ನಾಳೆಯಿಂದ ರಣಜಿ ಕ್ವಾರ್ಟರ್ ಫೈನಲ್

Update: 2020-02-19 18:19 GMT

ಮುಂಬೈ, ಫೆ.19: ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯಗಳು ದೇಶದ ನಾಲ್ಕು ವಿವಿಧ ಸ್ಥಳಗಳಲ್ಲಿ ಗುರುವಾರ ಆರಂಭವಾಗಲಿವೆ.ಸೌರಾಷ್ಟ್ರ ಹಾಗೂ ಕರ್ನಾಟಕ ತಂಡಗಳು ತನಗಿಂತ ಕಡಿಮೆ ಸಾಮರ್ಥ್ಯದ ತಂಡವನ್ನು ಎದುರಿಸಲಿವೆ.

ಸೌರಾಷ್ಟ್ರ ಹಾಗೂ ಆಂಧ್ರದ ನಡುವೆ ಆಂಧ್ರಪ್ರದೇಶದ ಒಂಗೊಲೆಯಲ್ಲಿ ಕ್ವಾರ್ಟರ್ ಫೈನಲ್ ಪಂದ್ಯ ನಡೆಯಲಿದ್ದು,ಉಭಯ ತಂಡಗಳು ಎಲೈಟ್ ಕ್ರಾಸ್ ಗುಂಪಿನಿಂದ ನಾಕೌಟ್ ಹಂತಕ್ಕೇರಿವೆ.

 ಕಳೆದ ವರ್ಷ ರನ್ನರ್ಸ್ -ಅಪ್‌ಗೆ ತೃಪ್ತಿಪಟ್ಟು ಕೊಂಡಿದ್ದ ಸೌರಾಷ್ಟ್ರ ತಂಡ ಆಂಧ್ರವನ್ನು ಸುಲಭವಾಗಿ ಸೋಲಿಸುವ ನಿರೀಕ್ಷೆ ಮೂಡಿಸಿದೆ. ಲೀಗ್ ಹಂತದಲ್ಲಿ 8 ಪಂದ್ಯಗಳಲ್ಲಿ ಆಡಿದ್ದ ಸೌರಾಷ್ಟ್ರ ಮೂರರಲ್ಲಿ ಜಯ, ನಾಲ್ಕರಲ್ಲಿ ಡ್ರಾ ಸಾಧಿಸಿದೆ. ಉತ್ತರಪ್ರದೇಶದ ವಿರುದ್ಧ ಏಕೈಕ ಸೋಲು ಕಂಡಿತ್ತು.

ಪ್ರಮುಖ ವೇಗದ ಬೌಲರ್ ಜಯದೇವ್ ಉನದ್ಕಟ್ ಈ ಋತುವಿನಲ್ಲಿ ಒಟ್ಟು 51 ವಿಕೆಟ್‌ಗಳನ್ನು ಕಬಳಿಸಿ ಕಳೆದ ಋತುವಿನಲ್ಲಿ ನೀಡಿದ್ದ ಉತ್ತಮ ಪ್ರದರ್ಶನ ಮುಂದುವರಿಸಿದ್ದರು. ಉನದ್ಕಟ್ ಮತ್ತೊಮ್ಮೆ ಕ್ವಾರ್ಟರ್ ಫೈನಲ್‌ನಲ್ಲಿ ಸಿಡಿದೇಳುವ ಸಾಧ್ಯತೆಯಿದೆ. ಬ್ಯಾಟಿಂಗ್ ವಿಭಾಗದಲ್ಲಿ ಸ್ಟಾರ್ ಆಟಗಾರ ಚೇತೇಶ್ವರ ಪೂಜಾರ ಅನುಪಸ್ಥಿತಿಯಲ್ಲಿ ಶೆಲ್ಡನ್ ಜಾಕ್ಸನ್ ಆಡಲಿದ್ದಾರೆ. ಪೂಜಾರ 55ರ ಸರಾಸರಿಯಲ್ಲಿ ಒಟ್ಟು 605 ರನ್ ಗಳಿಸಿ ಗರಿಷ್ಠ ಸ್ಕೋರರ್ ಆಗಿದ್ದಾರೆ.

