×
Ad

ಕಳ್ಳತನ ಆರೋಪದಲ್ಲಿ ದಲಿತ ಯುವಕರ ಬಟ್ಟೆ ಬಿಚ್ಚಿ ಹಲ್ಲೆ: ಖಾಸಗಿ ಭಾಗಕ್ಕೆ ಸ್ಕ್ರೂ ಡ್ರೈವರ್ ನಿಂದ ತಿವಿದ ದುಷ್ಕರ್ಮಿಗಳು

Update: 2020-02-20 14:54 IST

ಜೈಪುರ್: ವಾಹನ ಸರ್ವಿಸ್ ಕೇಂದ್ರಕ್ಕೆ ಹೋಗಿದ್ದ ಇಬ್ಬರು ದಲಿತ ಯುವಕರ ಮೇಲೆ ಕಳ್ಳತನ ಆರೋಪ ಹೊರಿಸಿ ದುಷ್ಕರ್ಮಿಗಳು ಅವರಿಗೆ ಚಿತ್ರಹಿಂಸೆ ನೀಡಿದ ಘಟನೆಯ ವೀಡಿಯೋ ವೈರಲ್ ಆಗಿದೆ. ಘಟನೆಯು ರಾಜಸ್ಥಾನದ ನಗೌರ್ ಎಂಬಲ್ಲಿನ ಕರ್ನು ಪ್ರದೇಶದಲ್ಲಿ ನಡೆದಿದ್ದು, ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಿಸುವಂತೆ ದುಷ್ಕರ್ಮಿಯೊಬ್ಬ ಸಂತ್ರಸ್ತನನ್ನು ವಿವಸ್ತ್ರಗೊಳಿಸಿ ಆತನ ಗುದದ್ವಾರಕ್ಕೆ ಪೆಟ್ರೋಲ್‍ ನಲ್ಲಿ ಅದ್ದಿ ತೆಗೆದ ಸ್ಕ್ರೂಡ್ರೈವರ್ ನಿಂದ ತಿವಿದಿದ್ದಾನೆ.

ಪಚೌರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಫೆಬ್ರವರಿ 16ರಂದು ನಡೆದಿದೆಯೆನ್ನಲಾಗಿದ್ದು ವೀಡಿಯೋ ವೈರಲ್ ಆದ ನಂತರ ಬುಧವಾರ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

ಇಬ್ಬರು ಯುವಕರು ತಮ್ಮ ವಾಹನ ಸರ್ವಿಸಿಂಗ್‍ಗೆ ಹೋಗಿದ್ದರೆ ಅಲ್ಲಿಂದ ಹಣ ಕದ್ದ ಆರೋಪ ಹೊರಿಸಿ ಅವರಿಗೆ ಹಲ್ಲೆಯನ್ನೂ ನಡೆಸಲಾಗಿದೆ.

ಈ ಪ್ರಕರಣವನ್ನು ರಾಜಿಯಲ್ಲಿ ಮುಗಿಸಲಾಗಿತ್ತು. ಆದರೆ ಹಲ್ಲೆಯ ವೀಡಿಯೊ ದೃಶ್ಯ ವೈರಲ್ ಆದ ಬಳಿಕ ದೂರು ಸಲ್ಲಿಸಲಾಗಿದ್ದು ಎಫ್‌ಐಆರ್ ದಾಖಲಿಸಿಕೊಂಡಿದ್ದೇವೆ. ಇದೊಂದು ಗುಂಪು ಹಲ್ಲೆಯ ಘಟನೆಯಾಗಿದೆ. ಕೋಪದ ಭರದಲ್ಲಿ ಈ ರೀತಿ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪಂಚೌಡಿ ಠಾಣಾಧಿಕಾರಿ ರಾಜಪಾಲ್ ಸಿಂಗ್ ಹೇಳಿದ್ದಾರೆ.

 ಬಂಧಿತ ಆರೋಪಿಗಳನ್ನು ಭೀವ್ ಸಿಂಗ್, ಲಕ್ಷ್ಮಣ್ ಸಿಂಗ್, ಜಸು ಸಿಂಗ್, ಸವಾಯ್ ಸಿಂಗ್, ಹರ್ಮಾ ಸಿಂಗ್ ಮತ್ತು ಗಣಪತ್ ಸಿಂಗ್ ಎಂದು ಗುರುತಿಸಲಾಗಿದ್ದು ಇವರ ವಿರುದ್ಧ ಐಪಿಸಿ ಮತ್ತು ದಲಿತ ದೌರ್ಜನ್ಯ ತಡೆ ಕಾಯ್ದೆಯನ್ವಯ ಪ್ರಕರಣ ದಾಖಲಿಸಲಾಗಿದೆ. ಗಾಯಗೊಂಡ ಯುವಕರು ಈಗ ಚೇತರಿಸಿಕೊಂಡಿದ್ದಾರೆ ಎಂದು ಪೊಲೀಸ್ ಅಧೀಕ್ಷಕರು ಹೇಳಿದ್ದಾರೆ. ಇದು ಮಾನವೀಯತೆಯನ್ನೇ ನಾಚಿಸುವ ಕೃತ್ಯವಾಗಿದ್ದು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಹನುಮಾನ್ ಬೆನಿವಾಲ್ ಹೇಳಿದ್ದಾರೆ.

ಘಟನೆಯನ್ನು ಖಂಡಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಈ ಭಯಾನಕ ಮತ್ತು ಹೇಯ ಕೃತ್ಯ ಎಸಗಿರುವ ದುಷ್ಕರ್ಮಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಕಾಂಗ್ರೆಸ್‌ನ ಪರಿಶಿಷ್ಟ ಜಾತಿ ಘಟಕವೂ ಘಟನೆಯನ್ನು ಖಂಡಿಸಿದೆ.

ಎಫ್‍ಐಆರ್‍ ನಲ್ಲಿ ಏಳು ಮಂದಿಯ ಹೆಸರು ನೀಡಲಾಗಿದ್ದು ಅದರಲ್ಲಿ ಐವರನ್ನು ಬಂಧಿಸಲಾಗಿದೆ. ಈ ಘಟನೆ ಕುರಿತಂತೆ ಕಠಿಣ ಕ್ರಮ ಕೈಗೊಳ್ಳುವಂತೆ  ರಾಜಸ್ಥಾನದ ಕಾಂಗ್ರೆಸ್ ಸರಕಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪುಣಿಯಾ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News