ಇಂಗ್ಲಿಷ್ ಕೌಂಟಿಯೊಂದಿಗೆ ಚೇತೇಶ್ವರ ಪೂಜಾರ ಒಪ್ಪಂದ

Update: 2020-02-19 18:42 GMT

ಲಂಡನ್, ಫೆ.19: ಭಾರತದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಬುಧವಾರ ಗ್ಲೌಸೆಸ್ಟರ್‌ಶೈರ್ ಕ್ಲಬ್ ಕ್ರಿಕೆಟ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಎಪ್ರಿಲ್ 12ರಿಂದ ಆರಂಭವಾಗಲಿರುವ ಇಂಗ್ಲಿಷ್ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಆರು ಪಂದ್ಯಗಳಲ್ಲಿ ಗ್ಲೌಸೆಸ್ಟರ್‌ಶೈರ್‌ನ್ನು ಪ್ರತಿನಿಧಿಸಲಿದ್ದಾರೆ.

ಪೂಜಾರ ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ಓರ್ವ ಪ್ರಮುಖ ಆಟಗಾರನಾಗಿದ್ದು, ತನ್ನ ಟೆಕ್ನಿಕ್‌ನ ಮೂಲಕ ಬ್ಯಾಟಿಂಗ್ ಸರದಿಗೆ ಬಲ ತುಂಬುತ್ತಿದ್ದಾರೆ. ಪೂಜಾರ ಎಪ್ರಿಲ್ 12ರಿಂದ ಮೇ 22ರ ತನಕ ಗ್ಲೌಸೆಸ್ಟರ್‌ಶೈರ್ ಕ್ಲಬ್ ಪರ ಆಡಲಿದ್ದಾರೆ.

 ‘‘ಈ ಋತುವಿನಲ್ಲಿ ಗ್ಲೌಸೆಸ್ಟರ್‌ಶೈರ್ ಕ್ಲಬ್‌ನ್ನು ಪ್ರತಿನಿಧಿಸುವ ಅವಕಾಶ ಲಭಿಸಿದ್ದಕ್ಕೆ ತುಂಬಾ ಸಂತೋಷವಾಗಿದೆ. ಈ ಕ್ಲಬ್ ಶ್ರೀಮಂತ ಕ್ರಿಕೆಟ್ ಇತಿಹಾಸ ಹೊಂದಿದೆ. ಈ ಕ್ಲಬ್‌ನ ಭಾಗವಾಗುವ ದೊಡ್ಡ ಅವಕಾಶ ನನಗೆ ಲಭಿಸಿದೆ. ಈ ತಂಡದ ಯಶಸ್ಸಿಗೆ ಕಾಣಿಕೆ ನೀಡಲು ಎದುರು ನೋಡುತ್ತಿರುವೆ’’ಎಂದು ಪೂಜಾರ ಪ್ರತಿಕ್ರಿಯಿಸಿದರು.

ಪೂಜಾರ ಈ ಹಿಂದೆ ಇಂಗ್ಲೆಂಡ್‌ನಲ್ಲಿ ನಡೆದ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಡರ್ಬಿಶೈರ್, ಯಾರ್ಕ್ ಶೈರ್ ಹಾಗೂ ನಾಟಿಂಗ್‌ಹ್ಯಾಮ್‌ಶೈರ್ ಪರ ಆಡಿದ್ದರು. ಪೂಜಾರ 2010ರಲ್ಲಿ ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟಿದ್ದರು. 2012ರಲ್ಲಿ ಹೈದರಾಬಾದ್‌ನಲ್ಲಿ ನ್ಯೂಝಿಲ್ಯಾಂಡ್‌ನ ವಿರುದ್ಧ ಮೊದಲ ಅಂತರ್‌ರಾಷ್ಟ್ರೀಯ ಟೆಸ್ಟ್ ಶತಕ ಸಿಡಿಸಿದ್ದರು. ಆ ಪಂದ್ಯದಲ್ಲಿ ಅವರು 159 ರನ್ ಗಳಿಸಿದ್ದರು.

ಪೂಜಾರ 1995ರ ಬಳಿಕ ಗ್ಲೌಸೆಸ್ಟರ್‌ಶೈರ್ ಪರ ಆಡುತ್ತಿರುವ ಭಾರತದ ಮೊದಲ ಆಟಗಾರ. ಈ ಹಿಂದೆ ಜಾವಗಲ್ ಶ್ರೀನಾಥ್ ಈ ಕ್ಲಬ್‌ನ ಪರ ಆಡಿದ್ದರು. ಶ್ರೀನಾಥ್ ಒಂದೇ ಋತುವಿನಲ್ಲಿ 87 ವಿಕೆಟ್‌ಗಳನ್ನು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News