ಮತ್ತೊಂದೆಡೆ ಆಂಧ್ರ ತಂಡ ಲೀಗ್ ಹಂತದ ಕೊನೆಯ ಎರಡು ಪಂದ್ಯಗಳಲ್ಲಿ ಸತತ ಸೋಲನುಭವಿಸಿತ್ತು. ಆರಂಭದಲ್ಲಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಈ ಹಿನ್ನೆಲೆಯಲ್ಲಿ ಕ್ವಾರ್ಟರ್ ಫೈನಲ್ ತಲುಪಿತ್ತು. ಆಂಧ್ರ ತಂಡದ ಫಾರ್ಮ್ ನಲ್ಲಿರುವ ಮಧ್ಯಮ ವೇಗದ ಬೌಲರ್ ಕೆವಿ ಶಶಿಕಾಂತ್ ಹಾಗೂ ಬ್ಯಾಟ್ಸ್‌ಮನ್ ರಿಕಿ ಭುಯ್ ಅವರನ್ನು ಹೆಚ್ಚು ನೆಚ್ಚಿ ಕೊಂಡಿದೆ.

ಕರ್ನಾಟಕಕ್ಕೆ ಸ್ಫೂರ್ತಿಯುತ ಜಮ್ಮು ಸವಾಲು

 ಬಲಿಷ್ಠ ಕರ್ನಾಟಕ ತಂಡ ಪ್ರಮುಖ ದೇಶೀಯ ಟೂರ್ನಿಯಲ್ಲಿ ಸೆಮಿಫೈನಲ್‌ನಲ್ಲಿ ಸ್ಥಾನ ಪಡೆಯಲು ಜಮ್ಮು-ಕಾಶ್ಮೀರ ತಂಡವನ್ನು ಜಮ್ಮುವಿನಲ್ಲಿ ಮುಖಾಮುಖಿಯಾಗಲಿದೆ. ಜಮ್ಮು ತಂಡದ ಆಟಗಾರರು ತಮ್ಮ ರಾಜ್ಯದಲ್ಲಿ ಸಂವಹನ ವ್ಯವಸ್ಥೆ ಸಂಪೂರ್ಣ ಸ್ಥಗಿತ ಗೊಂಡಿದ್ದರೂ ಟೂರ್ನಿಯಲ್ಲಿ ಸ್ಫೂರ್ತಿಯುತ ಪ್ರದರ್ಶನ ನೀಡಿ ಅಂತಿಮ-8ರ ಘಟ್ಟ ತಲುಪಿದ್ದಾರೆ.

ಉಭಯ ತಂಡಗಳು ಗಾಂಧಿ ಸ್ಮಾರಕ ಸೈನ್ಸ್ ಕಾಲೇಜಿನಲ್ಲಿ ಅಭ್ಯಾಸ ನಿರತವಾಗಿವೆ. ಕರುಣ್ ನಾಯರ್ ನೇತೃತ್ವದ ಕರ್ನಾಟಕ ಪಂದ್ಯ ಗೆಲ್ಲಬಲ್ಲ ಫೇವರಿಟ್ ತಂಡವಾಗಿದೆ. ಮನೀಷ್ ಪಾಂಡೆ ನ್ಯೂಝಿಲ್ಯಾಂಡ್ ಪ್ರವಾಸದಿಂದ ವಾಪಸಾಗಿ ಮರು ಸೇರ್ಪಡೆಯಾದ ಬಳಿಕ ಕರ್ನಾಟಕದ ಬ್ಯಾಟಿಂಗ್ ಮತ್ತಷ್ಟು ಬಲಿಷ್ಠವಾಗಿದೆ. ಕರ್ನಾಟಕದ ಬೌಲಿಂಗ್ ವಿಭಾಗದಲ್ಲಿ ಪ್ರಸಿದ್ಧ ಕೃಷ್ಣ, ಅಭಿಮನ್ಯು ಮಿಥುನ್ ಹಾಗೂ ರೋನಿತ್ ಮೋರೆ ಅವರಿದ್ದಾರೆ. ಎಡಗೈ ವೇಗದ ಬೌಲರ್ ಪ್ರತೀಕ್ ಜೈನ್ ಎದುರಾಳಿಗೆ ಸವಾಲಾಗಬಲ್ಲರು. ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಕಳಪೆ ಫಾರ್ಮ್ ತಂಡಕ್ಕೆ ಚಿಂತೆಯ ವಿಚಾರವಾಗಿದೆ.

