ರಾಮಮಂದಿರ ಟ್ರಸ್ಟ್‌ನ ಅಧ್ಯಕ್ಷರಾಗಿ ನೃತ್ಯ ಗೋಪಾಲ ದಾಸ ಆಯ್ಕೆ

Update: 2020-02-19 17:59 GMT

ಹೊಸದಿಲ್ಲಿ,ಫೆ.19: ರಾಮಮಂದಿರ ಟ್ರಸ್ಟ್‌ನ ಮೊದಲ ಸಭೆ ಬುಧವಾರ ಇಲ್ಲಿ ನಡೆದಿದ್ದು,ಮಹಂತ ನೃತ್ಯ ಗೋಪಾಲ ದಾಸ ಅವರು ಅಧ್ಯಕ್ಷರಾಗಿ ಮತ್ತು ಚಂಪತ್ ರಾಯ್ ಅವರು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

ಹಿರಿಯ ನ್ಯಾಯವಾದಿ ಕೆ.ಪರಾಶರನ್ ಅವರ ನಿವಾಸದಲ್ಲಿ ನಡೆದ ಸಭೆಯು ಪ್ರಧಾನಿ ನರೇಂದ್ರ ಮೋದಿ ಅವರ ಮಾಜಿ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಅವರನ್ನು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಮಂದಿರ ನಿರ್ಮಾಣ ಸಮಿತಿಯ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಿತು. ಪುಣೆಯ ಸ್ವಾಮಿ ಗೋವಿಂದ ದೇವ ಗಿರಿ ಅವರು ಖಜಾಂಜಿಯಾಗಿ ನೇಮಕಗೊಂಡಿದ್ದಾರೆ.

ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ವೇಗ ನೀಡಲು ಅಗತ್ಯ ವಿಧಿವಿಧಾನಗಳನ್ನು ರೂಪಿಸುವ ಉದ್ದೇಶದಿಂದ ಸಭೆಯನ್ನು ಕರೆಯಲಾಗಿತ್ತು. ಮಂದಿರ ನಿರ್ಮಾಣಕ್ಕೆ ದೇಣಿಗೆಗಳ ಸಂಗ್ರಹಕ್ಕಾಗಿ ಅಯೋಧ್ಯೆಯ ಎಸ್‌ಬಿಐ ಶಾಖೆಯಲ್ಲಿ ಖಾತೆಯೊಂದನ್ನು ತೆರೆಯಲೂ ಸಭೆಯು ನಿರ್ಧರಿಸಿದೆ ಎಂದು ರಾಯ್ ಸುದ್ದಿಗಾರರಿಗೆ ತಿಳಿಸಿದರು.

ಕೇಂದ್ರ ಸರಕಾರವು ರಚಿಸಿರುವ ಟ್ರಸ್ಟ್ 15 ಸದಸ್ಯರನ್ನು ಹೊಂದಿದೆ. ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಸದಸ್ಯರಲ್ಲೊಬ್ಬರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News