ಬಲವಂತದ ಮತಾಂತರ,ಅಪಹರಣ ಪ್ರಕರಣ: ಎಂಟು ಕ್ರೈಸ್ತರ ಖುಲಾಸೆ

Update: 2020-02-19 16:01 GMT

ಭೋಪಾಲ,ಫೆ.19: 60 ಮಕ್ಕಳ ಅಪಹರಣ ಮತ್ತು ಬಲವಂತದ ಆರೋಪವನ್ನು ಎದುರಿಸುತ್ತಿದ್ದ ಎಂಟು ಕ್ರೈಸ್ತರನ್ನು ರತ್ಲಾಮ್‌ನ ಸೆಷನ್ಸ್ ನ್ಯಾಯಾಲಯವು ಬಿಡುಗಡೆ ಗೊಳಿಸಿದೆ.

2017,ಮೇ 21ರಂದು ಆರೋಪಿಗಳು ಆದಿವಾಸಿ ಕ್ರೈಸ್ತ ಕುಟುಂಬಗಳಿಗೆ ಸೇರಿದ 60 ಮಕ್ಕಳನ್ನು ಮಹಾರಾಷ್ಟ್ರದ ನಾಗ್ಪುರದಲ್ಲಿಯ ಧಾರ್ಮಿಕ ಆಶ್ರಮಕ್ಕೆ ಕರೆದೊಯ್ಯುತ್ತಿದ್ದಾಗ ರತ್ಲಾಮ್‌ನಲ್ಲಿ ರೈಲ್ವೆ ಪೊಲೀಸರು ಅವರನ್ನು ಬಂಧಿಸಿದ್ದರು. ಅವರ ವಿರುದ್ಧ ಅಪಹರಣ ಮತ್ತು ಬಲವಂತದ ಮತಾಂತರ ಪ್ರಕರಣವನ್ನು ದಾಖಲಿಸಲಾಗಿತ್ತು.

ಆರೋಪಿಗಳ ಪೈಕಿ 15 ವರ್ಷದ ಬಾಲಕನೋರ್ವನ ವಿರುದ್ಧ ಬಾಲನ್ಯಾಯ ಕಾಯ್ದೆಯಡಿ ಆರೋಪವನ್ನು ದಾಖಲಿಸಲಾಗಿತ್ತು. ಇನ್ನೋರ್ವ ಆರೋಪಿಯು ತನಗೆ 17 ವರ್ಷ ಎಂದು ತಿಳಿಸಿದ್ದರೂ ಪೊಲೀಸರು ಆತನನ್ನು ವಯಸ್ಕ ಎಂದೇ ಪರಿಗಣಿಸಿದ್ದರು. ಮಕ್ಕಳನ್ನು 3-4 ದಿನಗಳಲ್ಲಿ ಬಿಡುಗಡೆಗೊಳಿಸಲಾಗಿದ್ದು, ಅವರೊಂದಿಗಿದ್ದ ಇಬ್ಬರು ಮಹಿಳೆಯರು 11 ದಿನಗಳ ಬಳಿಕ ಬಿಡುಗಡೆಗೊಂಡಿದ್ದರು. ಉಳಿದ ಆರೋಪಿಗಳಿಗೆ ಆಗಸ್ಟ್ ಅಂತ್ಯದಲ್ಲಷ್ಟೇ ಜಾಮೀನು ಲಭಿಸಿತ್ತು.

ಬಂಧನದ ಬಳಿಕ ಎಂಟು ಆರೋಪಿಗಳು ಮತ್ತು ಮಕ್ಕಳು ಅಧಿಕಾರಿಗಳಿಂದ ತೀವ್ರ ಕಿರುಕುಳಗಳನ್ನು ಅನುಭವಿಸಿದ್ದರು ಎಂದು ಹೇಳಿದ ಅಲೈಯನ್ಸ್ ಡಿಫೆಂಡಿಂಗ್ ಫ್ರೀಡಮ್ ಇಂಡಿಯಾ (ಎಡಿಎಫ್‌ಐ)ದ ನಿರ್ದೇಶಕಿ ತೆಹ್ಮಿನಾ ಅರೋರಾ ಅವರು,ಯಾರಿಗೇ ಆದರೂ ಅವರ ಧರ್ಮದ ಕಾರಣದಿಂದ ಕಿರುಕುಳ ನೀಡಬಾರದು. ಅನ್ಯಾಯವಾಗಿ ಸಿಲುಕಿಸಲ್ಪಟ್ಟಿದ್ದ ಆರೋಪಿಗಳು ಬಿಡುಗಡೆಗೊಂಡಿರುವುದು ಖುಷಿಯ ವಿಷಯವಾಗಿದೆ. ಅವರು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಅವರನ್ನು ಗುರಿಯಾಗಿಸಿಕೊಂಡು ಅಪಹರಣ ಮತ್ತು ಬಲವಂತದ ಮತಾಂತರದ ಆರೋಪವನ್ನು ಹೊರಿಸಲಾಗಿತ್ತು.

ಭಾರತದ ಸಂವಿಧಾನವು ಧರ್ಮದ ಪಾಲನೆ ಮತ್ತು ಪ್ರಸಾರದ ಸ್ವಾತಂತ್ರ್ಯವನ್ನು ಖಾತರಿಪಡಿಸಿದೆ. ವಿಷಾದವೆಂದರೆ ಇಂತಹುದು ಇದೊಂದೇ ಪ್ರಕರಣವಲ್ಲ,ಆದರೆ ಈ ಪ್ರಕರಣದಲ್ಲಿ ನ್ಯಾಯ ಲಭಿಸಿರುವುದು ಕಿರುಕುಳ ಮತ್ತು ದ್ವೇಷ ಎದುರಿಸುತ್ತಿರುವ ಎಲ್ಲ ಕ್ರೈಸ್ತರು ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳಿಗೆ ನೆಮ್ಮದಿಯನ್ನುಂಟು ಮಾಡಿದೆ ಎಂದರು.

ಎಡಿಫ್‌ಐ ಸದಸ್ಯರಾಗಿರುವ ವಕೀಲರ ತಂಡವು ಆರೋಪಿಗಳ ಪರವಾಗಿ ವಾದಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News