವರ ಅನಿಸಿಕೆ. ಸಮಾಜವು ಮಹಿಳೆಯರನ್ನು ನಡೆಸಿಕೊಳ್ಳುವ ರೀತಿಯು ಬದಲಾಗಬೇಕು ಮತ್ತು ಕಾನೂನು ಜಾರಿ ಸಂಸ್ಥೆಗಳು ಪೂರ್ವನಿಯಾಮಕವಾಗಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.

ಸಮಾಜದಲ್ಲಿಯ ಪಿತೃಪ್ರಭುತ್ವ ವರ್ತನೆಯನ್ನು ಬದಲಿಸಲು ಜಾಗೃತಿ ಮಾತ್ರವಲ್ಲ, ಅದರ ದೃಷ್ಟಿಕೋನದಲ್ಲಿ ಬದಲಾವಣೆಯೂ ಅಗತ್ಯವಾಗಿದೆ. ಮಹಿಳೆಯರಿಗೆ ಶಿಕ್ಷಣ ಮತ್ತು ಮನೆಗಳಲ್ಲಿ ಗೌರವ ದೊರೆಯಬೇಕು. ಗಂಡು ಹೊರಗೆ ದುಡಿಯಲು ಇರುತ್ತಾನೆ ಮತ್ತು ಮಹಿಳೆ ಮನೆಗೆಲಸಗಳನ್ನು ಮಾಡಲೆಂದೇ ಹುಟ್ಟಿರುತ್ತಾಳೆ ಎಂಬ ಭಾವನೆ ಗಂಡುಮಕ್ಕಳು ಮತ್ತು ಹೆಣ್ಣುಮಕ್ಕಳಲ್ಲಿ ಇರಬಾರದು ಎನ್ನುತ್ತಾರೆ ‘ದಿ ಮೈಂಡ್ ರೀಸರ್ಚ್ ಫೌಂಡೇಷನ್’ನ ಸಹಸ್ಥಾಪಕಿ ವಿಶ್ವಕೀರ್ತಿ ಭಾನ್ ಛಾಬ್ರಾ.

‘‘ನಾವು ‘ಸ್ವಚ್ಛ ಭಾರತ್’ ಮೂಲಕ ನಮ್ಮ ಭಾರತವನ್ನು ಸ್ವಚ್ಛಗೊಳಿಸು ತ್ತಿದ್ದೇವೆ, ಆದರೆ ನಮ್ಮ ಮನಸ್ಸುಗಳನ್ನು ನಾವು ಸ್ವಚ್ಛಗೊಳಿಸುತ್ತಿಲ್ಲ. ಮಹಿಳೆ ತನ್ನ ಆಸ್ತಿಯಲ್ಲ ಮತ್ತು ಅವಳಿಗೂ ಅವಳದೇ ಆದ ಬದುಕಿದೆ ಎನ್ನುವುದನ್ನು ಪುರುಷರು ತಿಳಿದುಕೊಳ್ಳಬೇಕಾದ ಕಾಲವೀಗ ಬಂದಿದೆ’’ ಎನ್ನುತ್ತಾರೆ ದೀಪಾ ನಾರಾಯಣ.

ಕೃಪೆ: indiaspend.com

Writer - ಕಪಿಲ್ ಕಾಜಲ್

contributor

Editor - ಕಪಿಲ್ ಕಾಜಲ್

contributor

Similar News

ಜಗದಗಲ
ಜಗ ದಗಲ