ಹಸುಗಳ ಹಾಲು, ಮೂತ್ರದ ಘಟಕಾಂಶಗಳ ಕುರಿತ ಸಂಶೋಧನೆಗೆ ಅನುದಾನ: ಸರಕಾರದ ಘೋಷಣೆ

Update: 2020-02-19 18:08 GMT

ಹೊಸದಿಲ್ಲಿ, ಫೆ.19: ಶುದ್ಧ ದೇಶೀ ತಳಿಯ ಹಸುಗಳ ಸಗಣಿ, ಹಾಲು ಮತ್ತು ಮೂತ್ರದಲ್ಲಿ ಇರುವ ಘಟಕಾಂಶಗಳನ್ನು ಗುರುತಿಸಿ ಅವುಗಳನ್ನು ವೈದ್ಯಕೀಯ ಉತ್ಪನ್ನ, ಕೃಷಿ ಉತ್ಪನ್ನ ಹಾಗೂ ಮನೆಬಳಕೆಯ ವಸ್ತುಗಳಲ್ಲಿ ಬಳಸುವ ಕುರಿತು ನಡೆಸುವ ಸಂಶೋಧನಾ ಕಾರ್ಯಕ್ಕೆ ಅನುದಾನ ನೀಡಲಾಗುವುದು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.

ದೇಶೀ ತಳಿಯ ಹಸುಗಳ ಸಗಣಿ, ಹಾಲು, ಮೂತ್ರದಿಂದ ತಯಾರಿಸಬಹುದಾದ ಉತ್ಪನ್ನಗಳ ಬಗ್ಗೆ ವ್ಯವಸ್ಥಿತ ಸಂಶೋಧನೆ ನಡೆಸಲು ಶಿಕ್ಷಣ ಸಂಸ್ಥೆಗಳಿಂದ ಹಾಗೂ ಸರಕಾರೇತರ ಸಂಘಟನೆಗಳಿಂದ ಅರ್ಜಿ ಆಹ್ವಾನಿಸಿದ್ದು 2020ರ ಮಾರ್ಚ್ 14ರ ಮೊದಲು ಅರ್ಜಿ ಸಲ್ಲಿಸಬೇಕು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ತಿಳಿಸಿದೆ.

ಪುರಾತನ ಆಯುರ್ವೇದ ಚಿಕಿತ್ಸಾ ಕ್ರಮ ಹಾಗೂ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಯಲ್ಲಿ ದೇಶೀಯ ತಳಿಯ ಹಸುವಿನ ಮೂತ್ರ, ಹಾಲು, ಸಗಣಿಯಿಂದ ತಯಾರಿಸಿದ ಔಷಧಿಗಳು ನರಗಳ ಊತ, ಅಸ್ತಮಾ ಮತ್ತಿತರ ರೋಗಗಳಿಗೆ ಮದ್ದಾಗಿ ಬಳಕೆಯಾಗುತ್ತಿತ್ತು. ಅಲ್ಲದೆ ಇದು ಕ್ಯಾನ್ಸರ್, ಡಯಾಬಿಟೀಸ್, ಅಧಿಕ ರಕ್ತದೊತ್ತಡ ಮುಂತಾದ ರೋಗಗಳನ್ನೂ ಗುಣಪಡಿಸುವ ಅಂಶಗಳನ್ನು ಹೊಂದಿದೆ. ಈ ಅಂಶಗಳನ್ನು ಗುರುತಿಸಿ ಸಂಶೋಧನೆ ನಡೆಸುವ ಉದ್ದೇಶವಿದೆ ಎಂದು ಇಲಾಖೆ ತಿಳಿಸಿದೆ.

ಇದೊಂದು ಪ್ರಾಮಾಣಿಕ ಸಂಶೋಧನೆ(ಮುಕ್ತ ಸಂಶೋಧನೆ)ಯಾಗಿರುತ್ತದೆಯೇ ಅಥವಾ ನಿರ್ದೇಶಿತ (ಇದೇ ರೀತಿ ಮಾಡಬೇಕು ಎಂಬ ನಿರ್ದೇಶನ) ಸಂಶೋಧನೆಯಾಗಿರುತ್ತದೆಯೇ ಎಂಬುದೇ ಇಲ್ಲಿರುವ ಪ್ರಶ್ನೆಯಾಗಿದೆ ಎಂದು ಬನಾರಸ್ ಹಿಂದು ವಿವಿಯ ಪ್ರೊಫೆಸರ ಸುಭಾಷ್ ಲಖೋಟಿಯಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News