ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೂ ಪಬ್ಲಿಕ್ ಪರೀಕ್ಷೆ ಬರೆಯಬಹುದು: ಸಿಬಿಎಸ್‌ಇ

Update: 2020-02-19 17:17 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಫೆ.19: ಪ್ರಿಪರೇಟರಿ (ಪೂರ್ವಸಿದ್ಧತಾ) ಪರೀಕ್ಷೆಯಲ್ಲಿ ಪಾಸಾಗದ ವಿದ್ಯಾರ್ಥಿಗಳಿಗೆ ಬೋರ್ಡ್(ಪಬ್ಲಿಕ್) ಪರೀಕ್ಷೆಗೆ ಹಾಜರಾಗಲು ಅವಕಾಶ ನಿರಾಕರಿಸಬಾರದು ಎಂದು ಸಿಬಿಎಸ್‌ಇ ಸ್ಪಷ್ಟಪಡಿಸಿದೆ.

ಪಬ್ಲಿಕ್ ಪರೀಕ್ಷೆಗೆ ಹಾಜರಾಗಲು ತಮಗೆ ಶಾಲೆಯವರು ಪ್ರವೇಶ ಪತ್ರ ನಿರಾಕರಿಸಿದ್ದಾರೆ ಎಂದು ಕೆಲವು ವಿದ್ಯಾರ್ಥಿಗಳು ದೂರು ನೀಡಿದ್ದರು. ಪ್ರಿಪರೇಟರಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ), ಬೋರ್ಡ್ ಪರೀಕ್ಷೆಗೆ ಯಾವ ರೀತಿ ಸಿದ್ಧತೆ ನಡೆಸಿದ್ದೇವೆ ಎಂಬುದನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಸಲು ಪ್ರಿಪರೇಟರಿ ಪರೀಕ್ಷೆ ನಡೆಸಲಾಗುತ್ತದೆ. ಆದರೆ ವಿದ್ಯಾರ್ಥಿ ಕಡಿಮೆ ಅಂಕ ಗಳಿಸಿದನೆಂಬ ಕಾರಣಕ್ಕೆ ಆತನಿಗೆ ಬೋರ್ಡ್ ಪರೀಕ್ಷೆ ಬರೆಯಲು ಅನುಮತಿ ನಿರಾಕರಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.

ಸಿಬಿಎಸ್‌ಇ ಸ್ಪಷ್ಟನೆ ನೀಡಿದ ತಕ್ಷಣ ತನಗೆ ಪ್ರವೇಶ ಪತ್ರ ಒದಗಿಸಲಾಗಿದೆ ಎಂದು ದೂರು ನೀಡಿದ್ದ ವಿದ್ಯಾರ್ಥಿಗಳಲ್ಲಿ ಒಬ್ಬ ಟ್ವೀಟ್ ಮೂಲಕ ತಿಳಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಸಿಬಿಎಸ್‌ಇ 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗಳು ಈಗಾಗಲೇ ಆರಂಭವಾಗಿದ್ದು 10ನೇ ತರಗತಿ ಪರೀಕ್ಷೆ ಮಾರ್ಚ್ 20ರವರೆಗೆ, 12ನೇ ತರಗತಿ ಪರೀಕ್ಷೆ ಮಾರ್ಚ್ 30ರವರೆಗೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News