3,000 ಕೋ.ರೂ. ವೆಚ್ಚದಲ್ಲಿ 50 ಕೋಟಿ ಸಸಿ ನೆಟ್ಟಿದ್ದೇವೆ ಎಂದಿದ್ದ ಬಿಜೆಪಿ ಸರಕಾರ: ತನಿಖೆಗೆ ಆದೇಶಿಸಿದ ಉದ್ಧವ್

Update: 2020-02-20 11:28 GMT

ಮುಂಬೈ: ತನ್ನ ಆಡಳಿತಾವಧಿಯಲ್ಲಿ ರಾಜ್ಯಾದ್ಯಂತ 3,000 ಕೋಟಿ ರೂ. ವೆಚ್ಚದಲ್ಲಿ 50 ಕೋಟಿ ಮರಗಳನ್ನು ನೆಡಲಾಗಿದೆ ಎಂಬ ಹಿಂದಿನ ಬಿಜೆಪಿ ಸರಕಾರದ ಹೇಳಿಕೆಯನ್ನು ದೃಢೀಕರಿಸಲು ಮಹಾರಾಷ್ಟ್ರ ಅರಣ್ಯ ಇಲಾಖೆಯು ಸರಕಾರದ ನಿರ್ದೇಶನದನ್ವಯ ತನಿಖೆ ನಡೆಸಲಿದೆ.

ಹಿಂದಿನ ಫಡ್ನವೀಸ್ ಸರಕಾರ 2016ರಲ್ಲಿ ಹರಿತ್ ಮಹಾರಾಷ್ಟ್ರ (ಹಸಿರು ಮಹಾರಾಷ್ಟ್ರ) ಅರಣ್ಯೀಕರಣ ಯೋಜನೆಯನ್ನು ಆರಂಭಿಸಿತ್ತು. ನಾಲ್ಕು ವರ್ಷಗಳಲ್ಲಿ 50 ಕೋಟಿ ಗಿಡಗಳನ್ನು ನೆಡುವ ಗುರಿ ಈ ಯೋಜನೆಯದ್ದಾಗಿತ್ತು. ಆಗಿನ ಅರಣ್ಯ ಸಚಿವ  ಸುಧೀರ್ ಮುಂಗಂತಿವರ್ ಅವರ ನೇತೃತ್ವದಲ್ಲಿ ಜಾರಿಯಾದ ಈ ಯೋಜನೆಯ ಬ್ರಾಂಡ್ ಅಂಬಾಸಿಡರ್ ಆಗಿ ಹಿರಿಯ ನಟ ಅಮಿತಾಭ್ ಬಚ್ಚನ್ ಇದ್ದರು.

ಆದರೆ ಈ ಯೋಜನೆಯಡಿ ಎಲ್ಲೆಲ್ಲಾ ಗಿಡಗಳನ್ನು ನೆಡಲಾಗಿದೆ ಎಂದು ತನಿಖೆ ನಡೆಸಲು ಈಗಿನ ಉದ್ಧವ್ ಠಾಕ್ರೆ ನೇತೃತ್ವದ ಮೈತ್ರಿ ಸರಕಾರ ಉಪಗ್ರಹ ಚಿತ್ರಗಳನ್ನು ಬಳಸಲಿದೆ.

ಈ ಯೋಜನೆಯಡಿ ನಿಜವಾಗಿಯೂ ನೆಡಲಾದ ಗಿಡಗಳ ಸಂಖ್ಯೆಯ ಕುರಿತಂತೆ ಕೆಲ ಹಾಲಿ ಹಾಗೂ ಮಾಜಿ ಸಚಿವರುಗಳಿಂದ ಬಂದ ದೂರಿನನ್ವಯ ತನಿಖೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಅರಣ್ಯ ಸಚಿವ ಸಂಜಯ್ ರಾಥೋಡ್ ಹೇಳಿದ್ದಾರೆ. ಈ ಯೋಜನೆಯಡಿ ಎಷ್ಟು ಹಣ ವ್ಯಯಿಸಲಾಗಿದೆ ಎಂದೂ ತಿಳಿಯಲು ಸರಕಾರ ಮನಸ್ಸು ಮಾಡಿದೆ.

ಮಾಜಿ ಅರಣ್ಯ ಸಚಿವ ಮುಂಗಂತಿವರ್ ಈಗಿನ ಸರಕಾರ ತನಿಖೆ ನಡೆಸಲು ತೀರ್ಮಾನಿಸಿರುವುದನ್ನು ಸ್ವಾಗತಿಸಿದರಾದರೂ ಶ್ವೇತಪತ್ರ ಹೊರತರಬೇಕೆಂದು ಸಲಹೆ ನೀಡಿದ್ದಾರೆ. ತನಿಖೆಯನ್ನು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ಮುಖಾಂತರ ನಡೆಸಬೇಕೆಂದೂ ಆವರು ಆಗ್ರಹಿಸಿದ್ದಾರೆ.

ಹಿಂದಿನ ಫಡ್ನವೀಸ್ ಸರಕಾರದ ಅಂಕಿಅಂಶಗಳಂತೆ ಮೊದಲ ವರ್ಷದಲ್ಲಿ 2 ಕೋಟಿ ಸಸಿ ನೆಡುವ ಗುರಿಯಿದ್ದರೆ, 2.82 ಕೋಟಿ ಸಸಿಗಳನ್ನು ನೆಡಲಾಗಿತ್ತು. ಎರಡನೇ ವರ್ಷದಲ್ಲಿ 4 ಕೋಟಿ ಗುರಿ ನಿಗದಿಯಾಗಿದ್ದರೆ 5.17 ಕೋಟಿ ಸಸಿಗಳನ್ನು ಹಾಗೂ 2018ರಲ್ಲಿ 15.17 ಕೋಟಿ ಸಸಿಗಳನ್ನು ನೆಡಲಾಗಿತ್ತೆಂದು ಸರಕಾರಿ ದಾಖಲೆಗಳು ತಿಳಿಸುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News