ಜಮ್ಮು-ಕಾಶ್ಮೀರ ತಂಡ ಮೂರನೇ ಬಾರಿ ರಣಜಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದೆ. ಕರ್ನಾಟಕ ತಂಡ ಎಲೈಟ್ ಪೂಲ್ ವಿಭಾಗದ ಅಂಕಪಟ್ಟಿಯಲ್ಲಿ ಗುಜರಾತ್ ಹಾಗೂ ಬಂಗಾಳದ ಬಳಿಕ ಮೂರನೇ ಸ್ಥಾನ ಪಡೆದುಕೊಂಡಿತ್ತು. ತಮಿಳುನಾಡು ಹಾಗೂ ಮುಂಬೈ ವಿರುದ್ಧ ಪ್ರಮುಖ ಪಂದ್ಯಗಳಲ್ಲಿ ಜಯ ಸಾಧಿಸಿದೆ. ಕರ್ನಾಟಕ ಕೊನೆಯ 3 ಪಂದ್ಯಗಳಲ್ಲಿ 2ರಲ್ಲಿ ಜಯ ಸಾಧಿಸಿ ಗೆಲುವಿನ ಹಳಿಗೆ ಬಂದಿತ್ತು.

ಕರ್ನಾಟಕ ತಂಡ ‘ಸಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿರುವ ಜಮ್ಮು-ಕಾಶ್ಮೀರವನ್ನು ಎದುರಿಸಲಿದೆ. ಜಮ್ಮು ತಂಡ ಲೀಗ್ ಹಂತದಲ್ಲಿ ಹರ್ಯಾಣಕ್ಕೆ ಮಾತ್ರ ಸೋತಿತ್ತು. ನಾಯಕ ಪರ್ವೇಝ್ ರಸೂಲ್ 44.77ರ ಸರಾಸರಿಯಲ್ಲಿ 403 ರನ್ ಹಾಗೂ 14.56ರ ಸರಾಸರಿಯಲ್ಲಿ ಒಟ್ಟು 25 ವಿಕೆಟ್‌ಗಳನ್ನು ಪಡೆದು ತಂಡವನ್ನು ಮುಂಚೂಣಿಯಲ್ಲಿ ನಿಂತು ಮುನ್ನಡೆಸಿದ್ದರು. 18ರ ಹರೆಯದ ಯುವ ಮಧ್ಯಮ ಸರದಿಯ ಬ್ಯಾಟ್ಸ್‌ಮನ್ ಅಬ್ದುಲ್ ಸಮದ್ ಒಟ್ಟು 547 ರನ್ ಗಳಿಸಿ ತಂಡದ ಯಶಸ್ಸಿಗೆ ದೊಡ್ಡ ಕೊಡುಗೆ ನೀಡಿದ್ದರು.

