ಜಿಎಸ್‌ಟಿ 21ನೇ ಶತಮಾನದ ‘ದೊಡ್ಡ ಮೂರ್ಖತನ’: ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ

Update: 2020-02-19 16:09 GMT

ಹೈದರಾಬಾದ್, ಫೆ.19: ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) 21ನೇ ಶತಮಾನದ ಅತೀ ದೊಡ್ಡ ಮೂರ್ಖತನ ಎಂದು ಬಿಜೆಪಿ ಮುಖಂಡ, ರಾಜ್ಯಸಭೆಯ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

2030ರ ವೇಳೆಗೆ ಜಗತ್ತಿನ ಸೂಪರ್‌ಪವರ್ ಆಗಬೇಕಿದ್ದರೆ ಭಾರತ ವಾರ್ಷಿಕ 10% ಅಭಿವೃದ್ಧಿ ಸಾಧಿಸುವ ಅಗತ್ಯವಿದೆ ಎಂದೂ ಅವರು ಹೇಳಿದ್ದಾರೆ. ಪ್ರಜ್ಞಾ ಭಾರತಿ ಸಂಸ್ಥೆ ಆಯೋಜಿಸಿದ್ದ ‘ಇಂಡಿಯಾ- ಆ್ಯನ್ ಇಕನಾಮಿಕ್ ಸೂಪರ್‌ಪವರ್ ಬೈ 2030’ ಎಂಬ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಮಾಜಿ ಪ್ರಧಾನಿ ಪಿವಿ ನರಸಿಂಹ ರಾವ್ ಅವರ ಅಧಿಕಾರಾವಧಿಯಲ್ಲಿ ಜಾರಿಗೆ ತಂದ ಸುಧಾರಣಾ ಪ್ರಕ್ರಿಯೆಗಳಿಗಾಗಿ ಅವರಿಗೆ ಭಾರತರತ್ನ ಪುರಸ್ಕಾರ ನೀಡಬೇಕು ಎಂದು ಸ್ವಾಮಿ ಆಗ್ರಹಿಸಿದರು.

ನರಸಿಂಹ ರಾವ್ ಸಂಪುಟದಲ್ಲಿ ಅರ್ಥ ಸಚಿವರಾಗಿದ್ದ ಮನಮೋಹನ್ ಸಿಂಗ್ ಜಾರಿಗೊಳಿಸಿದ ಇತರ ಸುಧಾರಣಾ ಪ್ರಕ್ರಿಯೆಗಳಲ್ಲಿ ಆ ಬಳಿಕ ಯಾವುದೇ ಪ್ರಗತಿಯಾಗಿಲ್ಲ. ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಬೇಕು. ಹೂಡಿಕೆದಾರರನ್ನು ಜಿಎಸ್‌ಟಿ ಮತ್ತು ಆದಾಯ ತೆರಿಗೆಯ ಹೆಸರಲ್ಲಿ ಬೆದರಿಸುವ ಬದಲು ಅವರನ್ನು ಪುರಸ್ಕರಿಸಬೇಕು ಎಂದವರು ಹೇಳಿದರು.

21ನೇ ಶತಮಾನದ ಅತೀ ದೊಡ್ಡ ಮೂರ್ಖತನವಾಗಿರುವ ಜಿಎಸ್‌ಟಿಯಲ್ಲಿ ಯಾವ ಫಾರ್ಮ್ ಅನ್ನು ಎಲ್ಲಿ ತುಂಬಿಸಬೇಕು ಎಂಬುದು ಯಾರಿಗೂ ತಿಳಿದಿಲ್ಲ. ಜೊತೆಗೆ, ಇದನ್ನು ಕಂಪ್ಯೂಟರ್‌ನಲ್ಲಿ ಅಪ್‌ಲೋಡ್ ಮಾಡಬೇಕಿದೆ. ಆರ್ಥಿಕ ಅಭಿವೃದ್ಧಿ ಹೆಚ್ಚಬೇಕಿದ್ದರೆ ಮತ್ತು ಭ್ರಷ್ಟಾಚಾರ ನಿರ್ಮೂಲನವಾಗಬೇಕಿದ್ದರೆ ಆದಾಯ ತೆರಿಗೆ ರದ್ದಾಗಬೇಕು ಎಂದು ಅವರು ಸಲಹೆ ನೀಡಿದರು.

2030ರಲ್ಲಿ ಭಾರತ ಸೂಪರ್‌ಪವರ್ ಆಗಬೇಕಿದ್ದರೆ ವಾರ್ಷಿಕ 10% ಅಭಿವೃದ್ಧಿ ಆಗಬೇಕು. 10% ಅಭಿವೃದ್ಧಿ ಆಗಬೇಕಿದ್ದರೆ ಜಿಡಿಪಿ 37% ಇರಬೇಕು. ಆದರೆ ಈಗ ಕೇವಲ 5% ಇದೆ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News