 ಇರ್ಫಾನ್ ಪಠಾಣ್ ಸಲಹೆ ಹಾಗೂ ಆಡಳಿತಾತ್ಮಕ ಬದಲಾವಣೆಯಿಂದಾಗಿ ಕಳೆದ ಒಂದು ವರ್ಷದಲ್ಲಿ ಜಮ್ಮು-ಕಾಶ್ಮೀರ ತಂಡ ಸಾಕಷ್ಟು ಸುಧಾರಣೆಯಾಗಿದೆ. ಹರ್ಯಾಣ ವಿರುದ್ಧ ಕಳೆದ ಪಂದ್ಯದಲ್ಲಿ ಜಮ್ಮು ತಂಡದಲ್ಲಿ ಆಡಿದ್ದ 11 ಆಟಗಾರರ ಪೈಕಿ ಆರು ಮಂದಿ ಯುವ ಆಟಗಾರರಾಗಿದ್ದು, 10 ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿದ್ದಾರೆ. ಕಟಕ್‌ನಲ್ಲಿ ನಡೆಯುವ ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ಬಂಗಾಳ ತಂಡ ಒಡಿಶಾವನ್ನು ಎದುರಿಸಲಿದೆ. ಕೊನೆಯ ಎರಡು ಪಂದ್ಯಗಳಲ್ಲಿ ರಾಜಸ್ಥಾನ ಹಾಗೂ ಪಂಜಾಬ್ ವಿರುದ್ಧ ಜಯ ಸಾಧಿಸಿರುವ ಬಂಗಾಳದ ಆತ್ಮವಿಶ್ವಾಸ ಹೆಚ್ಚಾಗಿದೆ. ರಾಜಸ್ಥಾನ ವಿರುದ್ಧ 320 ರನ್ ಚೇಸಿಂಗ್ ಮಾಡಿದ್ದ ಬಂಗಾಳ ಪಟಿಯಾಲದಲ್ಲಿ ಕಡಿಮೆ ಮೊತ್ತದ ಪಂದ್ಯದಲ್ಲಿ ಪಂಜಾಬ್‌ಗೆ ಸೋಲುಣಿಸಿತ್ತು. ಮನೋಜ್ ತಿವಾರಿ ಬ್ಯಾಟಿಂಗ್‌ನಲ್ಲಿ ಮಿಂಚಿದರೆ, ಎಡಗೈ ಸ್ಪಿನ್ನರ್ ಶಾಬಾಹ್ ಅಹ್ಮದ್ ಬೌಲಿಂಗ್‌ನಲ್ಲಿ ಮಿಂಚಿದರು.

ವಲ್ಸಾಡ್‌ನ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ಆತಿಥೇಯ ಗುಜರಾತ್ ತಂಡ ಫೇವರಿಟ್ ಗೋವಾದ ಸವಾಲು ಎದುರಿಸಲಿದೆ. ಎಲೈಟ್ ಕ್ರಾಸ್ ಗುಂಪಿನಲ್ಲಿ 8 ಪಂದ್ಯಗಳಲ್ಲಿ ಐದರಲ್ಲಿ ಜಯ, ಮೂರರಲ್ಲಿ ಡ್ರಾ ಸಾಧಿಸಿರುವ ಗುಜರಾತ್ ಅಂತಿಮ-8ರ ಹಂತ ತಲುಪಿತ್ತು. ಗೋವಾ ತಂಡ ಅಗ್ರ ಸ್ಕೋರರ್ ಅಮಿತ್ ವರ್ಮಾ(791 ರನ್)ಹಾಗೂ ಎಸ್‌ಕೆ ಪಟೇಲ್(751 ರನ್)ಅವರ ಮೇಲೆ ವಿಶ್ವಾಸ ಇಟ್ಟುಕೊಂಡಿದೆ. ಆದರೆ, ಕ್ವಾರ್ಟರ್ ಫೈನಲ್ ಸಂಪೂರ್ಣ ಭಿನ್ನ ಪಂದ್ಯವಾಗಿದ್ದು, ಗೋವಾ ತಂಡ ಈ ತನಕ 30 ವಿಕೆಟ್‌ಗಳನ್ನು ಪಡೆದಿರುವ ರೂಶ್ ಕಲಾರಿಯ ಬೌಲಿಂಗ್ ದಾಳಿ ಎದುರಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News